ಬೆಂಗಳೂರು: ಉಪರಾಷ್ಟ್ರಪತಿ ಮಗನ ಸ್ನೇಹಿತನ ಅಪರಾಧ ಪ್ರಕರಣ ಕುರಿತು, ವಿಚಾರಣೆಯ ನೆಪದಲ್ಲಿ ರಾಜ್ಯ ಹೈಕೋರ್ಟ್ ನ್ಯಾಯಾಧೀಶರ ಆಪ್ತ ಸಹಾಯಕ ಕಚೇರಿಗೆ ಕರೆ ಮಾಡಿ ವಂಚನೆಗೆ ಯತ್ನಿಸಿರುವ ಘಟನೆ ನಡೆದಿದೆ. ಈ ಘಟನೆ ಸಂಬಂಧ ನಗರ ಕೇಂದ್ರ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಲ ದಿನಗಳ ಹಿಂದೆ ಮುಖ್ಯ ನ್ಯಾಯಾಧೀಶರ ಆಪ್ತ ಸಹಾಯಕ ಕಾರ್ಯದರ್ಶಿ ಜಯಕುಮಾರ್ ಎಂಬುವರಿಗೆ ಉಪರಾಷ್ಟ್ರಪತಿ ಕಾರ್ಯದರ್ಶಿ ಐ.ವಿ. ಸುಬ್ಬರಾವ್ ಹೆಸರಿನಲ್ಲಿ ಕರೆ ಮಾಡಿ ಅಪರಾಧ ಪ್ರಕರಣವೊಂದರಲ್ಲಿ ನ್ಯಾಯಾಧೀಶರೊಂದಿಗೆ ಮಾತನಾಡಬೇಕು. ತನ್ನನ್ನು ಸಂಪರ್ಕಿಸುವಂತೆ ಮೊಬೈಲ್ 070138476677 ಮತ್ತು 0701384660 ಹಾಗೂ ದೂರವಾಣಿ 110112264, 01123017210 ನಂಬರ್ ನೀಡಿದ್ದ.
ಈ ಕರೆಗಳನ್ನು ನ್ಯಾಯಾಧೀಶರ ಕಾರ್ಯದರ್ಶಿಗಳು ಪರಿಶೀಲಿಸಿದಾಗ ಅಸಲಿತನ ಬೆಳಕಿಗೆ ಬಂದಿದ್ದು, ಆ ರೀತಿಯ ಯಾವುದೇ ಕರೆಯನ್ನು ಉಪ ರಾಷ್ಟ್ರಪತಿಗಳ ಕಾರ್ಯದರ್ಶಿ ಮಾಡಿಲ್ಲದಿರುವುದು ಗೊತ್ತಾಗಿದೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಧೀಶರು, ಕರೆಯ ಮೂಲ ಪತ್ತೆ ಹಚ್ಚುವಂತೆ ಹೈಕೋರ್ಟ್ ವಿಚಕ್ಷಣಾ ದಳಕ್ಕೆ ಸೂಚಿಸಿದ್ದರು. ವಿಚಾರಣೆ ನಡೆಸಿದ ವಿಚಕ್ಷಣಾ ದಳ, ಹೈಕೋರ್ಟ್ ನ್ಯಾಯಾಧೀಶರ ಕಚೇರಿಗೆ ಆರೋಪಿ ಸುಜನ್ ಇಂಟರ್‌ನೆಟ್ ಕರೆ ಮಾಡಿದ್ದಾನೆ ಎಂದು ವರದಿಯಲ್ಲಿ ಹೇಳಿದೆ.
ಉಪ ರಾಷ್ಟ್ರಪತಿಗಳ ಮಗನ ಸ್ನೇಹಿತನಿಗೆ ಸಂಬಂಧಿಸಿದ ಪ್ರಕರಣವೆಂದು ಉಚ್ಚ ನ್ಯಾಯಾಲಯಕ್ಕೆ ವಂಚಿಸಲು ಆರೋಪಿ ಯತ್ನಿಸಿದ್ದಾನೆ. ಈ ಕೆಲಸಕ್ಕೆ ಸಂವಹನ ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಂಡಿರುವುದು ವಿಚಾರಣೆಯಲ್ಲಿ ಸಾಬೀತಾಗಿದೆ.
ಕೃತ್ಯ ಎಸಗಿರುವ ಸುಜನ್ ಎಂಬಾತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಹೈಕೋರ್ಟ್ ವಿಚಕ್ಷಣಾ ದಳದ ಎಸಿಪಿ ಪ್ರೇಮಸಾಯಿ ಗುಡ್ಡಪ್ಪ ರೈ ನೀಡಿದ ದೂರು ನೀಡಿದನ್ವಯ ಎಫ್‌ಐಆರ್ ದಾಖಲಿಸಿಕೊಂಡು ಸೈಬರ್ ಕ್ರೈಂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.