ಬೆಂಗಳೂರು: ಕೊರೊನಾ ಸಂಕಷ್ಟದ ನಡುವೆಯೂ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅಭಿವೃದ್ಧಿ ಮತ್ತು ದೂರದೃಷ್ಟಿಯುಳ್ಳ ಬಜೆಟ್ನನ್ನು ಮಂಡಿಸಿದ್ದಾರೆ ಎಂದು ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಹೇಳಿದ್ದಾರೆ.
ಐಟಿ ರಾಜಧಾನಿ ಬೆಂಗಳೂರಿನಲ್ಲಿ ಸುಗಮ ಸಂಚಾರ ವ್ಯವಸ್ಥೆಯನ್ನು ಮತ್ತಷ್ಟು ಸುಲಭಗೊಳಿಸುವ ನಿಟ್ಟಿನಲ್ಲಿ ಇನ್ನೂ 2 ಮಾರ್ಗಗಳ ಮೆಟ್ರೋ ರೈಲು ಯೋಜನೆಗೆ 14,788 ಕೋಟಿ ರೂಪಾಯಿ ಮೀಸಲಿಟ್ಟಿರುವುದು ಸಂತಸದ ವಿಚಾರವಾಗಿದೆ. 2ನೇ ಹಂತದಲ್ಲಿ 58.19 ಕಿಲೋಮೀಟರ್ ಉದ್ದದ ಮೆಟ್ರೋ ರೈಲು ಮಾರ್ಗ ಬರುವುದರಿಂದ ನಗರದ ಸಂಚಾರ ದಟ್ಟಣೆಗೆ ಮತ್ತಷ್ಟು ಕಡಿವಾಣ ಬೀಳಲಿದೆ ಎಂದು ವಿಶ್ವನಾಥ್ ತಿಳಿಸಿದ್ದಾರೆ.
ಸೌರಶಕ್ತಿ ವಲಯಕ್ಕೆ 1 ಸಾವಿರ ಕೋಟಿ ರೂಪಾಯಿ ಮೀಸಲಿಟ್ಟಿರುವುದು, 15 ವರ್ಷಕ್ಕಿಂತ ಮೇಲ್ಮಟ್ಟ ವಾಹನಗಳ ಬಳಕೆಯನ್ನು ನಿಷೇಧಿಸುವುದರಿಂದ ಪರಿಸರ ಮಾಲಿನ್ಯ ನಿಯಂತ್ರಣವಾಗಲಿದೆ. ದೇಶದ ಒಟ್ಟು 500 ನಗರಗಳಲ್ಲಿ ಮಹತ್ವಾಕಾಂಕ್ಷೆಯ ಅಮೃತ ಯೋಜನೆ ಅನುಷ್ಠಾನಕ್ಕೆ ತರಲು ಸಂಕಲ್ಪ ಮಾಡಲಾಗಿದೆ. ಇದರಿಂದ ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳ ನಗರ ಪ್ರದೇಶದ ಜನರಿಗೆ ಸೂರು ಲಭ್ಯವಾಗಲಿದೆ ಎಂದರು.
ಓದಿ: ಬಜೆಟ್ನಿಂದ ಜನಸಾಮಾನ್ಯರಿಗೆ ಯಾವುದೇ ಪ್ರಯೋಜನವಿಲ್ಲ: ಸತೀಶ ಜಾರಕಿಹೊಳಿ ಟೀಕೆ
ಈಗಾಗಲೇ ಬೆಂಗಳೂರು ನಗರದ ಕೆಲ ಭಾಗಗಳಲ್ಲಿ ಗ್ಯಾಸ್ ಪೈಪ್ ಲೈನ್ ವ್ಯವಸ್ಥೆ ಜಾರಿಯಲ್ಲಿದ್ದು, ಇದನ್ನು ಮುಂದಿನ ಮೂರು ವರ್ಷಗಳಲ್ಲಿ 100 ಜಿಲ್ಲೆಗಳಿಗೆ ವಿಸ್ತರಣೆ ಮಾಡುವ ಉದ್ದೇಶದಿಂದ ಲಕ್ಷಾಂತರ ಮನೆಗಳಿಗೆ ಪೈಪ್ ಲೈನ್ ಮೂಲಕ ಅಡುಗೆ ಅನಿಲ ಪೂರೈಕೆ ಮಾಡಿದಂತಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ನಗರ ಮತ್ತು ಗ್ರಾಮಾಂತರ ಪ್ರದೇಶದ ಸಾರಿಗೆ ಸಂಪರ್ಕದ ಅಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಕೈಗಾರಿಕೆಗಳು ಮತ್ತು ಕೌಶಲ್ಯಾಭಿವೃದ್ಧಿ ಸೇರಿದಂತೆ ಹಲವು ಕ್ಷೇತ್ರಗಳ ಅಭಿವೃದ್ಧಿಗೆ ಒತ್ತು ನೀಡುವ ಮೂಲಕ ಭಾರತವನ್ನು ಆತ್ಮ ನಿರ್ಭರ ಮಾಡುವತ್ತ ಬಜೆಟ್ನಲ್ಲಿ ದಿಟ್ಟ ಹೆಜ್ಜೆ ಇಡಲಾಗಿದೆ ಎಂದು ವಿಶ್ವನಾಥ್ ತಿಳಿಸಿದ್ದಾರೆ.