ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಗೃಹ ಸಚಿವರಿಗೆ ತಮ್ಮ ಪಕ್ಷದಲ್ಲಿರುವ ಮಾಹಿತಿ ಪಡೆಯಲು ಆಗದಿದ್ದರೆ ಜನರಿಗೆ ಹೇಗೆ ರಕ್ಷಣೆ ನೀಡುತ್ತಾರೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ನಗರದ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಕಾಂಗ್ರೆಸ್ ಹೇಳುತ್ತಲೇ ಬಂದಿದೆ. ಆದರೆ, ಮುಖ್ಯಮಂತ್ರಿಗಳು, ಗೃಹ ಸಚಿವರು, ಬಿಜೆಪಿ ಮಂತ್ರಿಗಳು ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ ಎಂದು ಸರ್ಕಾರವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಇಂದು ಬಿಜೆಪಿಯ ಕಾರ್ಯಕರ್ತರು ಗೃಹ ಸಚಿವರ ನಿವಾಸಕ್ಕೆ ಮುತ್ತಿಗೆ ಹಾಕಿ, ಗೇಟ್ ದಾಟಿ ನುಗ್ಗಿ ಪ್ರತಿಭಟನೆ ನಡೆಸುತ್ತಾರೆ ಎಂದರೆ ಕಾನೂನು ಸುವ್ಯವಸ್ಥೆ ಎಷ್ಟು ಹದಗೆಟ್ಟಿದೆ?. ಇವರು ಗುಪ್ತಚರ ಇಲಾಖೆ ಮಾಹಿತಿ ಎಷ್ಟು ಪಡೆಯುತ್ತದೆ ಎಂಬುದು ತಿಳಿಯುತ್ತದೆ ಎಂದು ಟೀಕಿಸಿದರು.
ಗೃಹ ಸಚಿವರ ಮನೆ ಬಳಿ ಹಾದಿ ಬೀದಿಯಲ್ಲಿ ಹೋಗುವವರು ಪ್ರತಿಭಟನೆ ಮಾಡಿಲ್ಲ. ಬಿಜೆಪಿಯ ವಿದ್ಯಾರ್ಥಿ ಸಂಘಟನೆಯವರೇ ಗೃಹ ಸಚಿವರ ಕಚೇರಿಗೆ ನುಗ್ಗಿ ದಾಳಿ ಮಾಡಿದ್ದಾರೆ. ಗೃಹ ಸಚಿವರಿಗೆ ತಮ್ಮ ಪಕ್ಷದಲ್ಲಿರುವ ಮಾಹಿತಿ ಪಡೆಯಲು ಆಗದಿದ್ದರೆ ಜನರಿಗೆ ಹೇಗೆ ರಕ್ಷಣೆ ನೀಡುತ್ತಾರೆ. ಅವರ ಕಚೇರಿಗೆ ರಕ್ಷಣೆ ಇಲ್ಲ ಎಂದರೆ ಸಾರ್ವಜನಿಕರ ಸ್ಥಿತಿ ಏನು ಎಂದು ಹರಿಹಾಯ್ದರು.
ಸಿಎಂ, ಗೃಹ ಸಚಿವರು ರಾಜೀನಾಮೆ ಕೊಡಲಿ: ಈ ಬಿಜೆಪಿ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದ್ದು, ಮುಖ್ಯಮಂತ್ರಿಗಳು, ಗೃಹ ಸಚಿವರು ರಾಜೀನಾಮೆ ನೀಡಬೇಕು. ಮೊನ್ನೆ ಮಂಗಳೂರು, ಇಂದು ಬೆಂಗಳೂರಲ್ಲಿ ಇಂತಹ ಘಟನೆಗಳು ನಡೆದಿವೆ. ಬಿಜೆಪಿ ಸಂಸದರು ಎಲ್ಲರಿಗೂ ಭದ್ರತೆ ನೀಡಲು ಆಗುವುದಿಲ್ಲ ಎಂದು ಹೇಳಿದ್ದಾರೆ. ಆದರೆ, ಇಂದು ಹೇಗೆ ಬಿಜೆಪಿ ಕಚೇರಿಗಳಿಗೆ ಭದ್ರತೆ ಒದಗಿಸಿದ್ದಾರೆ ಎಂದು ಕಿಡಿಕಾರಿದರು.
