ಬೆಂಗಳೂರು: ಕೈಗೆ ಹ್ಯಾಂಡ್ ಗ್ಲೌಸ್ ಹಾಕಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಕ್ರಮ ಮಾಡಿದ್ದಾರೆ. ಹೀಗಾಗಿ ಅವರ ಫಿಂಗರ್ ಪ್ರಿಂಟ್ ಕಾಣ್ತಾ ಇಲ್ಲ. ಆದರೆ, ಅಕ್ರಮ ಮಾಡಿದ್ದು ಸುಳ್ಳಾ? ಸಿದ್ದರಾಮಯ್ಯ ತಾವು ಉಡುವ ಪಂಚೆಯಷ್ಟೇ ಕ್ಲೀನ್ ಇದ್ದಾರಾ? ಎಂದು ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರು ವಾಗ್ದಾಳಿ ನಡೆಸಿದರು.
ಅಧಿಕೃತ ನಿವಾಸಕ್ಕೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪೇ ಸಿಎಂ ಪೋಸ್ಟರ್ ಬಳಿಕ ಸಚಿವರ ಪೋಸ್ಟರ್ ಅಂಟಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಆರೋಪಕ್ಕೆ ಆಧಾರ ಏನು? ಸಚಿವ ಮುನಿರತ್ನ ಕೂಡ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಭ್ರಷ್ಟಾಚಾರ ನಡೆದಿದ್ದರೆ ಕಾಂಗ್ರೆಸ್ ಲೋಕಾಯುಕ್ತಕ್ಕೆ ದೂರು ಕೊಡಬೇಕು ಅಲ್ಲವೇ? ಸಿದ್ದರಾಮಯ್ಯ ಅವರು ಯಾವ ಕಾರಣಕ್ಕೆ ಲೋಕಾಯುಕ್ತದ ಹಲ್ಲು ತೆಗೆದರು? ಸಿದ್ದರಾಮಯ್ಯ ತನ್ನ ಅಧಿಕಾರಾವಧಿಯಲ್ಲಿ ಲೋಕಾಯುಕ್ತವನ್ನು ದುರ್ಬಲಗೊಳಿಸಿದರು.
ಸಿದ್ದರಾಮಯ್ಯ ತನ್ನ ಕೈ ಕೆಳಗಡೆ ಇರುವ ಎಸಿಬಿ ರಚನೆ ಮಾಡಿದರು. ಭೂತದ ಬಾಯಿಯಲ್ಲಿ ಭಗವದ್ಗೀತೆ ಹೇಳಿಸಿದ ಹಾಗೇ ಸಿದ್ದರಾಮಯ್ಯ ಮಾಡಿದರು. ಸಿದ್ದರಾಮಯ್ಯ ಹಗಲು ದರೋಡೆ ಮಾಡಿದವರು. ಅರ್ಕಾವತಿ ರೀಡು ಮಾಡಿ ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ನಷ್ಟ ಮಾಡಿದ್ದಾರೆ ಎಂದು ಆರೋಪಿಸಿದರು.
ಡಿ ಕೆ ಶಿವಕುಮಾರ್ ಭ್ರಷ್ಟರು ಹೌದೊ? ಅಲ್ಲವೊ ? ಜನಸಾಮಾನ್ಯರ ಒಮ್ಮೆ ಕೇಳಿ. ಅಥವಾ ಮಾಧ್ಯಮದವರಾದ ನೀವೇ ಹೇಳಿ. ಡಿಕೆಶಿ ಕ್ಲೀನಾ? ಕಾಂಗ್ರೆಸ್ ಮಾಡಿರುವ ಭ್ರಷ್ಟಾಚಾರಕ್ಕೆ ಇವರನ್ನೆಲ್ಲ ಕೇವಲ ಪರಪ್ಪನ ಅಗ್ರಹಾರಕ್ಕೆ ಹಾಕೋದಲ್ಲ.ಕಾಂಗ್ರೆಸ್ ನಾಯಕರು ತಿಹಾರ್ ಜೈಲಲ್ಲೇ ಇರಬೇಕು ಎಂದರು.
