ಬೆಂಗಳೂರು: ನಗರದ ಹೃದಯ ಭಾಗವಾಗಿರುವ ಮೆಜೆಸ್ಟಿಕ್ ಬಳಿಯ ಕಪಾಲಿ ಟಾಕೀಸ್ ಹಿಂಭಾಗದ ಎರಡು ಕಟ್ಟಡಗಳು ಕುಸಿದು ಬಿದ್ದಿವೆ. ಅದೃಷ್ಟವಶಾತ್ ಯಾವುದೇ ಸಾವು- ನೋವು ಸಂಭವಿಸಿಲ್ಲ.
2017 ರಲ್ಲಿ ಕಪಾಲಿ ಥಿಯೇಟರ್ನ್ನು ತೆರವುಗೊಳಿಸಲಾಗಿತ್ತು. ಈ ಹಿನ್ನೆಲೆ ಇದೇ ಸ್ಥಳದಲ್ಲಿ ಒಂದು ವರ್ಷಗಳಿಂದ ಬೃಹತ್ ಕಟ್ಟಡ ನಿರ್ಮಾಣ ಮಾಡಲು ಕಾರ್ಯ ಆರಂಭವಾಗಿತ್ತು. ಲಾಕ್ಡೌನ್ ಹಿನ್ನೆಲೆ ಒಂದೂವರೆ ತಿಂಗಳಿಂದ ಕೆಲಸ ಸ್ಥಗಿತ ಗೊಳಿಸಲಾಗಿತ್ತು. ಕೆಲವು ದಿನಗಳಿಂದ ಸುರಿದ ಭಾರೀ ಮಳೆಯಿಂದ ಅಕ್ಕಪಕ್ಕದ ಬಿಲ್ಡಿಂಗ್ ಕೆಳಗಿದ್ದ ಮಣ್ಣು ಸಡಿಲಗೊಂಡಿದೆ. ಪರಿಣಾಮ ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ಬೀಳುತ್ತಿದ್ದಂತೆ ಅದರ ಹಿಂದೆ ಇದ್ದ ಮೂರು ಅಂತಸ್ತಿನ ಕಟ್ಟಡ ಕೂಡ ಬಿರುಕು ಬಿಟ್ಟು ಈ ಎರಡೂ ಕಟ್ಟಡಗಳು ನೆಲಕ್ಕುರುಳಿವೆ.
ನಿನ್ನೆ ರಾತ್ರಿಯೇ ಅಕ್ಕಪಕ್ಕದ ಕಟ್ಟಡಗಳ ಗೋಡೆಯಲ್ಲಿ ಬಿರುಕು ಉಂಟಾದ ಕಾರಣ ಮುನ್ನೆಚ್ಚರಿಕೆಯಾಗಿ ಅಕ್ಕಪಕ್ಕದ ಪಿಜಿ ಮತ್ತು ಹೋಟೆಲ್ ಬಿಲ್ಡಿಂಗ್ ಖಾಲಿ ಮಾಡಿಸಲಾಗಿತ್ತು. ಆದ್ದರಿಂದ ಘಟನೆಯಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ. ಉಪ್ಪಾರಪೇಟೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ.