ಬೆಂಗಳೂರು: ಸಾಮಾನ್ಯ ವರ್ಗದಿಂದ ಗ್ರಾಮ ಪಂಚಾಯತ್ ಸದಸ್ಯರಾಗಿ ಆಯ್ಕೆಯಾದ ವ್ಯಕ್ತಿ, ಸರ್ಕಾರ ಮೀಸಲು ನಿಗದಿ ಪಡಿಸಿದ ಜಾತಿಗೆ ಸೇರಿದ್ದಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲು ಅಡಿ ಸ್ಪರ್ಧೆ ಮಾಡಬಹುದು ಎಂದು ಹೈಕೋರ್ಟ್ ತಿಳಿಸಿದೆ. ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಕುನ್ನಲ ಗ್ರಾಮ ಪಂಚಾಯತ್ ಸದಸ್ಯೆ ಚೈತ್ರಾ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದ ರಾಜು ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ 1993ರ ಸೆಕ್ಷನ್ 5ರ ಅಡಿಯಲ್ಲಿ ಮೀಸಲು ನೀಡುವುದಕ್ಕೆ ಅವಕಾಶವಿದೆ. ಈ ಕಾಯ್ದೆಯ ಸೆಕ್ಷನ್ 44 ವಿಭಿನ್ನವಾಗಿದೆ. ಸೆಕ್ಷನ್ 5ರ ಅಡಿ ಸಾಮಾನ್ಯ ವರ್ಗದಲ್ಲಿ ಸದಸ್ಯ ಸ್ಥಾನಕ್ಕೆ ಸ್ಪರ್ಧೆ ಮಾಡಿ ಸೆಕ್ಷನ್ 44ರ ಅಡಿ ಮೀಸಲು ವರ್ಗದಿಂದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುವುದಕ್ಕೆ ಅಡ್ಡಿಯಾಗುವುದಿಲ್ಲ ಎಂದು ಪೀಠ ತಿಳಿಸಿದೆ.
ಅಲ್ಲದೆ, ಗ್ರಾಮ ಪಂಚಾಯತ್ ಕಾಯ್ದೆ ಸೆಕ್ಷನ್ 5ರ ಅಡಿ ಸದಸ್ಯರ ಆಯ್ಕೆಗೆ ಒದಗಿಸಲಾದ ಮೀಸಲಾತಿಯು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವವರಿಗೆ ಪರಿಗಣನೆಗೆ ಬರುವುದಿಲ್ಲ. ಅಲ್ಲದೇ, ಸೆಕ್ಷನ್ 44ರ ಅಡಿಯಲ್ಲಿ ಉಲ್ಲೇಖಿಸಿರುವಂತೆ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮೀಸಲಿಟ್ಟ ಹುದ್ದೆಗಳಿಗೆ ಅರ್ಹರು ಇಲ್ಲದಿದ್ದಲ್ಲಿ ಜನಸಂಖ್ಯಾ ಆಧಾರದಲ್ಲಿ ಮೀಸಲು ಹುದ್ದೆಗಳನ್ನು ಇತರ ಜನಾಂಗದವರಿಗೆ ನೀಡಬಹುದಾಗಿದೆ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಅದೇ ರೀತಿಯಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿಗೆ ಸಬಂಧಿಸಿದಂತೆ ಜನ ಸಂಖ್ಯೆಗೆ ಅನುಗುಣವಾಗಿ ಅಧ್ಯಕ್ಷ ಉಪಾಧ್ಯಕ್ಷ ಹುದ್ದೆಗಳನ್ನು ಭರ್ತಿ ಮಾಡಬಹುದಾಗಿದೆ. ಆದ್ದರಿಂದ ಸಾಮಾನ್ಯ ವರ್ಗದಿಂದ ಸದಸ್ಯರಾದರೂ ಮೀಸಲು ವರ್ಗದಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ನಿಲ್ಲಬಹುದಾಗಿದೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಜತೆಗೆ, ಪ್ರತಿವಾದಿ ಆಶಾಮಣಿ ಅವರಿಗೆ ತಹಶೀಲ್ದಾರ್ ಅವರು ನೀಡಿರುವ ಜಾತಿ ಪ್ರಮಾಣಪತ್ರಕ್ಕೆ ಸಂಬಂಧಿಸಿದಂತೆ ಜಾತಿ ಪರಿಶೀಲನಾ ಸಮಿತಿಗೆ ವಹಿಸಿದ್ದು, ಮುಂದಿನ 45 ದಿನಗಳಲ್ಲಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.
