ಬೆಂಗಳೂರು: ಇದೇ ತಿಂಗಳಲ್ಲಿ ನಡೆಯಬೇಕಿದ್ದ ಉಪಚುನಾವಣೆಯನ್ನು ಚುನಾವಣಾ ಆಯೋಗ ದಿಢೀರನೇ ಮುಂದೂಡಿದೆ. ಇದೀಗ ಸ್ವಲ್ಪ ವಿರಾಮ ಕೊಟ್ಟಿದ್ದ ಚುನಾವಣಾ ತಯಾರಿಗೆ ರಾಜಕೀಯ ಪಕ್ಷಗಳು ಮತ್ತೆ ಚಾಲನೆ ನೀಡಿವೆ.
ಕಾಂಗ್ರೆಸ್-ಜೆಡಿಎಸ್ನ 17 ಶಾಸಕರು ರಾಜೀನಾಮೆ ಕೊಟ್ಟಿದ್ದು, ಇದರಲ್ಲಿ 15 ಕ್ಷೇತ್ರಗಳಿಗೆ ಮಾತ್ರ ಉಪಚುನಾವಣೆ ದಿನಾಂಕ ಘೋಷಣೆಯಾಗಿದೆ. ಉಪಚುನಾವಣೆಯಲ್ಲಿ 15 ಕ್ಷೇತ್ರಗಳಲ್ಲೂ ಜೆಡಿಎಸ್ ಸ್ಪರ್ಧೆ ಮಾಡುತ್ತದೆಯಾದರೂ, ಐದು ಕ್ಷೇತ್ರಗಳ ಮೇಲೆ ಹೆಚ್ಚು ಕಣ್ಣಿಟ್ಟಿದೆ. ಆ ಕ್ಷೇತ್ರಗಳ ಮೇಲೆಯೇ ಹೆಚ್ಚು ಆಸಕ್ತಿ ವಹಿಸಿರುವ ನಾಯಕರು, ಐದು ಕ್ಷೇತ್ರಗಳನ್ನು ತಮ್ಮ ತೆಕ್ಕೆಗೆ ಹಾಕಿಕೊಳ್ಳುವ ಗುರಿ ಹೊಂದಿದ್ದಾರೆ ಎನ್ನಲಾಗಿದೆ.
ಇಂತಹದೊಂದು ಚರ್ಚೆ ಇತ್ತೀಚೆಗೆ ನಡೆದ ಸಭೆಯಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ. ಜೆಡಿಎಸ್ ಪಕ್ಷದ ಟಿಕೆಟ್ ಪಡೆದು ಗೆದ್ದು ಪಕ್ಷಕ್ಕೆ ದ್ರೋಹ ಮಾಡಿರುವ ಹಿರಿಯ ಮುಖಂಡ ಹೆಚ್.ವಿಶ್ವನಾಥ್, ಕೆ. ಗೋಪಾಲಯ್ಯ, ನಾರಾಯಣಗೌಡ ಸ್ಪರ್ಧಿಸಿದ್ದ ಹುಣಸೂರು, ಮಹಾಲಕ್ಷ್ಮಿಲೇಔಟ್ ಹಾಗೂ ಕೆ.ಆರ್. ಪೇಟೆ ಕ್ಷೇತ್ರಗಳ ಮೇಲೆ ನಾಯಕರು ಹೆಚ್ಚಿನ ಗಮನಹರಿಸಿದ್ದಾರೆ. ಈ ಮೂರು ಕ್ಷೇತ್ರಗಳನ್ನು ಶತಾಯಗತಾಯ ಗೆಲ್ಲಬೇಕೆಂಬುದು ಆ ನಾಯಕರ ಲೆಕ್ಕಾಚಾರವಾಗಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಕಡಿಮೆ ಅಂತರದಿಂದ ಸೋಲು ಅನುಭವಿಸಿದ್ದ ಯಶವಂತಪುರ ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರಗಳ ಮೇಲೂ ಜೆಡಿಎಸ್ ನಾಯಕರು ಹೆಚ್ಚು ಆಸಕ್ತಿ ತೋರಿಸಿದ್ದಾರೆ ಎನ್ನಲಾಗಿದೆ. ಜೆಡಿಎಸ್ಗೆ ಹೆಚ್ಚು ನೆಲೆ ಇಲ್ಲದ ಉತ್ತರಕರ್ನಾಟಕ ಹಾಗೂ ಕರಾವಳಿ ಕ್ಷೇತ್ರಗಳ ಕುರಿತು ಹೆಚ್ಚು ಆಸಕ್ತಿ ತೋರುತ್ತಿಲ್ಲ. ಆದರೆ, ಚುನಾವಣೆಯಲ್ಲಿ ಆ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಇಲ್ಲೂ ಜೆಡಿಎಸ್ ಇದೆ ಎಂಬ ಸಂದೇಶ ರವಾನೆ ಮಾಡುವ ತಂತ್ರಗಾರಿಕೆ ಜೆಡಿಎಸ್ ನದ್ದು ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ಹದಿನೈದು ಕ್ಷೇತ್ರಗಳಿಗೆ ಡಿಸೆಂಬರ್ 5 ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 9 ರಂದು ಫಲಿತಾಂಶ ಪ್ರಕಟವಾಗಲಿದೆ. ಒಂದೆಡೆ ಬಿಜೆಪಿ ಸರ್ಕಾರದ ಅಳಿವು-ಉಳಿವಿನ ಪ್ರಶ್ನೆ, ಮತ್ತೊಂದೆಡೆ ಮೈತ್ರಿ ಸರ್ಕಾರವನ್ನು ಕೆಡವಿದ ಅನರ್ಹ ಶಾಸಕರ ಪ್ರತಿಷ್ಠೆಯ ಪ್ರಶ್ನೆ, ಇನ್ನೊಂದೆಡೆ ಕಾಂಗ್ರೆಸ್-ಜೆಡಿಎಸ್ ನಾಯಕರ ಸೇಡಿನ ಪ್ರಶ್ನೆಯಾಗಿದೆ. ಒಟ್ಟಾರೆ, ಈ ಉಪಚುನಾವಣೆ ಮೂರು ಪಕ್ಷಗಳಿಗೂ ಅತ್ಯಂತ ಮಹತ್ವದ್ದಾಗಿದೆ ಎಂದೇ ಹೇಳಬಹುದು.