ಬೆಂಗಳೂರು: ರಾಜ್ಯದಲ್ಲಿ ದ್ವಿತೀಯ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು 'ನಮ್ಮ ಕ್ಲಿನಿಕ್ ಸೇವೆ'ಯನ್ನು ಆರಂಭಿಸಿದ್ದು, ಸರ್ಕಾರದ ಈ ಉಪಕ್ರಮಕ್ಕೆ ಹಲವು ವಲಯಗಳಿಂದ ಶ್ಲಾಘನೆಗಳು ವ್ಯಕ್ತವಾಗುತ್ತಿವೆ. ಈ ನಡುವೆ ಆರ್ಥಿಕ ಕೊರತೆಯಿಂದಾಗಿ ಸರ್ಕಾರ ಮೊಬೈಲ್ ಕ್ಲಿನಿಕ್ ಸೇವೆಯನ್ನು ಸ್ಥಗಿತಗೊಳಿಸಿದೆ ಎಂದು ತಿಳಿದು ಬಂದಿದೆ. ನಮ್ಮ ಕ್ಲಿನಿಕ್ ಗುರಿಯಂತೆಯೇ ರಾಜ್ಯ ಸರ್ಕಾರ ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿ ಮೊಬೈಲ್ ವೈದ್ಯಕೀಯ ಘಟಕಗಳ (ಎಂಎಂಯು) ಸೇವೆಯನ್ನು 2022ರ ಆರಂಭಿಕ ತಿಂಗಳಿನಲ್ಲಿ ಆರಂಭಿಸಿತ್ತು. ಈ ಸೇವೆಗೆ ಬಜೆಟ್ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಸೇವೆಗಳನ್ನು ಸ್ಥಗಿತಗೊಳಿಸಿದೆ ಎಂದು ವರದಿಗಳು ತಿಳಿಸಿವೆ.
12 ವಿವಿಧ ಕ್ಷೇತ್ರಗಳಲ್ಲಿ ಸರ್ಕಾರ 70 ಎಂಎಂಯುಗಳನ್ನು ಒದಗಿಸಲು ಮುಂದಾಗಿತ್ತು. ದೂರದ ಪ್ರದೇಶಗಳಲ್ಲಿನ ತುರ್ತು ಸೇವೆಗಳನ್ನು ನೋಡಿಕೊಳ್ಳಲು ಸೇವೆ ಒದಗಿಸಲು ಸರ್ಕಾರ ನಿರ್ಧರಿಸಿತ್ತು. ತಾಯಿಯ ಆರೋಗ್ಯ, ಮಗುವಿನ ಆರೋಗ್ಯ, ವೃದ್ದಾಪ್ಯಾ ಆರೈಕೆ, ದಂತ ಮತ್ತು ಕಣ್ಣಿನ ಆರೈಕೆಗಳನ್ನು ನೋಡಿಕೊಳ್ಳಲಾಗುತ್ತದೆ ಎಂದು ಹೇಳಲಾಗಿತ್ತು. ರಾಷ್ಟ್ರೀಯ ನಗರ ಆರೋಗ್ಯ ಮಿಷನ್ ಅಡಿ ಈ ಸೇವೆಯನ್ನು ಆರಂಭಿಸಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, 2022 ವರ್ಷದಿಂದಲೇ ಸೇವೆಗಳು ಕಾರ್ಯ ನಿರ್ವಹಿಸುತ್ತಿಲ್ಲ ಎಂದು ತಿಳಿದು ಬಂದಿದೆ.
ಬಜೆಟ್ ಕೊರತೆಯಿಂದ ಸ್ಥಗಿತ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರಾದ ಡಿ. ರಂದೀಪ್ ಮಾತನಾಡಿ, ಬಜೆಟ್ ಕೊರತೆಗಳಿಂದಾಗಿ ಎಲ್ಲ ಎಂಎಂಯುಗಳನ್ನು ಕಳೆದ ವರ್ಷವೇ ನಿಲ್ಲಿಸಲಾಗಿದೆ ಎಂದು ಖಚಿತ ಪಡಿಸಿದ್ದಾರೆ.
