ಬೆಂಗಳೂರು: ನೂತನ ಸಚಿವರಿಗೆ ಖಾತೆ ಹಂಚಿಕೆ ಹಾಗೂ ಕೆಲ ಸಚಿವರ ಖಾತೆ ಬದಲಾವಣೆ ನಂತರ ತಲೆದೂರಿರುವ ಅಸಮಾಧಾನಕ್ಕೆ ತೆರೆ ಎಳೆಯಲು ಸಿಎಂ ಯಡಿಯೂರಪ್ಪ ನಿರ್ಧರಿಸಿದ್ದು, ಸಚಿವರ ಒತ್ತಡಕ್ಕೆ ಮಣಿದು ಮೂವರ ಖಾತೆ ಬದಲಾವಣೆ ಮಾಡಲು ಮುಂದಾಗಿದ್ದಾರೆ ಎಂದು ಸಿಎಂ ಕಚೇರಿ ಮೂಲಗಳಿಂದ ತಿಳಿದು ಬಂದಿದೆ.
ಓದಿ: 'ಮದುವೆಯಾದ ಹೆಣ್ಣು ಮಕ್ಕಳಿಗೂ ಅನುಕಂಪದ ಆಧಾರದಡಿ ಸರ್ಕಾರಿ ನೌಕರಿ'
ಖಾತೆ ಹಂಚಿಕೆ ಬದಲಾವಣೆ ನಂತರ ಅಸಮಾಧಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಆಪ್ತ ಸಚಿವರೊಂದಿಗೆ ಸಿಎಂ ಯಡಿಯೂರಪ್ಪ ಸುದೀರ್ಘ ಸಮಾಲೋಚನೆ ನಡೆಸಿದರು. ಅಧಿಕೃತ ನಿವಾಸ ಕಾವೇರಿಯಲ್ಲಿ ಸಂಜೆ 7.30 ರಿಂದ ರಾತ್ರಿ 11 ಗಂಟೆಯವರೆಗೆ ಬಸವರಾಜ ಬೊಮ್ಮಾಯಿ, ಆರ್. ಅಶೋಕ್ ಮತ್ತು ಎಸ್. ಟಿ. ಸೋಮಶೇಖರ್ ಜೊತೆ ಸಿಎಂ ಯಡಿಯೂರಪ್ಪ ಸಮಾಲೋಚನೆ ನಡೆಸಿದರು.
ಸಂಧಾನಸಭೆ ನಂತರವೂ ಮುನಿಸಿಕೊಂಡು ಸಚಿವ ಸಂಪುಟ ಸಭೆಯಿಂದ ಎಂಟಿಬಿ ನಾಗರಾಜ್, ಗೋಪಾಲಯ್ಯ, ಡಾ.ಸುಧಾಕರ್ ದೂರ ಉಳಿದ ಕಾರಣದಿಂದ ಸಿಎಂ ಮಹತ್ವದ ಸಭೆ ನಡೆಸಿದರು. ಆಪ್ತ ಸಚಿವರ ಜೊತೆಗಿನ ಸಮಾಲೋಚನೆ ನಂತರ ಮೂವರು ಸಚಿವರ ಖಾತೆ ಬದಲಾವಣೆಗೆ ಸಿಎಂ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.
ಮೂವರು ಸಚಿವರ ಖಾತೆಗಳಲ್ಲಿ ಬದಲಾವಣೆ?
ಎಂಟಿಬಿ ನಾಗರಾಜ್ ಸೇರಿದಂತೆ ಮೂವರು ಸಚಿವರ ಖಾತೆಗಳು ಬದಲಾವಣೆ ಸಾಧ್ಯತೆ ಇದ್ದು, ಇಂದು ಮುಂಜಾನೆ ಖಾತೆ ಬದಲಾವಣೆ ಪಟ್ಟಿ ರಾಜಭವನಕ್ಕೆ ರವಾನೆ ಸಾಧ್ಯತೆ ಇದೆ. ಶುಕ್ರವಾರ ರಾಜ್ಯಪಾಲರ ಅಂಕಿತದ ಬಳಿಕ ಅಧಿಕೃತ ಪ್ರಕಟಗೊಳ್ಳುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ.