ಬೆಂಗಳೂರು: ಮೂರು ಕ್ಷೇತ್ರದ ಉಪ ಚುನಾವಣಾ ಫಲಿತಾಂಶ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪಗೆ ಡಬಲ್ ರಿಲೀಫ್ ನೀಡಿದೆ. ಮತ್ತೊಮ್ಮೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಿರುವ ಸಿಎಂ, ಹೈಕಮಾಂಡ್ಗೆ ತಮ್ಮ ವರ್ಚಸ್ಸನ್ನು ತಲುಪಿಸಿದ್ದಾರೆ. ಅಲ್ಲದೇ, ಸಂಪುಟ ವಿಸ್ತರಣೆ ಸಂಕಷ್ಟದಿಂದಲೂ ಪಾರಾಗಿದ್ದಾರೆ.
ಬೆಳಗಾವಿ ಲೋಕಸಭೆ, ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಒಂದು ಲೋಕಸಭೆ, ಒಂದು ವಿಧಾನಸಭಾ ಕ್ಷೇತ್ರದಲ್ಲಿ ಕಮಲ ಅರಳಿದ್ದು, ಒಂದು ಕ್ಷೇತ್ರ ಮಾತ್ರ ಕಾಂಗ್ರೆಸ್ ವಶವಾಗಿದೆ. ತನ್ನ ಕ್ಷೇತ್ರ ಬೆಳಗಾವಿಯನ್ನು ಉಳಿಸಿಕೊಳ್ಳುವಲ್ಲಿ ಸಫಲವಾಗಿರುವ ಬಿಜೆಪಿ ಒಂದು ವಿಧಾನಸಭಾ ಕ್ಷೇತ್ರವನ್ನು ಬೋನಸ್ ರೂಪದಲ್ಲಿ ಪಡೆದುಕೊಂಡಿದೆ. ಮಸ್ಕಿ ಸೋತರೂ ಎರಡು ಕ್ಷೇತ್ರಗಳ ಗೆಲುವು ಸಿಎಂ ಯಡಿಯೂರಪ್ಪಗೆ ಬಿಗ್ ರಿಲೀಫ್ ನೀಡಿದಂತಾಗಿದೆ.
ಮೂರೂ ಕ್ಷೇತ್ರಗಳಲ್ಲಿಯೂ ಎರಡು ಬಾರಿ ಪ್ರವಾಸ ಮಾಡಿ ಪ್ರಚಾರ ನಡೆಸಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉಪ ಚುನಾವಣೆಯಾದರೂ, ಸಾರ್ವತ್ರಿಕ ಚುನಾವಣೆ ರೀತಿಯಲ್ಲೇ ಪ್ರಚಾರ ನಡೆಸಿದ್ದರು. ಕೊರೊನಾ ಆರ್ಥಿಕ ಮುಗ್ಗಟ್ಟಿನಿಂದಾಗಿ ಸರ್ಕಾರಕ್ಕೆ ಎದುರಾಗಿರುವ ಜನ ವಿರೋಧಿ ಅಲೆ ನಡುವೆಯೂ ಪಕ್ಷ ಹಾಗು ಸರ್ಕಾರದ ಸಾಧನೆಗಳು, ಹೊಸ ಭರವಸೆಗಳ ಮೂಲಕ ಜನರನ್ನು ಮುಟ್ಟುವಲ್ಲಿ ಸಿಎಂ ಬಹುತೇಕ ಸಫಲರಾಗಿದ್ದಾರೆ. ಈ ಮೂಲಕ ತಮ್ಮ ವರ್ಚಸ್ಸು ಇನ್ನೂ ಕುಗ್ಗಿಲ್ಲ ಎನ್ನುವ ಸಂದೇಶವನ್ನು ಹೈಕಮಾಂಡ್ ಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಹಿಂದಿನ ಎರಡು ಉಪ ಚುನಾವಣೆಗಳಲ್ಲಿ ಗೆದ್ದು ಬೀಗಿದ್ದ ಬಿಜೆಪಿ ಮೂರನೇ ಉಪ ಚುನಾವಣೆಯಲ್ಲಿ ಸಾಧನೆ ತೋರಿದೆ. ಒಂದು ಕ್ಷೇತ್ರದಲ್ಲಿ ಸೋತರೂ ಎರಡು ಕ್ಷೇತ್ರ ಗೆದ್ದು ಪಕ್ಷಕ್ಕೆ ಸರ್ಕಾರಕ್ಕೆ ಜನ ಮನ್ನಣೆ ಇದೆ ಎನ್ನುವ ಸಂದೇಶವನ್ನು ಪ್ರತಿಪಕ್ಷಗಳಿಗೆ ರವಾನಿಸಿದೆ.
ಬಿಎಸ್ವೈ ಪ್ಲಾನ್ ಸಕ್ಸಸ್: ಉಪ ಚುನಾವಣೆ ಘೋಷಣೆಗೂ ಮೊದಲೇ ಈ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡೇ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚಿಸಿದ್ದರು. ಶಿರಾ ಉಪ ಚುನಾವಣೆಗೂ ಮೊದಲು ಕಾಡುಗೊಲ್ಲ ಅಭಿವೃದ್ಧಿ ನಿಗಮ ರಚಿಸಿದ್ದು, ಫಲ ನೀಡಿದ್ದರಿಂದ ಅದೇ ಮಾದರಿ ಅನುಸರಿಸಿದ್ದ ಸಿಎಂ ಮರಾಠ ನಿಗಮ ರಚಿಸಿದ್ದು ಬಸವಕಲ್ಯಾಣದಲ್ಲಿ ಮರಾಠಿ ಮತಗಳನ್ನು ಸೆಳೆಯುವಲ್ಲಿ ಸಫಲರಾಗಲಿದ್ದಾರೆ. ಬೆಳಗಾವಿಯಲ್ಲೂ ಅದರ ಪರಿಣಾಮ ಬೀರುವಂತೆ ಮಾಡಿದ್ದಾರೆ. ಅದೇ ರೀತಿ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ರಚಿಸಿ ಬೆಳಗಾವಿಯಲ್ಲಿ ವೀರಶೈವ ಲಿಂಗಾಯತ ಮತಗಳನ್ನು ಹಿಡಿದಿಟ್ಟುಕೊಂಡಿದ್ದಾರೆ.