1.55 ಲಕ್ಷ ಅಗತ್ಯತೆ: ಎನ್ಹೆಚ್ಎಂ ಆದೇಶದಂತೆ ಎಂಎಂಯು ಘಟಕಕ್ಕೆ ರೂ 1.55 ಲಕ್ಷ ಅಗತ್ಯವಿರುತ್ತದೆ. ಅದಾಗ್ಯೂ ಮುಂಬರುವ ವರ್ಷದಲ್ಲಿ 3.34 ಲಕ್ಷ ರೂ.,ಗಳ ವೆಚ್ಚದಲ್ಲಿ 34 ಘಟಕಗಳ ಸ್ಥಾಪನೆಗೆ ಮುಂದಾಗಲಾಗಿತ್ತು. ಆದರೆ, ಘಟಕ ಸ್ಥಾಪನೆಗೆ ಹಣ ಸಾಕಾಗದೆ ಇರುವುದರಿಂದ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ಅನುಷ್ಠಾನದ ಕೊರತೆ: ಕನ್ಸರ್ನ್ಡ್ ಫಾರ್ ವರ್ಕಿಂಗ್ ಚಿಲ್ಡ್ರನ್ (ಸಿಡಬ್ಲ್ಯೂಸಿ) ಎಂಬ ಎನ್‌ಜಿಒ ಸಂಸ್ಥೆಯ ಸಂಯೋಜಕಿ ಕೃಪಾ ಭಟ್ ಮಾತನಾಡಿ, ಸರ್ಕಾರವು ಹಲವಾರು ರೀತಿಯ ಯೋಜನೆಗಳನ್ನು ತರುತ್ತದೆ. ಆದರೆ, ಅವುಗಳಲ್ಲಿ ಹಲವು ಯೋಜನೆಗಳಿಗೆ ಅನುಷ್ಠಾನದ ಕೊರತೆ ಇರುತ್ತದೆ ಎಂದು ಹೇಳಿದ್ದಾರೆ.
ದೂರ ಪ್ರದೇಶದ ಜನರಿಗೆ ವೈದ್ಯಕೀಯ ಸೇವೆಯ ಪರಿಕಲ್ಪನೆ: ಹಲವಾರು ಪಂಚಾಯತ್ ಮತ್ತು ತಾಲೂಕು ಮಟ್ಟದ ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿ ಲಭ್ಯವಿರುವ ಸೇವೆಗಳ ಗುಣಮಟ್ಟವು ಉತ್ತಮವಾಗಿರುವುದಿಲ್ಲ. ಮೂಲಭೂತ ಸೇವೆಗಳನ್ನು ಪಡೆಯಲು ನಾಗರಿಕರು ದೂರದ ಪ್ರಯಾಣ ಮಾಡಬೇಕಾಗುತ್ತದೆ. ದೂರದ ಪ್ರದೇಶಗಳಲ್ಲಿರುವ ಜನರಿಗೆ ವೈದ್ಯಕೀಯ ಸೇವೆ ಒದಗಿಸುವ ಎಂಎಂಯುಗಳು ಉತ್ತಮ ಪರಿಕಲ್ಪನೆಯಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ 243 ವಾರ್ಡ್‍ಗಳ ಜನತೆಗೆ ಗುಡ್ ನ್ಯೂಸ್.. ಶೀಘ್ರದಲ್ಲೇ ‘ನಮ್ಮ ಕ್ಲಿನಿಕ್’ ಸೇವೆ
ಕಳೆದ ವರ್ಷ ಆರಂಭವಾಗಿದ್ದ ಮೊಬೈಲ್ ಕ್ಲಿನಿಕ್: ವಿಧಾನಸೌಧದಲ್ಲಿ ರೋಟರಿ ಬೆಂಗಳೂರು ಹೈಗ್ರೌಂಡ್ಸ್, ಇನ್ಫೋಸಿಸ್ ಫೌಂಡೇಶನ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಸಿಎಸ್‍ಆರ್ ಯೋಜನೆಯಡಿ ಒದಗಿಸಿರುವ ಲ್ಯಾಬ್ ಬಿಲ್ಟ್ ಆನ್ ವೀಲ್ಸ್ - ಮೊಬೈಲ್ ಕ್ಲಿನಿಕ್ನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಳೆದ ವರ್ಷ ಜೂನ್ ತಿಂಗಳಿನಲ್ಲಿ ಉದ್ಘಾಟಿಸಿದ್ದರು.
ಅಂದು ಸಂಚಾರಿ ಕ್ಲಿನಿಕ್ ಕುರಿತು ಮಾತನಾಡಿದ ಸಿಎಂ, ಈ ಬಾರಿಯ ಆಯವ್ಯಯದಲ್ಲಿ ಗಾಲಿಗಳ ಮೇಲೆ ಆಸ್ಪತ್ರೆಗೆ ಸರ್ಕಾರ ಅನುದಾನ ಮೀಸಲಿರಿಸಿದೆ. ಬಸ್ನಲ್ಲಿ ಪ್ರಯೋಗಾಲಯ ಹಾಗೂ ಆರೋಗ್ಯ ಸೇವಾ ಸೌಲಭ್ಯಗಳನ್ನು ನಾಲ್ಕು ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನ ಮಾಡಲಾಗುವುದು. ಪ್ರಯೋಗ ಯಶಸ್ವಿಯಾದರೆ ಇನ್ನುಳಿದ ಜಿಲ್ಲೆಗಳಿಗೂ ವಿಸ್ತರಣೆ ಮಾಡಬೇಕು ಎಂಬ ಚಿಂತನೆ ಇದೆ. ಆ ಸಂದರ್ಭದಲ್ಲಿ ನಮ್ಮೊಂದಿಗೆ ಕೈಜೋಡಿಸಿ ಎಂದು ವಿವಿಧ ಸಂಸ್ಥೆಗಳಿಗೆ ಮನವಿ ಮಾಡುವುದಾಗಿ ತಿಳಿಸಿದ್ದರು.
ಗ್ರಾಮೀಣ ಪ್ರದೇಶಗಳಲ್ಲಿ ಸಂಚಾರಿ ಕ್ಲಿನಿಕ್ ಉಪಯೋಗ ಮನಗಂಡು ಮೈಸೂರು, ಹುಬ್ಬಳ್ಳಿ- ಧಾರವಾಡ, ಮಂಗಳೂರು ಮಹಾನಗರ ಪಾಲಿಕೆಗಳಿಗೆ ಇವುಗಳನ್ನು ಆರೋಗ್ಯ ಇಲಾಖೆ ಹಸ್ತಾಂತರ ಮಾಡುತ್ತಿದೆ. ಇನ್ಫೋಸಿಸ್ ಪ್ರತಿಷ್ಠಾನ ಶಿಕ್ಷಣ, ಆರೋಗ್ಯ ಮತ್ತು ಪರಿಸರ ಸಂರಕ್ಷಣೆಯಲ್ಲಿ ಬಹಳ ದೊಡ್ಡ ಪಾತ್ರವನ್ನು ರಾಜ್ಯದಲ್ಲಿ ವಹಿಸಿದೆ. ಜಯದೇವ ಸಂಸ್ಥೆಯಲ್ಲಿ 500 ಹಾಸಿಗೆಗಳ ಸಾಮರ್ಥ್ಯವುಳ್ಳ ಆಸ್ಪತ್ರೆಯನ್ನು ಒದಗಿಸಿದ್ದಾರೆ. ಕಿದ್ವಾಯಿ, ನಿಮ್ಹಾನ್ಸ್ ಸಂಸ್ಥೆಗಳಿಗೆ ಧರ್ಮ ಛತ್ರ ನಿರ್ಮಿಸಿ ರೋಗಿಗಳು ಹಾಗೂ ಅವರ ಸಂಬಂಧಿಕರಿಗೆ ಅನುಕೂಲ ಕಲ್ಪಿಸಿದ್ದಾರೆ ಎಂದು ತಿಳಿಸಿದ್ದರು.
