ಬೆಂಗಳೂರು: ಸಚಿವ ಸಂಪುಟದಲ್ಲಿ ತೆಗೆದುಕೊಳ್ಳಲಾಗುವ ನಿರ್ಣಯಗಳನ್ನು ಶೀಘ್ರವಾಗಿ ಅನುಷ್ಠಾನಗೊಳಿಸುವಂತೆ ಎಲ್ಲಾ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಸೂಚಿಸಿದ್ದಾರೆ.
ಕರ್ನಾಟಕ ಸರ್ಕಾರ (ವ್ಯವಹಾರ ನಿರ್ವಹಣೆ) ನಿಯಮಗಳು, 1977ರ ನಿಯಮ 20ರಂತೆ ಆಡಳಿತ ಇಲಾಖೆಗಳಿಂದ ಸಚಿವ ಸಂಪುಟಕ್ಕೆ ಪ್ರಸ್ತಾವನೆಗಳನ್ನು ಮಂಡಿಸಲಾಗುತ್ತಿದೆ. ಪ್ರಸ್ತಾವನೆ ಸಂಬಂಧ ಸಚಿವ ಸಂಪುಟ ನಿರ್ಣಯಗಳನ್ನು ತೆಗೆದುಕೊಂಡ ನಂತರ ಅದನ್ನು ಜಾರಿಗೊಳಿಸುವ ಜವಾಬ್ದಾರಿ ಸಂಬಂಧಿಸಿದ ಇಲಾಖೆಯ ಕಾರ್ಯದರ್ಶಿಯದ್ದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಆಂಬ್ಯುಲೆನ್ಸ್ ಖರೀದಿ, ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನಕ್ಕೆ ಭೂಮಿ ನೀಡಲು ಸಂಪುಟ ಅಸ್ತು
ಸಚಿವ ಸಂಪುಟ ನಿರ್ಣಯ ಆದೇಶ/ಅಧಿಸೂಚನೆಗಳನ್ನು ತಡವಾಗಿ ಹೊರಡಿಸಲಾಗುತ್ತಿದೆ ಎಂಬುದನ್ನು ಗಮನಿಸಲಾಗಿದೆ. ನಿಯಮ 26ರಂತೆ ಸಂಬಂಧಿಸಿದ ಇಲಾಖೆಗಳು ಕೂಡಲೇ ಜಾರಿಗೊಳಿಸಬೇಕು. ಆದೇಶದ ಕೊನೆಯಲ್ಲಿ ಸಚಿವ ಸಂಪುಟದ ಪ್ರಕರಣ ಸಂಖ್ಯೆ ಮತ್ತು ದಿನಾಂಕವನ್ನು ನಮೂದಿಸುವಂತೆಯೂ ತಿಳಿಸಲಾಗಿದೆ.