ಬೆಂಗಳೂರು: ಕಾಂಗ್ರೆಸ್ ಸರ್ಕಾರ ಜನರ ಕಿವಿಗೆ ಹೂ ಇಡುವ ಕೆಲಸ ಮಾಡ್ತಿದೆ ಎಂದು ಬಿಜೆಪಿ ಶಾಸಕ ಬಿ.ವೈ. ವಿಜಯೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿಂದು ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಕ್ಕಿಗೆ ಹಣ ನೀಡಲು ತೀರ್ಮಾನ ಮಾಡಿರುವುದು ಸ್ವಾಗತ. ಸರ್ಕಾರ ನೀಡಬೇಕಿರೋದು ಹತ್ತು ಕೆಜಿ ಅಕ್ಕಿ. ನೀವು ಐದು ಕೆಜಿ ಕೊಡ್ತೇವೆ ಎಂದು ಅಂದು ಹೇಳಿರಲಿಲ್ಲ. ಐದು ಕೆಜಿ ಅಕ್ಕಿ ಕೇಂದ್ರ ಸರ್ಕಾರ ಕೊಡ್ತಿದೆ. ನೀವು ಕೊಡಬೇಕಿರದು ಹತ್ತು ಕೆಜಿ. ಇಂದು ಮಾರ್ಕೆಟ್‌ನಲ್ಲಿ ಅಕ್ಕಿಗೆ ಕನಿಷ್ಠ ಬೆಲೆ 45 ರೂಪಾಯಿ ಇದೆ. 34 ರೂಪಾಯಿಗೆ ಇವರು ಅಕ್ಕಿ ತಂದು ಕೊಡಲಿ ನೋಡೊಣ. 10ಕೆಜಿಯಲ್ಲಿ ಪ್ರತಿ ಕೆಜಿಗೆ 45ರೂಪಾಯಿ ನೀಡಬೇಕು ಎಂದು ಒತ್ತಾಯಿಸಿದರು.
ಯಡಿಯೂರಪ್ಪನವರು ಹೋರಾಟ ಮಾಡುತ್ತೇನೆ ಎಂದ ಮೇಲೆ ಇವರು ಅಕ್ಕಿಗೆ ಹಣ ಕೊಡಲು ತೀರ್ಮಾನ ಮಾಡಿದ್ದಾರೆ. ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು ಎಂದು ಕೇಳಿದ್ವಿ. ಯಡಿಯೂರಪ್ಪ ಹುಟ್ಟು ಹೋರಾಟಗಾರ. ಹೋರಾಟ ಅಂದರೆ ಯಡಿಯೂರಪ್ಪ, ಯಡಿಯೂರಪ್ಪ ಅಂದರೆ ಹೋರಾಟ. ಇಟ್ಟ ಹೆಜ್ಜೆ ಹಿಂದಿಡುವ ಪ್ರಶ್ನೆ ಇಲ್ಲ. ಹೋರಾಟದ ವಿಚಾರದಲ್ಲಿ ಕಾಂಗ್ರೆಸ್ ನಾಯಕರಿಂದ ಹೇಳಿಸಿಕೊಳ್ಳುವ ಅಗತ್ಯ ಇಲ್ಲ. ಚುನಾವಣೆಗೂ ಮುನ್ನ ಕಾಂಗ್ರೆಸ್ ಕೊಟ್ಟ ಮಾತಿನಂತೆ ನಡೆಯಲಿ. ಆಗದಿದ್ದಲ್ಲಿ ಕೊಟ್ಟ ಭರವಸೆ ಬೋಗಸ್, ಸುಳ್ಳು ಆಶ್ವಾಸನೆಗಳು ಎಂದು ಜನರ ಕ್ಷಮೆ ಕೇಳಲಿ ಎಂದು ಆಗ್ರಹಿಸಿದರು.
ಒಂದೇ ಅಧಿಕಾರಿ ವರ್ಗಾವಣೆಗೆ 4 ಲೆಟರ್ ಕೊಟ್ಟಿದ್ದಾರೆ. ಲೋಕಾಯುಕ್ತ ಮುಚ್ಚಿದ್ದು ಸಿದ್ದರಾಮಯ್ಯ. ಇವರು ಮಾಡುತ್ತಿರುವ ರೀತಿ ನೋಡಿದ್ರೆ ಮತ್ತೆ ಎಸಿಬಿ ಮುನ್ನೆಲೆಗೆ ತರಬಹುದು. ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ಫ್ರೀ ಯೋಜನೆ ಘೋಷಣೆ ಮಾಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಅಂದು ವಿಧಾನಸೌಧಕ್ಕೆ ಕಿವಿ ಮೇಲೆ ಹೂ ಇಟ್ಟು ಬಂದಿದ್ದರು. ಈ ಸರ್ಕಾರದಲ್ಲಿ ಕೆಲವು ಯುವ ಸಚಿವರ ಹೇಳಿಕೆ ನೋಡಿದರೆ ಅವರೇ ಸಿಎಂ ರೀತಿ ನಡೆದುಕೊಳ್ತಾ ಇದ್ದಾರೆ ಎಂದರು.
ಇದನ್ನೂ ಓದಿ: ಅಕ್ಕಿ ಲಭ್ಯವಾಗುವವರೆಗೆ ಫಲಾನುಭವಿಗಳ ಖಾತೆಗೆ ಹಣ; ಜುಲೈ 1ರಿಂದ 10 ಕೆಜಿ ಧಾನ್ಯ ವಿತರಣೆ- ಸಿಎಂ ಸಿದ್ದರಾಮಯ್ಯ
ಸರ್ಕಾರ ಕೊಡುವ ಹಣಕ್ಕೆ ಎರಡೂವರೆ ಕೆ.ಜಿ ಅಕ್ಕಿ ಮಾತ್ರ ಬರುತ್ತದೆ- ಬೊಮ್ಮಾಯಿ: ಮತ್ತೊಂದೆಡೆ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಇವರು ಮೂವತ್ತು ರೂಪಾಯಿ ಕೊಟ್ಟರೆ ಜನರಿಗೆ ಎರಡೂವರೆ ಕೆ.ಜಿ ಅಕ್ಕಿ ಮಾತ್ರ ಬರುತ್ತದೆ ಎಂದು ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ನವರು ಹತ್ತು ಕೆ.ಜಿ ಅಕ್ಕಿ ಕೊಡುವುದಾಗಿ ಭರವಸೆ ನೀಡಿದ್ದರು. ಈಗ ಅಕ್ಕಿ ಬದಲು 34 ರೂ. ಕೊಡುವುದಾಗಿ ಹೇಳುತ್ತಿದ್ದಾರೆ. ಇವರು ಕೊಡುವ ಹಣಕ್ಕೆ ಮಾರುಕಟ್ಟೆಯಲ್ಲಿ ಎರಡೂವರೆ ಕೆ.ಜಿ ಅಕ್ಕಿ ಮಾತ್ರ ಬರುತ್ತದೆ. ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ ಅಕ್ಕಿಗೆ ಐವತ್ತರಿಂದ ಆರವತ್ತು ರೂಪಾಯಿ ಬೆಲೆ ಇದೆ ಎಂದು ಹೇಳಿದರು.