ಬೆಂಗಳೂರು: 2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಆಯ್ಕೆ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದಲ್ಲಿ ಭಾಗಿಯಾಗಿರುವ ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಮತ್ತು 9 ಮಂದಿ ಮಾಜಿ ಸದಸ್ಯರನ್ನು ಅಭಿಯೋಜನೆಗೊಳಪಡಿಸುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ಬೆಳಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ಸಾದಿಲ್ವಾರು ನಿಧಿ (ತಿದ್ದುಪಡಿ) ವಿಧೇಯಕಕ್ಕೆ ಅನುಮೋದನೆ ಸಿಗುವ ಸಾಧ್ಯತೆ ಇದೆ.
ಅಲ್ಲದೇ, ಕೈಗಾರಿಕಾ ವಿವಾದ ಮತ್ತು ಕೆಲವು ಇತರೆ ಕಾನೂನುಗಳ (ಕರ್ನಾಟಕ ತಿದ್ದುಪಡಿ) ವಿಧೇಯಕ, ಕರ್ನಾಟಕ ನ್ಯಾಯಾಲಯದ ಶುಲ್ಕ ಮತ್ತು ದಾವೆಗಳ ಮೌಲ್ಯ ನಿರ್ಣಯ (ತಿದ್ದುಪಡಿ) ವಿಧೇಯಕ, ವಿದ್ಯಾಶಿಲ್ಪ ವಿಶ್ವವಿದ್ಯಾಲಯ ವಿಧೇಯಕ, ಏಟ್ರಿಯಾ ವಿಶ್ವವಿದ್ಯಾಲಯ ವಿಧೇಯಕ, ಶ್ರೀಜಗದ್ಗುರು ಮುರುಘ ರಾಜೇಂದ್ರ ವಿಶ್ವವಿದ್ಯಾಲಯ ವಿಧೇಯಕಗಳಿಗೆ ಸಂಪುಟ ಸಭೆ ಅನುಮೋದನೆ ನೀಡುವ ನಿರೀಕ್ಷೆ ಇದೆ.
ಮೈಸೂರು ಮಹಾನಗರ ಪಾಲಿಕೆಯಲ್ಲಿ ಹಾಲಿ ಇರುವ ಸಾಂಪ್ರದಾಯಿಕ ಬೀದಿ ದೀಪಗಳನ್ನು ಎಲ್ಇಡಿ ದೀಪಗಳೊಂದಿಗೆ ಬದಲಿಸುವ ಇಂಧನ ಕ್ಷಮತೆಯ ಯೋಜನೆಯನ್ನು ಪಿಪಿಪಿ ಮಾದರಿಯಲ್ಲಿ 109.91 ಕೋಟಿ ರೂ. ಅಂದಾಜು ಮೊತ್ತದಲ್ಲಿ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲಿದೆ.ಬೆಂಗಳೂರಿನ ಅಗರ ಕೆರೆಯಿಂದ 35 ಎಂಎಲ್‌ಡಿ ನೀರನ್ನು ಕೊಂಡೊಯ್ಯಲು ಅಳವಡಿಸುವ ಕಾಮಗಾರಿಯ ಪೈಪ್‌ಲೈನ್‌ನಲ್ಲಿ ಭಾಗಶಃ ಮಾರ್ಪಾಡು ಮಾಡಿ ಹೆಚ್ಚುವರಿಯಾಗಿ ಹುಳಿಮಾವು ಮತ್ತು ಚಿಕ್ಕ ಬೇಗೂರು ಎಸ್‌ಟಿಪಿಯಿಂದ ಲಭ್ಯ ಇರುವ 15 ಎಂಎಲ್‌ಡಿಯೊಂದಿಗೆ ಒಟ್ಟು 50 ಎಂಎಲ್‌ಡಿ ನೀರನ್ನು ಈಗಾಗಲೇ ಅಳವಡಿಸಿರುವ ಆನೇಕಲ್ ಯೋಜನೆಯ ಪೈಪ್‌ಲೈನ್‌ಗೆ ಜೋಡಣೆ ಮಾಡುವ 30 ಕೋಟಿ ರೂ. ಅಂದಾಜು ಮೊತ್ತದ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಸಾಧ್ಯತೆ ಇದೆ.
ಇದರ ಜೊತೆಗೆ ರಾಜ್ಯವನ್ನೇ ತಲ್ಲಣಗೊಳಿಸಿರುವ ಡ್ರಗ್ಸ್ ಪ್ರಕರಣದ ಕುರಿತು ಸಚಿವ ಸಂಪುಟ ಸಭೆಯಲ್ಲಿ ಗಂಭೀರವಾಗಿ ಚರ್ಚೆ ನಡೆಯಲಿದೆ. ಡ್ರಗ್ಸ್ ನಿಯಂತ್ರಣ ಸಂಬಂಧ ಕೈಗೊಳ್ಳಬೇಕಾದ ಕ್ರಮ ಕುರಿತು ಸಮಾಲೋಚನೆ ನಡೆಯುವ ಸಾಧ್ಯತೆ ಇದೆ. ಸಚಿವ ಸಂಪುಟ ವಿಸ್ತರಣೆ ಬಗ್ಗೆಯೂ ಸಭೆಯಲ್ಲಿ ವಿಷಯ ಪ್ರಸ್ತಾಪವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.