ಬೆಂಗಳೂರು : ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದ ಯಡಿಯೂರಪ್ಪ ದೇಶದ ಯಾವುದಾದರೂ ರಾಜ್ಯದ ರಾಜ್ಯಪಾಲರಾಗುತ್ತಾರೆ ಎಂಬ ಮಾತು ಸ್ವತಃ ಅವರಿಂದಲೇ ಶಕ್ತಿ ಕಳೆದುಕೊಂಡಿದೆ. ಇಂದು ಸುದ್ದಿಗಾರರು ರಾಜ್ಯಪಾಲ ಹುದ್ದೆಗೆ ನೇಮಕವಾಗುವ ಸಾಧ್ಯತೆಗಳ ಬಗ್ಗೆ ಕೇಳಿದಾಗ, ನಾನು ಸಕ್ರಿಯ ರಾಜಕಾರಣದಲ್ಲಿರಲು ಬಯಸುತ್ತೇನೆ ಎಂದು ಅವರು ಖಂಡತುಂಡವಾಗಿ ನುಡಿದಿದ್ದಾರೆ.
ಅದೇ ರೀತಿ, ಮುಂದಿನ ದಿನಗಳಲ್ಲಿ ನಾನು ಯಾವ ಅಧಿಕಾರವನ್ನೂ ಸ್ವೀಕರಿಸುವುದಿಲ್ಲ ಎನ್ನುವ ಮೂಲಕ ರಾಜ್ಯಪಾಲ ಹುದ್ದೆ ಪಡೆಯಲು ತಾವು ಉತ್ಸುಕರಲ್ಲ ಎಂಬ ಇಂಗಿತವನ್ನು ಬಿಎಸ್‌ವೈ ವ್ಯಕ್ತಪಡಿಸಿದರು.
ಯಡಿಯೂರಪ್ಪ ಅವರ ಈ ಮಾತು ರಾಜ್ಯ ರಾಜಕೀಯದಲ್ಲಿ ಕುತೂಹಲಕಾರಿ ಚರ್ಚೆಗಳಿಗೆ ದಾರಿ ಮಾಡಿಕೊಟ್ಟಿದೆ. ರಾಜ್ಯಪಾಲ ಹುದ್ದೆ ಅಲ್ಲದಿದ್ದರೆ ಪರ್ಯಾಯ ರಾಜಕಾರಣಕ್ಕೆ ಯಡಿಯೂರಪ್ಪ ಸಜ್ಜಾಗಿದ್ದಾರೆಯೇ ಎಂಬ ಮಾತುಗಳು ಕೇಳಿ ಬಂದಿವೆ.
ಈ ಹಿಂದೆ ನಾಯಕತ್ವ ಬದಲಾವಣೆಯ ಮಾತು ಕೇಳಿ ಬಂದಾಗ ಸಹ ರಾಜ್ಯಪಾಲ ಹುದ್ದೆಗೆ ಅವರು ನೇಮಕವಾಗಲಿದ್ದಾರೆ ಎಂದು ಹೇಳಲಾಗಿತ್ತಾದರೂ, ರಾಜ್ಯವನ್ನು ಬಿಟ್ಟು ನಾನೆಲ್ಲೂ ಹೋಗಲಾರೆ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದ್ದರು ಎಂದು ಹೇಳಲಾಗುತ್ತಿದೆ.
ರಾಜ್ಯಪಾಲ ಹುದ್ದೆ ಎಂದರೆ ದಂತಗೋಪುರದಲ್ಲಿ ಕೂರುವುದೇ ಹೊರತು ಬೇರೇನಲ್ಲ. ಇವತ್ತಿನ ಸ್ಥಿತಿಯಲ್ಲಿ ರಾಜ್ಯಪಾಲನಾಗುವುದು ಎಂದರೆ ನನ್ನ ನೆರವಿಗೆ ಮಕ್ಕಳಾದ ರಾಘವೇಂದ್ರ ಮತ್ತು ವಿಜಯೇಂದ್ರರ ಪೈಕಿ ಯಾರಾದರೊಬ್ಬರು ನಾನಿದ್ದಲ್ಲಿಗೆ ಬರಬೇಕು. ಆದರೆ, ಇಬ್ಬರಿಗೂ ರಾಜಕೀಯ ಭವಿಷ್ಯವಿದೆ.
ಈ ಪೈಕಿ ರಾಘವೇಂದ್ರ ಈಗಾಗಲೇ ಸಂಸದರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜಯೇಂದ್ರ ಅವರು ಮುಂದಿನ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ತಯಾರಾಗುತ್ತಿದ್ದಾರೆ. ಹೀಗಿರುವಾಗ ಅವರನ್ನು ಬೇರೆ ರಾಜ್ಯಕ್ಕೆ ಕರೆದುಕೊಂಡು ಹೋಗುವುದು ಉಚಿತವಲ್ಲ ಎಂದು ಯಡಿಯೂರಪ್ಪ ಹೇಳಿದ್ದರೆನ್ನಲಾಗಿದೆ.
ಒಂದು ವೇಳೆ ಯಾರೇ ಬಂದು ಅಲ್ಲಿ ನೆಲೆಸಿದರೆ ಅವರ ರಾಜಕೀಯ ಭವಿಷ್ಯಕ್ಕೆ ಧಕ್ಕೆಯಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ನಾನು ಜನರ ನಡುವೆ ಇರುವವನು. ರಾಜಭವನದಲ್ಲಿ ಕೂರಲು ನನ್ನಿಂದ ಸಾಧ್ಯವಿಲ್ಲ ಎಂದೂ ಸಹ ಯಡಿಯೂರಪ್ಪ ಅವರು ಪದೇಪದೆ ವರಿಷ್ಠರಿಗೆ ಸಂದೇಶ ನೀಡಿದ್ದರು ಎಂದು ಉನ್ನತ ಮೂಲಗಳು ತಿಳಿಸಿವೆ.
ಕೇಂದ್ರ ಸಚಿವರಾಗುವ ಅವಕಾಶ ನಿರಾಕರಿಸಿದ್ದ ಬಿಎಸ್‌ವೈ : ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಕೇಂದ್ರಕ್ಕೆ ಬಂದು ಸಚಿವರಾಗುವಂತೆ ಆಹ್ವಾನ ನೀಡಿದ್ದರು. ಆದರೆ, ನಾನು ಬೇಡ ಎಂದು ಹೇಳಿದ್ದೆ. ಹೀಗಾಗಿ, ರಾಜ್ಯಪಾಲ ಸೇರಿ ಕೇಂದ್ರದಲ್ಲಿ ಯಾವುದೇ ಹುದ್ದೆಯನ್ನು ಇನ್ಮುಂದೆ ಸ್ವೀಕರಿಸುವುದಿಲ್ಲ ಎಂದು ನಿರ್ಗಮಿತ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.