ದೇಶ ಒಡೆಯುವ ಪ್ರಯತ್ನ ಸಹಿಸಲ್ಲ: ಕಾಂಗ್ರೆಸ್ ಮುಟ್ಟಾಳರು ಬಜರಂಗದಳ, ಆರ್ಎಸ್ಎಸ್ ಬ್ಯಾನ್ ಯಾವಾಗ ಅಂತಾರೆ. ಆರ್.ಎಸ್.ಎಸ್, ಬಜರಂಗದಳ ದೇಶ ಪ್ರೇಮ, ದೇಶ ಸೇವೆ ಮಾಡುವ ಸಂಘಟನೆ. ಆದರೆ, ಇವರು ದೇಶ ಒಡೆಯುವ ಸಂಘಟನೆ. ಒಮ್ಮೆ ಪಾಕಿಸ್ತಾನವಾಗಿ ಇಬ್ಭಾಗ ಆಗಿದೆ. ಈಗ ಮತ್ತೆ ದೇಶ ಒಡೆಯುವ ಪ್ರಯತ್ನ ಸಹಿಸಲ್ಲ. ಜಾಬ್ ಇಲ್ಲದೇ ಭಯೋತ್ಪಾದಕ ಕೆಲಸ ಮಾಡ್ತಾರೆ ಅಂದರೆ ಅಂತಹವರನ್ನು ಪಾಕಿಸ್ತಾನ, ಅಪಘಾನಿಸ್ತಾನಕ್ಕೆ ಕಳಿಸೋಣ, ಅಲ್ಲೇ ಇರಲಿ .. ಅಲ್ಲೆ ಜನ್ನತ್(ಸ್ವರ್ಗ) ಸಿಗಲಿ ಎಂದರು.
ಯಡಿಯೂರಪ್ಪ ಅವರನ್ನು ಕಣ್ಣೀರು ಹಾಕಿಸಿ ಸಿಎಂ ಸ್ಥಾನದಿಂದ ಕೆಳಗಡೆ ಇಳಿಸಿ ಲಿಂಗಾಯತ ಸಮುದಾಯಕ್ಕೆ ಬಿಜೆಪಿ ಅವಮಾನ ಮಾಡಿಲ್ವಾ? ಎಂಬ ದಿನೇಶ್ ಗುಂಡೂರಾವ್ ಟ್ವೀಟ್ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಿಟಿ ರವಿ, ಯಡಿಯೂರಪ್ಪ ಅವರನ್ನು ಕಾಂಗ್ರೆಸ್ ಸಿಎಂ ಮಾಡಿಲ್ಲ. ಯಡಿಯೂರಪ್ಪ ಅವರನ್ನು ಸಿಎಂ ಮಾಡಿದ್ದು ಬಿಜೆಪಿ ಪಕ್ಷ. ನಾಲ್ಕು ಬಾರಿ ಯಡಿಯೂರಪ್ಪ ಅವರನ್ನು ಸಿಎಂ ಮಾಡಿದ್ದು ಬಿಜೆಪಿ. ಯಡಿಯೂರಪ್ಪ ಕಣ್ಣೀರು ಹಾಕಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ ಎಂದು ಹೇಳಿದರು.
ನಿಜ ಸ್ಥಿತಿ ಹೇಳಿದ್ದಾರೆ: ಪೇ ಸಿಎಂ ಎಂದರೆ ಅದು ಪೇ ಫಾರ್ ಕಾಂಗ್ರೆಸ್ ಮೇಡಂ ಅಂತ. ಕಾಂಗ್ರೆಸ್ ಸರ್ಕಾರ ಇದ್ದಾಗ ಸೋನಿಯಾ ಗಾಂಧಿಗೆ ಹಣ ಕಳುಹಿಸುತ್ತಿದ್ದರು. ಭ್ರಷ್ಟಾಚಾರದ ಬಗ್ಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದು ಎಲ್ಲರಿಗೂ ಗೊತ್ತಿದೆ. ನಾಲ್ಕು ತಲೆಮಾರಿಗೆ ಆಗುವಷ್ಟು ಹಣ ಸಂಪಾದನೆ ಮಾಡಿದ್ದೇವೆ ಎಂದು ರಮೇಶ್ ಕುಮಾರ್ ಏನು ಸುಳ್ಳು ಹೇಳಿದ್ರಾ..? ನಿಜ ಸ್ಥಿತಿ ಹೇಳಿದ್ದಾರೆ ಎಂದರು.
ಅನ್ವರ್ ಮಾನಪಾಡಿ ವರದಿಯನ್ನು 2017 ರಲ್ಲಿ ಸಿದ್ದರಾಮಯ್ಯ ಮುಚ್ಚಿಹಾಕಿದ್ದು ಯಾಕೆ? ಲೋಕಾಯುಕ್ತ ವರದಿ ನೀಡಿದ್ದನ್ನೇ ಮುಚ್ಚಿಹಾಕಿದ್ದು ಯಾಕೆ? ಸಿದ್ದರಾಮಯ್ಯರಿಗೆ ಇದೊಂದು ಕೇಳಿ ಸಾಕು. ಅನ್ವರ್ ಮಾನಪಾಡಿ ವರದಿ ನಮ್ಮ ಸರ್ಕಾರ ಮಂಡಿಸಿದೆ ಎಂದು ಹೇಳಿದರು.