ಸರ್ಕಾರ ಮೊದಲು ತಮ್ಮ ಕಾರ್ಯಕರ್ತರನ್ನು ನಿಯಂತ್ರಿಸಲಿ. ತೇಜಸ್ವಿ ಸೂರ್ಯ ಎಲ್ಲರಿಗೂ ಭದ್ರತೆ ನೀಡಲು ಆಗುವುದಿಲ್ಲ ಎಂದಾದರೆ ಅವರು ಹೇಗೆ ಭದ್ರತೆ ಪಡೆದಿದ್ದಾರೆ?. ಅವರು ಹೇಳಿದ್ದು ಸರಿಯಾಗಿದ್ದರೆ, ಬಿಜೆಪಿ ಯುವ ಮೋರ್ಚಾ ಸದಸ್ಯರು ಅವರ ರಾಷ್ಟ್ರೀಯ ಅಧ್ಯಕ್ಷರ ಮಾತು ಕೇಳುತ್ತಿಲ್ಲ. ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ನೀವು ಕಾರ್ಯಕರ್ತರನ್ನು ಯಾವ ಮಟ್ಟಿಗೆ ದುರುಪಯೋಗ ಮಾಡಿಕೊಂಡಿದ್ದೀರಿ ಎಂಬುದಕ್ಕೆ ಇದೇ ಸಾಕ್ಷಿ ಎಂದು ವಾಗ್ದಾಳಿ ನಡೆಸಿದರು.
ಪರಿಸ್ಥಿತಿ ಕೈ ಮೀರಲು ತತ್ವ ಸಿದ್ಧಾಂತ ಕಾರಣ. ಈಗಲಾದರೂ ಸರ್ಕಾರ ಎಚ್ಚೆತ್ತು, ಕರ್ನಾಟಕ ರಾಜ್ಯವನ್ನು ಈ ಹಿಂದಿನಂತೆ ಉದ್ಯೋಗ ಸೃಷ್ಟಿಯಲ್ಲಿ ನಂ.1 ಸ್ಥಾನಕ್ಕೆ ತರಬೇಕು. ರಾಜಕೀಯಕ್ಕೆ ಕೋಮು ವಿಷ ಬೀಜ ಬಿತ್ತುವುದನ್ನು ಬಿಟ್ಟು ರಾಜ್ಯವನ್ನು ಶಾಂತಿ ತೋಟವನ್ನಾಗಿ ಮಾಡಿ. ಜನರ ಮೇಲೆ ಗಮನಹರಿಸಿ ಎಂದರು.
ಗುಪ್ತಚರ ಇಲಾಖೆ ವಿರುದ್ಧ ಕಿಡಿ: ಎಬಿವಿಪಿ ಹೆಸರಲ್ಲಿ ಪ್ರತಿಭಟನೆ ಆಗುತ್ತಿದೆ ಎಂಬ ಬಿಜೆಪಿ ನಾಯಕರ ಮಾತಿನ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರಿಯಾಂಕ್, ಗೃಹ ಸಚಿವರ ಕಚೇರಿಗೆ ಜನ ನುಗ್ಗಿದ್ದು, ಗುಪ್ತಚರ ಇಲಾಖೆ ಏನು ಮಾಡುತ್ತಿದೆ?. ಪೊಲೀಸ್ ಅಧಿಕಾರಿಗಳು ಏನು ಮಾಡುತ್ತಿದ್ದಾರೆ?. ಇದು ಯಾವುದೋ ಸಣ್ಣ ಕಚೇರಿ ಮೇಲಿನ ದಾಳಿಯಾ?, ಬಿಜೆಪಿಯವರು ಮೈ ಮೇಲೆ ಪ್ರಜ್ಞೆ ಇಟ್ಟುಕೊಂಡು ಮಾತನಾಡಲಿ. ಗೃಹ ಸಚಿವ ಕಚೇರಿಗೆ ಇಷ್ಟೇನಾ ಭದ್ರತೆ?. ಎಬಿವಿಪಿ ಹೆಸರಲ್ಲಿ ಮಾಡಿರುವುದೇ ಆದರೆ ಇದು ಗುಪ್ತಚರ ಇಲಾಖೆ ವೈಫಲ್ಯ ಅಲ್ಲವೇ?. ಮುಖ್ಯಮಂತ್ರಿಗಳು ಇದನ್ನು ಸಂಘಟಿತ ಅಪರಾಧ ಎನ್ನುತ್ತಾರೆ. ಹಾಗಾದರೆ ಗುಪ್ತಚರ ಇಲಾಖೆ ಕೆಲಸ ಏನು? ಇದು ಸರ್ಕಾರದ ವೈಫಲ್ಯ ಅಲ್ಲವೇ? ಎಂದು ಮರು ಪ್ರಶ್ನಿಸಿದರು.
