ಬೆಂಗಳೂರು : ರಾಜ್ಯದ ಎಲ್ಲ ವರ್ಗದವರಿಗೂ ನಮ್ಮ ಪಕ್ಷದಲ್ಲಿ ಅವಕಾಶ ನೀಡಲಾಗಿದೆ. ಹಳೆ ಬೇರು, ಹೊಸ ಚಿಗುರಿಗೆ ಆದ್ಯತೆ ನೀಡಿದ್ದೇವೆ ಎಂದು ಬಿಜೆಪಿ ಮುಖಂಡ ಸಿ.ಟಿ.ರವಿ ತಿಳಿಸಿದರು. ಬೆಂಗಳೂರು ಪ್ರೆಸ್ ಕ್ಲಬ್ನಲ್ಲಿಂದು ನಡೆದ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿದರು.
ನೀತಿ, ನೇತೃತ್ವ, ನಿಯತ್ತು ಈ ಮೂರು ಅಜೆಂಡಾಗಳ ಮೂಲಕ ನಾವು ಚುನಾವಣೆಯಲ್ಲಿ ಸ್ಪರ್ಧಿಸಲಿದ್ದೇವೆ. ದೇಶ ಮೊದಲು ಅನ್ನೋದು ನಮ್ಮ ನೀತಿ . ಹೈಕಮಾಂಡ್ ನೇತೃತ್ವದಲ್ಲಿ ರಾಜ್ಯದಲ್ಲಿ ನಾವು ಮುಂದೆ ಸಾಗುತ್ತೇವೆ. ಅವರ ಜೊತೆ ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮುಂದೆ ಹೆಜ್ಜೆ ಇಡುತ್ತೇವೆ. ಇನ್ನು ಅಭ್ಯರ್ಥಿಗಳ ವಿಚಾರದಲ್ಲಿ ಎಲ್ಲ ರೀತಿಯಲ್ಲೂ ನಾವು ಅಭ್ಯರ್ಥಿಗಳ ಸರ್ವೇಗಳನ್ನು ಮಾಡಿದ್ದೇವೆ. ನಮ್ಮ ನಿಯತ್ತನ್ನು ಕಾಲಕಾಲಕ್ಕೆ ಸ್ಪಷ್ಟಪಡಿಸಿದ್ದೇವೆ ಎಂದು ಹೇಳಿದರು.
ಅಪವಿತ್ರ ಮೈತ್ರಿ ಮಾಡಿಕೊಂಡು ಕುಮಾರಸ್ವಾಮಿ ಜೊತೆ ಕಾಂಗ್ರೆಸ್ ಅಧಿಕಾರ ಪ್ರಾರಂಭಿಸಿದ್ದರು. ಆದರೆ, ಜನ ಅದನ್ನು ಒಪ್ಪಿಕೊಳ್ಳಲಿಲ್ಲ. ಡಬಲ್ ಇಂಜಿನ್ ಸರ್ಕಾರ ಅಧಿಕಾರಕ್ಕೆ ಬಂದು ರಾಜ್ಯದಲ್ಲಿ ಹಲವು ಯೋಜನೆಗಳು ನಡೆದಿವೆ. ಸ್ಮಾರ್ಟ್ ಸಿಟಿ ಯೋಜನೆಯಡಿ 7 ಸಿಟಿಗಳು ಆಯ್ಕೆ ಆಗಿವೆ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಮನ್ವಯದಿಂದ ಅಧಿಕಾರ ನಡೆಸಿ ಅವಧಿ ಪೂರ್ಣಗೊಳಿಸಿ, ಕಠಿಣ ನಿರ್ಧಾರ ತೆಗೆದುಕೊಂಡವರು. ಮೀಸಲಾತಿ ವಿಚಾರಕ್ಕೆ ಯಾರೂ ಕೈ ಹಾಕಿಲ್ಲ. ಆದರೆ ಬೊಮ್ಮಾಯಿ ಒಳ ಮೀಸಲಾತಿಯನ್ನು ಅನುಷ್ಠಾನಗೊಳಿಸಿದರು. ನಾಯಕತ್ವ ಗುಣ ಇದಕ್ಕಿಂತ ಬೇಕಾ? ರಾಜ್ಯಕ್ಕೆ ನಾವು ಏನು ನೀಡಿದ್ದೇವೆ ಅದನ್ನು ಹೇಳುತ್ತೇವೆ. ಲಂಬಾಣಿ ತಾಂಡಗಳಿಗೆ ಹಕ್ಕು ಪತ್ರ ವಿತರಣೆ ಮಾಡಿದ್ದೇವೆ. ಆದರೆ ಹಲವರು ಸುಮ್ಮನೆ ಆರೋಪ ಮಾಡುತ್ತಾರೆ ಎಂದು ಪ್ರತಿಪಕ್ಷದ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಜಗದೀಶ್ ಶೆಟ್ಟರ್ ಹಾಗೂ ಯಡಿಯೂರಪ್ಪ ವಿಚಾರಕ್ಕೆ ಪ್ರತಿಕ್ರಿಯಿಸಿ, ಇಬ್ಬರು ನಮ್ಮ ಪಕ್ಷದ ವರಿಷ್ಠ ನಾಯಕರು. ಪಕ್ಷ ಕಟ್ಟೋದಕ್ಕೆ ಅವರ ಪರಿಶ್ರಮ ಹೆಚ್ಚಿದೆ. ಅವರ ಸಾಮರ್ಥ್ಯವನ್ನು ಬೇರೆ ರೂಪದಲ್ಲಿ ಬಳಸಿಕೊಳ್ಳಲಾಗುತ್ತದೆ. ಶೆಟ್ಟರ್ ಅವರ ಸಾಮರ್ಥ್ಯವನ್ನು ಬೇರೆ ರೂಪದಲ್ಲಿ ಬಳಸಿಕೊಳ್ಳುವ ಉದ್ದೇಶ ಪಕ್ಷಕ್ಕೆ ಇರುತ್ತದೆ. ಹಾಗಾಗಿ ಯಾರನ್ನೂ ಕಡೆಗಣಿಸುವುದಿಲ್ಲ ಎಂದು ಹೇಳಿದರು.
ಮ್ಯಾಚ್ ಫಿಕ್ಸಿಂಗ್ ಇಲ್ಲ: ಕನಕಪುರ ಮತ್ತು ವರುಣಾ ಕ್ಷೇತ್ರಗಳಲ್ಲಿ ಆರ್.ಅಶೋಕ್ ಮತ್ತು ವಿ.ಸೋಮಣ್ಣ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಅಶೋಕ್ ಮತ್ತು ಸೋಮಣ್ಣ ಅವರ ಸ್ಪರ್ಧೆ ವಿರೋಧಿಗಳಿಗೆ ಅಚ್ಚರಿ ಅಷ್ಟೇ ಅಲ್ಲದೆ, ಆತಂಕವೂ ಮೂಡಿಸಿದೆ. ಕ್ಷೇತ್ರದಲ್ಲಿ ರಾಜಕೀಯ ಸಂಘರ್ಷ ಆಗುತ್ತದೆ. ಯಾವುದೇ ಮ್ಯಾಚ್ ಫಿಕ್ಸಿಂಗ್ ಮಾಡಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯದ ಮೂರು ಪ್ರಮುಖ ಪಕ್ಷಗಳು ನಾಮಪತ್ರ ಸಲ್ಲಿಕೆಗೆ ಸಿದ್ದವಾಗಿದ್ದಾರೆ. ನಮ್ಮಲ್ಲಿ 54 ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ. ಸಂಘ ಸಂಸ್ಥೆ ಅಭಿಪ್ರಾಯ, ಕೋರ್ ಕಮಿಟಿ ಸಭೆ ನಡೆಸಿ ಆಯ್ಕೆ ಮಾಡಲಾಗಿದ್ದು, ಚುನಾವಣೆ ಎಲ್ಲರಿಗೂ ಒಂದು ಅಗ್ನಿಪರೀಕ್ಷೆ ಎಂದರು.
ಇದನ್ನೂ ಓದಿ: ಆತುರದ ನಿರ್ಧಾರ ಬೇಡ.. ಪಕ್ಷದಲ್ಲಿ ಉನ್ನತ ಭವಿಷ್ಯವಿದೆ: ಸವದಿಗೆ ಸಿಎಂ ಕಿವಿ ಮಾತು