ಬೆಂಗಳೂರು: ಸಿಎಎ ಕಾಯ್ದೆಗೆ ಉತ್ತಮ ಜನಬೆಂಬಲ ವ್ಯಕ್ತವಾಗುತ್ತಿದೆ. ಜನವರಿ 26ರವರೆಗೂ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಜಾಗೃತಿ ಅಭಿಯಾನ ಮುಂದುವರೆಸುತ್ತೇವೆ ಎಂದು ಬಿಜೆಪಿ ರಾಜ್ಯ ಪ್ರ. ಕಾರ್ಯದರ್ಶಿ ಎನ್.ರವಿಕುಮಾರ್ ಹೇಳಿದ್ದಾರೆ.
ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಿಜವಾಗಿಯೂ ತ್ಯಾಗದ ಪಕ್ಷ ಬಿಜೆಪಿಯೇ ಹೊರತು ಕಾಂಗ್ರೆಸಿನದ್ದಲ್ಲ. ಸೈನಿಕರಿಗೆ ನೆಮ್ಮದಿ ತಂದು ಕೊಟ್ಟ ಪಾರ್ಟಿ ಬಿಜೆಪಿ. ಕಾಯ್ದೆಯಲ್ಲಿನ ಒಂದಂಶವೂ ಮುಸಲ್ಮಾನರ ವಿರುದ್ಧವಾಗಿಲ್ಲ. ಅವರನ್ನ ಪಾಕಿಸ್ತಾನಕ್ಕೆ, ಬಾಂಗ್ಲಾಕ್ಕೆ ಕಳುಹಿಸಿ ಬಿಡ್ತಾರೆ ಎನ್ನುವ ಸುಳ್ಳನ್ನು ಕಾಂಗ್ರೆಸ್ ಹೇಳುತ್ತಿದೆ. ಆದ್ದರಿಂದ ಕಾಂಗ್ರೆಸ್ ಅಪಪ್ರಚಾರದ ಪಾರ್ಟಿ ಎಂದು ಟೀಕಿಸಿದರು.
ಈವರೆಗೆ ಬಿಜೆಪಿ ಸಿಎಎ ಬಗ್ಗೆ 61 ಚಿಂತನಾ ಸಭೆ ನಡೆಸಿದೆ. ಇದರಲ್ಲಿ 24 ಸಾವಿರ ಜನ ಪಾಲ್ಗೊಂಡಿದ್ದರು. ಮನೆ ಮನೆ ಸಂಪರ್ಕ ಮಾಡಿದ್ದೇವೆ. 20 ಲಕ್ಷ ಮನೆಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಿದ್ದೇವೆ. 10,15,031ಜನರು ನಮ್ಮ ದೂರವಾಣಿ ಸಂಖ್ಯೆಗೆ ಮಿಸ್ಡ್ ಕಾಲ್ ನೀಡಿ ಬೆಂಬಲಿಸಿದ್ದಾರೆ. 8065 ಸಭೆಗಳಲ್ಲಿ ಮಹಿಳೆಯರು ಭಾಗವಹಿಸಿ ಕಾಯ್ದೆ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. 1,93,000 ಸಾವಿರ ಜನ ರ್ಯಾಲಿಯಲ್ಲಿ ಭಾಗಹಿಸಿದ್ದಾರೆ. 70 ಲಕ್ಷಕ್ಕೂ ಹೆಚ್ಚು ಜನರನ್ನ ನಾವು ನೇರವಾಗಿ ರೀಚ್ ಆಗಿದ್ದೇವೆ. ನಮ್ಮ ಗುರಿ 1 ಕೋಟಿ ಜನರನ್ನ ಭೇಟಿ ಮಾಡುವುದು ಎಂದರು.
ಸಿಎಎ ಕುರಿತು ಚರ್ಚೆಗೆ ಆಹ್ವಾನ ನೀಡಿರುವ ಉಗ್ರಪ್ಪ ಸೇರಿ ಕಾಂಗ್ರೆಸ್ ಸವಾಲನ್ನು ಸ್ವೀಕರಿಸಿದ್ದೇವೆ. ಸಮಯ, ಸ್ಥಳವನ್ನು ಕಾಂಗ್ರೆಸ್ ನಿಗದಿ ಮಾಡಲಿ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಜತೆಗೆ ಯಾರು ಚರ್ಚೆಗೆ ಬರ್ತಾರೋ ಅವರು ಬರಲಿ ಅಂದರು.