ಪ್ರಕರಣದ ಹಿನ್ನೆಲೆ ಏನು?: ಕುನ್ನಲ ಗ್ರಾಮ ಪಂಚಾಯತ್‌ಗೆ ಹಿದುಳಿದ ವರ್ಗ- ಬಿ (ಮಹಿಳೆ)ಗೆ ಮೀಸಲು ನಿಗದಿ ಪಡಿಸಲಾಗಿತ್ತು. ಈ ಹುದ್ದೆಗೆ ಹಿಂದುಳಿದ ವರ್ಗ ಕೆಟಗಿರಿ - ಬಿಗೆ ಸೇರಿದ್ದ ಅರ್ಜಿದಾರರು ಅಧ್ಯಕ್ಷ ಮತ್ತು ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದರು. ಆದರೆ, ಸಾಮಾನ್ಯ ವರ್ಗದಿಂದ ಸದಸ್ಯರಾಗಿ ಆಯ್ಕೆಯಾಗಿದ್ದ ಹಿಂದುಳಿದ ವರ್ಗಗಳಿಗೆ ಸೇರಿ ಕೆ.ಎಂ. ಆಶಾಮಣಿ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು.
ಆಶಾಮಣಿ ಸಾಮಾನ್ಯ ವರ್ಗದಿಂದ ಸದಸ್ಯರಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ಮೀಸಲು ಸೌಲಭ್ಯವನ್ನು ಪಡೆದುಕೊಳ್ಳುವುದಕ್ಕೆ ಮುಂದಾಗಿದ್ದಾರೆ. ಇದಕ್ಕೆ ಅವಕಾಶ ನೀಡದಂತೆ ನಿರ್ದೇಶನ ನೀಡಬೇಕು ಎಂದು ಕೋರಿ ಚೈತ್ರಾ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದರು. ಮನವಿ ಸ್ವೀಕರಿಸಿದ್ದ ಜಿಲ್ಲಾಧಿಕಾರಿ, ಅಶಾಮಣಿಯವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಸಂದರ್ಭದಲ್ಲಿ ಮೀಸಲಾತಿ ಬದಲಿಸಲಾಗದು ಎಂದು ತಿಳಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಅವಕಾಶವನ್ನು ನಿರಾಕರಿಸಿದ್ದರು. ಇದನ್ನು ಆಶಾಮಣಿ ಅವರು ಜಿಲ್ಲಾಧಿಕಾರಿ ಮುಂದೆ ಪ್ರಶ್ನಿಸಿದ್ದರು. ಬಳಿಕ ಜಿಲ್ಲಾಧಿಕಾರಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಆಶಾಮಣಿಗೆ ಅವಕಾಶ ನೀಡಿದ್ದರು.
ಜೆಲ್ಲಾಧಿಕಾರಿ ಕ್ರಮವನ್ನು ಪ್ರಶ್ನಿಸಿ ಚೈತ್ರಾ ಹೈಕೋರ್ಟ್ ಮೆಟ್ಟಿಲೇರಿದ್ದರು. ಜತೆಗೆ, ಆಶಾಮಣಿಗೆ ಹಿಂದುಳಿದ ವರ್ಗ-ಬಿ ಎಂಬುದಾಗಿ ಜಾತಿ ಪ್ರಮಾಣ ಪತ್ರವನ್ನು ನೀಡಿದ್ದ ತಹಶೀಲ್ದಾರ್ ಕ್ರಮವನ್ನು ಈ ಅರ್ಜಿಯಲ್ಲಿ ಪ್ರಶ್ನಿಸಿದ್ದರು.
ಇದನ್ನೂ ಓದಿ: ಪಿಎಸ್‌ಐ ನೇಮಕಾತಿ ಹಗರಣ: ಮರು ಪರೀಕ್ಷೆ ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್