ಸಂಚಾರಿ ಕ್ಲಿನಿಕ್ ವಿಶೇಷತೆ ಏನು?: ಐಸಿಎಂಆರ್ ನಿಗದಿಪಡಿಸಿರುವ ಮಾನದಂಡಕ್ಕೆ ಅನುಗುಣವಾಗಿ ಬಿಎಸ್ಎಲ್ -2 ಸುರಕ್ಷಾ ಮಟ್ಟದಲ್ಲಿ ಕ್ಲಿನಿಕ್ ನಿರ್ಮಾಣ ಮಾಡಲಾಗಿದೆ. ಒಂದೇ ಸೂರಿನಡೆ ಕ್ಲಿನಿಕ್, ಟೆಲಿ ಮೆಡಿಸಿನ್, ಫಾರ್ಮಸಿ, ವ್ಯಾಕ್ಸಿನ್ ಮತ್ತು ಇತರ ಔಷಧಗಳನ್ನು ಕೊಂಡೊಯ್ಯಲು ಸಹಕಾರಿಯಾಗುವಂತೆ 2 ಡಿಗ್ರಿಯಿಂದ -18 ಡಿಗ್ರಿ ಸೆಲ್ಸಿಯಸ್‌ನ ರೆಫ್ರಿಜರೇಟರ್, ತುರ್ತು ಚಿಕಿತ್ಸೆಗಾಗಿ ಆಕ್ಸಿಜನ್ ನೀಡಿ ಕನಿಷ್ಠ ಶಸ್ತ್ರಚಿಕಿತ್ಸಾ ವಿಧಾನಗಳನ್ನು ಮಾಡುವ ಪ್ರತ್ಯೇಕ ಬೆಡ್‌ವುಳ್ಳ ಕೋಣೆ, ವಿದ್ಯುತ್ ಸಂಪರ್ಕ ಇಲ್ಲದಿರುವ ಕಡೆ ಉಪಯೋಗಿಸುವಂತೆ ಕೆಪಿ ಜನರೇಟರ್ ಮತ್ತು UPS ವ್ಯವಸ್ಥೆ ಹೊಂದಿತ್ತು.
ಸಾಂಕ್ರಾಮಿಕ ರೋಗಗಳನ್ನು ಪತ್ತೆ ಹಚ್ಚಲು ಸಹಕಾರಿ: ಈ ಮೊಬೈಲ್ ಕ್ಲಿನಿಕ್ ಸಾಂಕ್ರಾಮಿಕ ರೋಗಗಳಾದ ಕೋವಿಡ್ -19, ಟಿಬಿ, ಮಲೇರಿಯಾ, ಡೆಂಘೀ ಮತ್ತು ಸಾಂಕ್ರಾಮಿಕ ರೋಗಗಳನ್ನು ಪತ್ತೆ ಹಚ್ಚಲು ಸಹಕಾರಿಯಾಗಿದೆ. ಎಲ್ಲ ವೈದ್ಯಕೀಯ ಸೌಲಭ್ಯಗಳನ್ನು ನಿರಂತರವಾಗಿ ಗ್ರಾಮೀಣ ಭಾಗದ ಜನರಿಗೆ ಸೂಕ್ತ ಸಮಯದಲ್ಲಿ ನೀಡಿ, ಆಸ್ಪತ್ರೆಗಳ ಒತ್ತಡ ಕಡಿಮೆ ಮಾಡಲಿದೆ. ಈ ಮಾದರಿಯ ಕನಿಷ್ಠ 20 ಮೊಬೈಲ್ ಕ್ಲಿನಿಕ್ಗಳನ್ನು ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ (CSR) ಅಡಿ ಭರಿಸುವ ಯೋಜನೆ ರೂಪಿಸಲಾಗಿತ್ತು.
ಇದನ್ನೂ ಓದಿ: ಮೊಬೈಲ್ ಕ್ಲಿನಿಕ್ಗೆ ಸಿಎಂ ಚಾಲನೆ: ಬೇರೆ ಜಿಲ್ಲೆಗಳಿಗೂ ವಿಸ್ತರಿಸಲು ಚಿಂತನೆ ಎಂದ ಬೊಮ್ಮಾಯಿ