ಬೆಂಗಳೂರು: ವರ್ಷಗಟ್ಟಲೆ ಫೈವ್ ಸ್ಟಾರ್ ಹೊಟೆಲ್ನಲ್ಲಿ ತಂಗುವ ಮುಖ್ಯಮಂತ್ರಿಗಳನ್ನು ಈವರೆಗೂ ನೋಡಿರಲಿಲ್ಲ. ರಾಜಕೀಯ ದೊಂಬರಾಟ ಮಾಡಲು ಸಿಎಂ ಜನರ ಬಳಿಗೆ ಹೋಗುವ ನಾಟಕ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆರೋಪಿಸಿದ್ದಾರೆ.
ನಗರದ ಮೌರ್ಯ ಸರ್ಕಲ್ನಲ್ಲಿ ಬಿಜೆಪಿ ನಾಯಕರು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದು, ಇಂದು 'ಈಟಿವಿ ಭಾರತ್'ನೊಂದಿಗೆ ಅವರು ಮಾತನಾಡಿ ನಿನ್ನೆಯಂತೆ ನಮ್ಮ ಹೋರಾಟ ಮುಂದುವರೆಯುತ್ತದೆ. ಈ ಹೋರಾಟದಿಂದ ಸರ್ಕಾರದ ಮೇಲೆ ಪರಿಣಾಮ ಬೀರುತ್ತೋ ಬಿಡಿತ್ತೊ ಗೊತ್ತಿಲ್ಲ. ಜನರ ಮುಂದೆ ಈ ವಿಚಾರಗಳನ್ನು ತರುವುದು ನಮ್ಮ ಉದ್ದೇಶ. ರೈತರ ಸಾಲಮನ್ನಾ ಮಾಡುವುದಾಗಿ ಸುಳ್ಳು ಭರವಸೆಯನ್ನು ನೀಡಿ ಇನ್ನು ಸಾಲಮನ್ನಾ ಮಾಡಿಲ್ಲ. ಈಗ ಜಿಂದಾಲ್ ಕಂಪೆನಿಗೆ ಭೂಮಿ ಮಾರಾಟ ಮಾಡುತ್ತಿದ್ದಾರೆ. ಇದನ್ನು ವಿರೋಧಿಸಿ ಪ್ರತಿಭಟನೆ ಕೈಗೊಂಡಿದ್ದೇವೆ ಎಂದರು.
ಇನ್ನೂ ಐಎಮ್ಐ ಜ್ಯುವೆಲ್ಲರ್ಸ್ ಹಗರಣ ಕುರಿತು ಪ್ರತಿಕ್ರಿಯಿಸಿ, ಮಹಮ್ಮದ್ ಮನ್ಸೂರ್ ಖಾನ್ ಸಾವಿರಾರು ಕೋಟಿ ದೋಖಾ ಮಾಡಿ ಹೊರ ದೇಶಕ್ಕೆ ಓಡಿ ಹೋಗಿದ್ದು, ಅವನಿಗೆ ಸರ್ಕಾರವೇ ಸಹಕಾರ ಮಾಡಿದೆ. ಸ್ವತಃ ಜಮೀರ್ ಅಹಮ್ಮದ್ ಅವರೆ ನೀನೇನು ಹೆದರಬೇಡಪ್ಪಾ ಸರ್ಕಾರ ನಿನ್ನ ಜೊತೆ ಇದೆ ಎಂದು ಹೇಳಿಕೆ ನೀಡಿದ್ದು, ಇವರ ನಡುವಿನ ಸಂಬಂಧ ಏನು ಎಂದು ಇದರಿಂದಲೇ ತಿಳಿಯುತ್ತದೆ. ಹಗಲು ದರೋಡೆ ಮಾಡುವವರ ಜೊತೆ ಕೈ ಜೋಡಿಸಿ ಸರ್ಕಾರ ಅಭಿವೃದ್ಧಿ ಕಾರ್ಯಗಳನ್ನು ಮೈ ಮರೆತಿದೆ ಎಂದು ದೂರಿದರು.
ಅಭಿವೃದ್ಧಿ ಕಾರ್ಯಗಳ ಕಡೆ ಗಮನ ಹರಿಸಿದೆ ವರ್ಷಗಟ್ಟಲೆ ಫೈವ್ ಸ್ಟಾರ್ ಹೋಟೆಲ್ನಲ್ಲಿ ತಂಗಿರುವ ಮುಖ್ಯಮಂತ್ರಿಯನ್ನು ಇತಿಹಾಸದಲ್ಲೇ ನಾನು ಕಂಡಿಲ್ಲ. ಗುತ್ತಿಗೆದಾದರರು ಬಂದು ವ್ಯಾಪಾರ ಮಾಡಿಕೊಳ್ಳಲು ಅಲ್ಲಿ ಅನುಕೂಲವಾಗುತ್ತೆ ಹೊರತು, ಸಾಮಾನ್ಯ ಜನರು ಅಲ್ಲಿಗೆ ಹೋಗಲು ಸಾಧ್ಯವಿಲ್ಲ. ಈಗ ಇವೆಲ್ಲವನ್ನು ಮುಚ್ಚಿ ಹಾಕಲು ಯಾವುದೋ ಶಾಲೆಗೆ ಹೋಗಿ ಹಳ್ಳಿ ವಾಸ್ತವ್ಯ ಎಂದು ರಾಜಕೀಯ ದೊಂಬರಾಟ ಮಾಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಇದನ್ನು ನಾವು ಖಂಡಿಸುತ್ತೇವೆ ಎಂದರು.
ಜಿಂದಾಲ್ ಭೂ ಹಗರಣಕ್ಕೆ ಸಂಬಂಧಿಸಿದಂತೆಸಚಿವ ಸಂಪುಟದ ಉಪಸಮಿತಿ ರಚನೆ ಅಗತ್ಯ ಇರಲಿಲ್ಲ. ಸುಮ್ಮನೆ ಕಾಲ ದೂಡಿ ವಿಳಂಬ ಮಾಡಿ ಭೂಮಿ ಮಾರಾಟ ಮಾಡುವ ಉದ್ದೇಶದಿಂದ ಈ ಸಮಿತಿ ರಚನೆ ಮಾಡಿದ್ದಾರೆ ಎಂದರು.