ಬೆಂಗಳೂರು: ದ್ವಿಚಕ್ರ ವಾಹನ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ಆರೋಪಿಯನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಬಂಧಿಸಿ ತನಿಖೆ ನಡೆಸಿದಾಗ ಮಗು ಅಪಹರಣ ಮಾಡಿ ಮಾರಾಟ ಮಾಡಿದ್ದ ಕೃತ್ಯ ಬಯಲಿಗೆ ಬಂದಿದೆ.
ಆಯಾಜ್ ಪಾಷಾ ಪ್ಲಾಸ್ಟಿಕ್ ವ್ಯಾಪಾರ ಮಾಡುತ್ತಿದ್ದ, ಅರ್ಬಿನ್ ಮನೆ ಕೆಲಸಕ್ಕೆ ಹೋಗುತ್ತಿದ್ದರು. ದಂಪತಿಗೆ ಅಲಿಖಾನ್ ಹಾಗೂ ಉಮಾರ್ ಎಂಬ ಇಬ್ಬರು ಗಂಡು ಮಕ್ಕಳಿದ್ದರು. ಈ ಪೈಕಿ ಉಮಾರ್ ಮೃತಪಟ್ಟಿದ್ದನು.
2020 ನವೆಂಬರ್ 11ರಂದು ಶಾಮಣ್ಣ ಗಾರ್ಡನ್ ನಿವಾಸಿ ಅರ್ಬಿನ್ ತಾಜ್, ಆಯಾಜ್ ಪಾಷಾ ದಂಪತಿ ಮೂರು ವರ್ಷದ ಮಗು ಅಲಿಖಾನ್ ಮನೆ ಬಳಿ ಮಕ್ಕಳೊಂದಿಗೆ ಆಟವಾಡುತ್ತಿದ್ದನು. ಈ ವೇಳೆ ನೆರೆ ಮನೆಯ ನಿವಾಸಿ ಆರೋಪಿ ಕಾರ್ತಿಕ್ ಚಾಕಲೇಟ್ ಕೊಡಿಸುವುದಾಗಿ ಹೇಳಿ ಮಗುವನ್ನು ಅಪಹರಣ ಮಾಡಿದ್ದನು. ಬಳಿಕ ತನ್ನ ಪರಿಚಿತ ಸರ್ಜಾಪುರದ ನಿವಾಸಿ ಜಗನ್ ಸಹೋದರನಿಗೆ ಮಕ್ಕಳಿರಲಿಲ್ಲ. ಹೀಗಾಗಿ ಆತ ಮಕ್ಕಳನ್ನು ದತ್ತು ತೆಗೆದುಕೊಳ್ಳಲು ಮುಂದಾಗಿದ್ದ. ಇದನ್ನು ಅರಿತಿದ್ದ ಕಾರ್ತಿಕ್, ತಾನು ಅಪಹರಿಸಿದ್ದ ಮಗುವನ್ನು ಜಗನ್‍ಗೆ ಒಪ್ಪಿಸಿದ್ದನು.
ನಂತರ ನನಗೆ ನಾಲ್ವರು ಮಕ್ಕಳಿದ್ದು, ಇಷ್ಟು ಮಂದಿ ಮಕ್ಕಳನ್ನು ಸಾಕಲು ಕಷ್ಟವಾಗುತ್ತದೆ. ಹೀಗಾಗಿ ಒಂದು ಮಗುವನ್ನು ನಿಮಗೆ ಕೊಡುತ್ತಿದ್ದೇನೆ ಎಂದು ಸುಳ್ಳು ಹೇಳಿ ಉಳಿದ ಮೂವರು ಮಕ್ಕಳನ್ನು ಸಾಕಲು 60 ಸಾವಿರ ರೂ. ಕೊಡುವಂತೆ ಕಾರ್ತಿಕ್ ಹಣಕ್ಕೆ ಬೇಡಿಕೆಯಿಟ್ಟದ್ದನಂತೆ. ಆರೋಪಿ ಮಾತನ್ನು ನಂಬಿದ ಜಗನ್ 60 ಸಾವಿರ ರೂ. ಕೊಟ್ಟು ಮಗುವನ್ನು ತನ್ನ ಅತ್ತಿಗೆಗೆ ಕೊಟ್ಟಿದ್ದನಂತೆ.
ಇತ್ತ ಮಗು ಕಾಣೆಯಿಂದ ಗಾಬರಿಗೊಂಡ ಅರ್ಬಿನ್ ತಾಜ್ ದಂಪತಿ ಬ್ಯಾಟರಾಯನಪುರ ಠಾಣೆಯಲ್ಲಿ ಮಗು ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದರು.
ಸ್ಕೂಟರ್ ಕದ್ದು ಸಿಕ್ಕಿಬಿದ್ದ:
ಮೈಸೂರು ರಸ್ತೆಯ ನಿವಾಸಿ ಸೈಯ್ಯದ್ ಕರೀಂ ಜುಲೈ 13ರಂದು ತಮ್ಮ ಸ್ಕೂಟರ್ನಲ್ಲಿ ಹೊಸಗುಡ್ಡದಹಳ್ಳಿಯ ಮಂಜುನಾಥನಗರದಲ್ಲಿರುವ ಸಂಬಂಧಿಕರ ಮನೆಗೆ ಹೋಗಿದ್ದ ವೇಳೆ ಮನೆ ಮುಂದೆ ವಾಹನ ನಿಲ್ಲಿಸಿದ್ದರು. ಅದೇ ದಿನ ರಾತ್ರಿ ಕಾರ್ತಿಕ್ ಸ್ಕೂಟರ್ ಕಳ್ಳತನ ಮಾಡಿ ಕಡಿಮೆ ಬೆಲೆಗೆ ಬೇರೆಯವರಿಗೆ ಮಾರಾಟ ಮಾಡಲು ಮುಂದಾಗಿದ್ದನು.
ಈ ಸಂಬಂಧ ಬ್ಯಾಟರಾಯನಪುರ ಠಾಣೆಗೆ ಕರೀಂ ದೂರು ನೀಡಿದ್ದರು. ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ವಿಜಯನಗರದಲ್ಲಿ ಬಂಧಿಸಿ ವಿಚಾರಣೆ ನಡೆಸಿದಾಗ 1 ವರ್ಷದ ಹಿಂದೆ ಮಗುವನ್ನು ಕಳ್ಳತನ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಇನ್ನು ಬಂಧಿತನಿಂದ ರಕ್ಷಿಸಿದ ಮಗುವನ್ನು ಪೊಲೀಸರು ಅರ್ಬಿನ್ ತಾಜ್, ಆಯಾಜ್ ಪಾಷಾ ದಂಪತಿಗೆ ಒಪ್ಪಿಸಿದ್ದಾರೆ.