ಬೆಂಗಳೂರು : ರಾಜ್ಯ ಸಚಿವ ಸಂಪುಟ ವಿಸ್ತರಣೆ ಮಾಡಲು ಹೈಕಮಾಂಡ್ ಅನುಮತಿಗಾಗಿ ಎದುರು ನೋಡುತ್ತಿದ್ದು, ವರಿಷ್ಠರಿಂದ ಸಮ್ಮತಿ ಸಿಗುತ್ತಿದ್ದಂತೆ ಸಂಪುಟ ವಿಸ್ತರಣೆ ಮಾಡುವುದಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು.
ನವದೆಹಲಿ ಪ್ರವಾಸ ಮುಗಿಸಿ, ಸಿಎಂ ಯಡಿಯೂರಪ್ಪ ಸಂತಸದಿಂದಲೇ ಬೆಂಗಳೂರಿಗೆ ವಾಪಸಾಗಿದ್ದಾರೆ. ವಿಮಾನ ನಿಲ್ದಾಣದಿಂದ ಅಧಿಕೃತ ನಿವಾಸ ಕಾವೇರಿಗೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಹಾಗೂ ಪ್ರಮುಖ ಏಳು ಜನ ಕೇಂದ್ರ ಸಚಿವರ ಜೊತೆ ಮಾತನಾಡಿ ಬಂದಿದ್ದೇನೆ. ಪ್ರಧಾನಿಗಳ ಜೊತೆಗೆ ರಾಜ್ಯದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಅವುಗಳ ಬಗ್ಗೆ ಸಂಬಂಧಪಟ್ಟ ಸಚಿವರ ಜೊತೆ ಮಾತನಾಡಿ, ಸೂಕ್ತ ನಿರ್ದೇಶನ ನೀಡುತ್ತೇನೆ ಎಂದು ಮೋದಿ ಭರವಸೆ ಕೊಟ್ಟಿದ್ದಾರೆ ಎಂದರು.
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಕೂಡ ಚರ್ಚಿಸಲಾಗಿದೆ. ಒಂದೇ ಶಬ್ದದಲ್ಲಿ ಹೇಳಬೇಕಾದ್ರೆ ದೆಹಲಿ ಪ್ರವಾಸ ಅತ್ಯಂತ ಯಶಸ್ವಿಯಾಗಿ ಆಯಿತು. ರಾಜ್ಯದ ಅನೇಕ ಜ್ವಲಂತ ಸಮಸ್ಯೆಗಳಿಗೆ ಕೆಲವೇ ದಿನಗಳಲ್ಲಿ ಪರಿಹಾರ ಸಿಗಲಿದೆ. ಅಭಿವೃದ್ಧಿ ಕಾರ್ಯಗಳಿಗೆ ಹಣಕಾಸು ನೆರವು ಸಿಗಲಿದೆ ಎನ್ನುವ ವಿಶ್ವಾಸವಿದೆ. ಒಳ್ಳೆಯ ಪ್ರವಾಸ ಆಗಿದೆ ಎಂದು ಸಿಎಂ ಹರ್ಷ ವ್ಯಕ್ತಪಡಿಸಿದರು.
ಸಂಪುಟ ವಿಸ್ತರಣೆ ಕುರಿತು ಜೆ ಪಿ ನಡ್ಡಾ ಅವರ ಗಮನಕ್ಕೆ ತರಲಾಗಿದೆ. ಹೈಕಮಾಂಡ್ ನಾಯಕರು ತಿಳಿಸಿದ ನಂತರ ಸಂಪುಟ ವಿಸ್ತರಣೆಗೆ ಮುಂದಾಗುವೆ. ಎಷ್ಟು ಜನರನ್ನು ತೆಗೆದುಕೊಳ್ಳಬೇಕು ಎಂದು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸಿಎಂ ಸ್ಪಷ್ಟಪಡಿಸಿದರು.