ಬೆಂಗಳೂರು: ಗುಜರಾತ್ ನೂತನ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ನಡೆಸಲು ಹೈಕಮಾಂಡ್ ರಚಿಸಿರುವ ವೀಕ್ಷಕರ ತಂಡದ ಸದಸ್ಯರಾಗಿರುವ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಗುಜರಾತ್ನ ಅಹಮದಾಬಾದ್ ತಲುಪಿದ್ದಾರೆ. ಶುಕ್ರವಾರ ಸಂಜೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತೆರಳಿರುವ ಯಡಿಯೂರಪ್ಪ ಅವರನ್ನು ಗುಜರಾತ್ ಬಿಜೆಪಿ ನಾಯಕರು ಸ್ವಾಗತಿಸಿದರು. ಹೈಕಮಾಂಡ್ ಪ್ರತಿನಿಧಿಯಾಗಿ ಭೇಟಿ ನೀಡುತ್ತಿರುವ ಯಡಿಯೂರಪ್ಪ ಅವರಿಗೆ ಬಿಗಿ ಭದ್ರತೆ ಕಲ್ಪಿಸಲಾಗಿದೆ.
ಶನಿವಾರ ವೀಕ್ಷಕರ ಸಮಿತಿ ಸಭೆ ನಡೆಯಲಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಅರ್ಜುನ್ ಮುಂಡಾ ಜೊತೆಯಲ್ಲಿ ಯಡಿಯೂರಪ್ಪ ಭಾಗಿಯಾಗಲಿದ್ದಾರೆ. ಗುಜರಾತ್ ನೂತನ ಶಾಸಕರ ಅಭಿಪ್ರಾಯ ಸಂಗ್ರಹಿಸಿ ನೂತನ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ನಡೆಸಲಿದ್ದಾರೆ.
ಈ ಹಿಂದೆಯೇ ಸಂಸದರಾಗಿದ್ದ ಯಡಿಯೂರಪ್ಪ ರಾಷ್ಟ್ರ ರಾಜಕಾರಣದ ಬಗ್ಗೆ ಅಷ್ಟಾಗಿ ಆಸಕ್ತಿ ತೋರಿರಲಿಲ್ಲ. ಆದರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಂಸದೀಯ ಮಂಡಳಿ, ಚುನಾವಣಾ ಸಮಿತಿಯಲ್ಲಿ ಸ್ಥಾನ ನೀಡಿ ಕೇಂದ್ರದ ಜವಾಬ್ದಾರಿ ನೀಡಿದ್ದ ಹೈಕಮಾಂಡ್, ಇದೀಗ ಗುಜರಾತ್ ಸಿಎಂ ಆಯ್ಕೆ ವೀಕ್ಷಕರನ್ನಾಗಿ ನೇಮಿಸಿ ರಾಷ್ಟ್ರ ರಾಜಕಾರಣದ ಜವಾಬ್ದಾರಿ ವಹಿಸಿದೆ.
(ಓದಿ: ಹಿಮಾಚಲದಲ್ಲಿ ಸಿಎಂ ಪಟ್ಟಕ್ಕಾಗಿ ಬಡಿದಾಟ.. ಹೈಕಮಾಂಡ್ ಅಂಗಳದಲ್ಲಿ ನೂತನ ಸಾರಥಿ ಆಯ್ಕೆ ವಿಚಾರ!)