ಬಿಎಸ್ವೈ ಫುಲ್ ಖುಷ್: ಪದೇ ಪದೇ ನಾಯಕತ್ವ ಬದಲಾವಣೆ ವಿಷಯ ಬಂದಾಗಲೆಲ್ಲಾ ಉಪ ಚುನಾವಣೆಗಳನ್ನು ಗೆದ್ದು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಲೇ ಬಂದಿರುವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಇದೀಗ ಮತ್ತೊಮ್ಮೆ ತಮ್ಮ ಶಕ್ತಿ ತೋರಿಸಿದ್ದಾರೆ. ಉಪ ಚುನಾವಣಾ ಫಲಿತಾಂಶದ ನಂತರ ನಾಯಕತ್ವ ಬದಲಾವಣೆ ಆಗಲಿದೆ, ಹೊಸ ಮುಖ್ಯಮಂತ್ರಿ ಬರಲಿದ್ದಾರೆ ಎಂದು ಸ್ವತಃ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭವಿಷ್ಯ ನುಡಿದಿದ್ದರು. ಉಪ ಚುನಾವಣೆ ನಂತರ ಮತ್ತೆ ರೆಬಲ್ ಚಟುವಟಿಕೆ ಆರಂಭಗೊಳ್ಳಲಿದೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಆದರೆ ಉಪ ಚುನಾವಣಾ ಫಲಿತಾಂಶದ ಮೂಲಕ ಮತ್ತೆ ತಮ್ಮ ವರ್ಚಸ್ಸನ್ನು ಬಿಎಸ್ವೈ ಸಾಬೀತುಪಡಿಸಿದ್ದಾರೆ.
ಆ ಮೂಲಕ ನಾಯಕತ್ವ ಬದಲಾವಣೆಯಂತಹ ಪ್ರಸ್ತಾಪವೇ ಅಪ್ರಸ್ತುತ ಎನ್ನುವ ಸಂದೇಶವನ್ನು ಹೈಕಮಾಂಡ್ ಗೆ ರವಾನಿಸಿದ್ದಾರೆ. ಸದ್ಯಕ್ಕೆ ಸಿಎಂ ಕುರ್ಚಿಯಲ್ಲಿ ಯಡಿಯೂರಪ್ಪ ಸೇಫ್ ಆಗಿರಲಿದ್ದಾರೆ. ಸತತವಾಗಿ ಉಪ ಚುನಾವಣೆಗಳನ್ನು ಗೆದ್ದುಕೊಂಡು ಬರುತ್ತಿರುವ ಬಿಎಸ್ವೈ ವಿಷಯಕ್ಕೆ ಹೈಕಮಾಂಡ್ ತಲೆಹಾಕುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗ್ತಿದೆ.
ಸಂಪುಟ ವಿಸ್ತರಣೆ ಸಂಕಷ್ಟದಿಂದ ಸಿಎಂ ಪಾರು: ಉಪ ಚುನಾವಣೆಯಲ್ಲಿ ಪ್ರತಾಪಗೌಡ ಪಾಟೀಲ್ ಗೆದ್ದಿದ್ದರೆ ರಾಜ್ಯದಲ್ಲಿ ಮತ್ತೆ ಸಂಪುಟ ವಿಸ್ತರಣೆ ಸರ್ಕಸ್ ಆರಂಭಗೊಳ್ಳುತ್ತಿತ್ತು. ಕೊಟ್ಟ ಮಾತಿನಂತೆ ಪ್ರತಾಪಗೌಡ ಪಾಟೀಲ್ಗೆ ಸಚಿವ ಸ್ಥಾನ ಕೊಡಬೇಕಾಗುತ್ತಿತ್ತು. ಈ ವೇಳೆ ಮತ್ತೆ ಪಕ್ಷದಲ್ಲಿ ಸಚಿವಾಕಾಂಕ್ಷಿಗಳ ಅಸಮಾಧಾನ ಸ್ಫೋಟಗೊಳ್ಳುತ್ತಿತ್ತು. ಆದರೆ, ಈಗ ಅಂತಹ ವಿದ್ಯಮಾನಗಳಿಗೆ ಚುನಾವಣಾ ಫಲಿತಾಂಶವೇ ಬ್ರೇಕ್ ಹಾಕಿದೆ. ಸಚಿವ ಸ್ಥಾನವಿರಲಿ, ನಿಗಮ ಮಂಡಳಿ ಸ್ಥಾನವನ್ನೂ ನೀಡುವ ಅಗತ್ಯವಿಲ್ಲ. ಹೀಗಾಗಿ, ಸಿಎಂ ಯಡಿಯೂರಪ್ಪಗೆ ಡಬಲ್ ರಿಲೀಫ್ ಸಿಕ್ಕಂತಾಗಿದೆ.
ಓದಿ: ರಾಜ್ಯದಲ್ಲಿ ಸಂಕಷ್ಟದಲ್ಲಿರುವ ಜೆಡಿಎಸ್ ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ಧ ಸಿಡಿದೆದ್ದು ಬರಲಿದೆ: ಹೆಚ್ಡಿಕೆ