ವೈಫಲ್ಯ ಮುಚ್ಚಿಕೊಳ್ಳಲು ಕಾಂಗ್ರೆಸ್ ಮೇಲೆ ಗೂಬೆ: ಈ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಲಾಭ ಮಾಡುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಅದು ಹೇಗೆ ಎಂದು ಬಿಜೆಪಿಯವರೇ ಸ್ಪಷ್ಟಪಡಿಸಲಿ. ಶಿವಮೊಗ್ಗದಲ್ಲಿ ಹರ್ಷ ಕೊಲೆ ಆದಾಗ ಬಿಜೆಪಿ ಸಚಿವರು, ಸಂಸದರು ಸೆಕ್ಷನ್ 144 ಉಲ್ಲಂಘನೆ ಮಾಡಿದ್ದರು. ಆಳಂದದಲ್ಲಿ ಬಿಜೆಪಿ ಸಂಸದರು ರಾಜಕೀಯ ಲಾಭಕ್ಕೆ ಸೆಕ್ಷನ್ 144 ಉಲ್ಲಂಘನೆ ಮಾಡಿದ್ದರು. ನಾವು ಎಲ್ಲಿ ರಾಜಕೀಯ ಮಾಡುತ್ತಿದ್ದೇವೆ?. ಶಿವಮೊಗ್ಗದಲ್ಲಿ ಹರ್ಷನಿಗಾಗಿ ಈಶ್ವರಪ್ಪ ಮೆರವಣಿಗೆ ಮಾಡಿದ್ದರು. ಈಗ ಪ್ರವೀಣ್ ಮೇಲೆ ಯಾಕೆ ಕನಿಕರ ಇಲ್ಲ. ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಕಾಂಗ್ರೆಸ್ ಮೇಲೆ ಗೂಬೇ ಕೂರಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ನಾವು ಒಂದು ಬಾರಿ ಪ್ರಚೋದನಕಾರಿ ಹೇಳಿಕೆ ನೀಡಿದ್ದೇವೆ?. ಇವರು ಬಿತ್ತಿದ ವಿಷ ಬೀಜ ಈಗ ಹೆಮ್ಮರವಾಗಿ ಬೆಳೆದಿದ್ದು, ಈಗ ಇವರಿಗೆ ನಿಯಂತ್ರಿಸಲು ಆಗುತ್ತಿಲ್ಲ. ಇವರ ಬೆಂಬಲದ ಮೇಲೆ ನಿಂತಿರುವ ಸಂಘಟನೆಗಳು ಇವರ ವಿರುದ್ಧ ಪ್ರತಿಭಟನೆ ಮಾಡುತ್ತಿವೆ. ಕಾಂಗ್ರೆಸ್ನವರಲ್ಲ. ಕಟೀಲ್ ಅವರ ಗಾಡಿ ಅಲ್ಲಾಡಿಸಿದ್ದು, ಸಚಿವ ಸುನೀಲ್ ಹಾಗೂ ಅಂಗಾರ ಅವರಿಗೆ ದಿಗ್ಬಂಧನ ಹಾಕಿದ್ದು ಯಾರು? ಕಾಂಗ್ರೆಸ್ನವರಾ?, ಜವಾಬ್ದಾರಿ ಸ್ಥಾನಮಾನದಲ್ಲಿ ಇದ್ದವರು ಸುಮ್ಮನೆ ಉಡಾಫೆಯಾಗಿ ಮಾತನಾಡಲು ನಾಚಿಕೆ ಆಗಬೇಕು ಎಂದು ಹರಿಹಾಯ್ದರು.
ಜನಪ್ರತಿನಿಧಿಗಳು ಅಂದಮೇಲೆ ಎಲ್ಲರೂ ಕೋಮುವಾದ ಬಿಟ್ಟು ಕೆಲಸ ಮಾಡಬೇಕಲ್ಲವೇ ಎಂಬ ಪ್ರಶ್ನೆಗೆ, ಹರ್ಷ ಸೇರಿದಂತೆ ಬೇರೆ ಹತ್ಯೆ ಆದಾಗ ಕಾನೂನು ಅಡಿಯಲ್ಲಿ ಏನೆಲ್ಲಾ ಮಾಡಬಹುದೋ ಅದನ್ನು ಮಾಡಿದ್ದೇವೆ. ಯಾರಿಗೂ ಪ್ರಚೋದನೆ ನೀಡಿಲ್ಲ. ಸಮುದಾಯಗಳ ಮಧ್ಯೆ ಅಸೂಯೆ ತಂದಿಲ್ಲ. ಇದನ್ನು ಕಾಂಗ್ರೆಸ್ ಈ ಹಿಂದೆಯೂ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ. ಯಾರು ಯಾವಾಗ ರಾಜಕೀಯ ಲಾಭ ತೆಗೆದುಕೊಂಡಿದ್ದಾರೆ ಎಂದು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಜಗಳ ಹಚ್ಚಿ ರಾಜಕೀಯ ಲಾಭ ಪಡೆಯುವ ವಿಚಾರದಲ್ಲಿ ಬಿಜೆಪಿಗೆ ಇತಿಹಾಸವಿದೆ. ಅದೇ ಇಂದು ನಿಮಗೆ ತಿರುಗುಬಾಣ ಆಗಿದ್ದು, ಅದನ್ನು ಅರಗಿಸಿಕೊಳ್ಳಲು ನಿಮ್ಮಿಂದ ಆಗುತ್ತಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ಗೃಹ ಸಚಿವರ ನಿವಾಸಕ್ಕೆ ಎಬಿವಿಪಿ ಮುತ್ತಿಗೆ: ಗುಪ್ತಚರ ಇಲಾಖೆ ವೈಫಲ್ಯವನ್ನು ಪರೋಕ್ಷವಾಗಿ ಒಪ್ಪಿಕೊಂಡ ಪೊಲೀಸ್ ಕಮಿಷನರ್