ಕಾನೂನು ಅದರ ಕೆಲಸ ಮಾಡುತ್ತದೆ: ಭ್ರಷ್ಟಾಚಾರ ಮಾಡಿದ್ದರೆ ನಮ್ಮನ್ನು ಜೈಲಿಗೆ ಹಾಕಲಿ ಎಂಬ ಸಿದ್ದರಾಮಯ್ಯ ಸವಾಲಿನ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಿಟಿ ರವಿ, ಕಾನೂನು ಅದರ ಕೆಲಸ ಮಾಡುತ್ತದೆ. ಸಿದ್ದರಾಮಯ್ಯ ಅವರೇ ನೀವು ಪ್ರಾಮಾಣಿಕವಾಗಿ ಇದೀರಿ ಅಲ್ವಾ? ರೀಡೋ ಅಂದರೆ ಏನಂತ ಕೇಳಿ? ಪ್ರಾಮಾಣಿಕವಾಗಿ ಹಿಂದೆ ರೀಡೋ ಅಂತ ಪದ ಯಾರು ಬಳಸಿರಲಿಲ್ಲ.
ಹಗರಣಕ್ಕೆ ಇವರೇ ಜವಾಬ್ದಾರಿ: ನೀವು ಬಳಸಿದಿರಲ್ವಾ. What's the meaning by ರೀಡೋ..? ಕೆಂಪಣ್ಣ ಆಯೋಗ ಸಿದ್ದರಾಮಯ್ಯ ಅವರೇ ನೇಮಕ ಮಾಡಿದ್ದು, ಕೆಂಪಣ್ಣ ವರದಿಯಲ್ಲಿ ಸಾವಿರಾರು ಕೋಟಿ ರೂಪಾಯಿ ನಷ್ಟ ಆಗಿದೆ ಎಂದು ಹೇಳಿದೆ. ಆಗ ಸಿಎಂ ಆಗಿದ್ದು ಸಿದ್ದರಾಮಯ್ಯ. ಹಾಗಾದರೆ ಇದರ ನೈತಿಕ ಹೊಣೆ ಯಾರು ಹೊರಬೇಕು..? ಗುಂಡೂರಾವ್ ಸಿಎಂ ಆಗಿದ್ದಾಗ ಅವರ ಕಾಲಘಟ್ಟದಲ್ಲಿ ಆಗಿರುವ ಹಗರಣದಲ್ಲಿ ಸಿದ್ದರಾಮಯ್ಯ ಪಾತ್ರ ಇತ್ತು ಅಂತ ನಾನು ಹೇಳಲ್ಲ. ಆದರೆ, ಇವರ ಕಾಲಘಟ್ಟದಲ್ಲಿ ಆಗಿರುವ ಹಗರಣಕ್ಕೆ ಇವರೇ ಜವಾಬ್ದಾರಿ ಹೊರಬೇಕು ಎಂದರು.
ತನಿಖೆ ಆದ್ಮೇಲೆ ಗೊತ್ತಾಗುತ್ತದೆ: ಜನರು ಕಾಂಗ್ರೆಸ್ ಪಕ್ಷದವರನ್ನು ಭ್ರಷ್ಟರು.. ಒಂದು ಧರ್ಮಕ್ಕೆ ಸುಣ್ಣ ಇನ್ನೊಂದು ಧರ್ಮಕ್ಕೆ ಬೆಣ್ಣೆ ನೀತಿ ಅನುಸರಿಸುತ್ತಾರೆ ಅಂತಾನೇ ಅಧಿಕಾರದಿಂದ ಕೆಳಗಡೆ ಇಳಿಸಿದ್ದು. ತನಿಖೆ ಆದ್ಮೇಲೆ ಅನುರಾಗ ತಿವಾರಿ ಹತ್ಯೆ ಬಗ್ಗೆ ಗೊತ್ತಾಗುತ್ತದೆ. ಅನ್ನ ಭಾಗ್ಯದ ಹಗರಣದ ಬಗ್ಗೆ ಬೆನ್ನು ಹತ್ತಿ ಹೊರಟಿದ್ದಕ್ಕೆ ಅನುರಾಗ ತೀವಾರಿ ಹತ್ಯೆ ಆಗಿದ್ಯಾ..? ಅಂತ ತನಿಖೆ ಆದ್ಮೇಲೆ ಗೊತ್ತಾಗುತ್ತದೆ. ತನಿಖೆ ಆದ್ಮೇಲೆ ಯಾರು ಯಾರು ಜೈಲಿಗೆ ಹೋಗ್ತಾರೆ ಅಂತ ಗೊತ್ತಾಗುತ್ತದೆ ಎಂದರು.
ಓದಿ: ಲೋಕಾಯುಕ್ತ ಇದ್ದಿದ್ದರೆ ಅಂದೇ ಸಿದ್ದರಾಮಯ್ಯ ಜೈಲಿಗೆ ಹೋಗುತ್ತಿದ್ದರು: ನಳೀನ್ ಕುಮಾರ್ ಕಟೀಲ್