ಬೆಂಗಳೂರು: ಕೊರೊನಾ ಬಿಕ್ಕಟ್ಟು ಹಿನ್ನೆಲೆ ಬಟ್ಟೆ ವ್ಯಾಪಾರದಿಂದ ಆದ ನಷ್ಟ ತುಂಬಿಕೊಳ್ಳಲು, ವಾಸವಾಗಿದ್ದ ಮನೆಯ ಮಾಲೀಕರನ್ನೇ ಗುರಿಯಾಗಿಸಿಕೊಂಡು ಅವರ ಕೈ ಕಾಲು ಕಟ್ಟಿ ಹಾಡಹಗಲೇ ದರೋಡೆ ಮಾಡಿದ್ದ ಇಬ್ಬರು ಸಹೋದರರನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ.
ಅವಿನಾಶ್ ಹಾಗೂ ಅರವಿಂದ್ ಬಂಧಿತ ಆರೋಪಿಗಳು. ಅವಿನಾಶ್ ಬಸವನಗುಡಿಯಲ್ಲಿ ವಾಸವಾಗಿದ್ದರೆ, ಅರವಿಂದ್ ವಿದ್ಯಾರಣ್ಯಪುರದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಬಟ್ಟೆ ವ್ಯಾಪಾರ ಮಾಡುತ್ತಿದ್ದ ಅರವಿಂದ್ ಲಾಕ್ಡೌನ್ದಿಂದ ನಷ್ಟ ಅನುಭವಿಸಿದ್ದರು. ಸಾಲಗಾರರ ಕಾಟಕ್ಕೆ ಬೇಸತ್ತಿದ್ದ ಸಹೋದರರು, ಅರವಿಂದ್ ವಾಸವಿದ್ದ ಬಾಡಿಗೆ ಮನೆಯ ಓನರ್ ಮನೆಯಲ್ಲಿ ದರೋಡೆ ಮಾಡಲು ಸಂಚು ರೂಪಿಸಿದ್ದರು.
ಪೀಣ್ಯದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮನೆ ಮಾಲೀಕ ಸುಭಾಷ್ ವಿದ್ಯಾರಣ್ಯಪುರದಲ್ಲಿ ಪತ್ನಿ ಜಯಶ್ರೀ ಜತೆ ವಾಸಿಸುತ್ತಿದ್ದರು. ಕಳೆದ ಶನಿವಾರ ಬೆಳಗ್ಗೆ ಎಂದಿನಂತೆ ಸುಭಾಷ್ ಕೆಲಸಕ್ಕೆ ಹೋಗಿದ್ದರು. ದರೋಡೆಗೆ ಸಕಾಲ ಎಂದು ಅರಿತು ಅಂದು ಬೆಳಗ್ಗೆ ಸುಮಾರು 10 ಗಂಟೆಗೆ ಮನೆಗೆ ನುಗ್ಗಿದ ಅರವಿಂದ್ ಹಾಗೂ ಅವಿನಾಶ್ ಏಕಾಏಕಿ ಜಯಶ್ರೀ ಅವರ ಹಿಂಭಾಗದಿಂದ ತಲೆಯನ್ನು ಬಗ್ಗಿಸಿ ತಮ್ಮ ಸುಳಿವು ಸಿಗದಂತೆ ಎಚ್ಚರಿಕೆ ವಹಿಸಿ ದರೋಡೆಗೆ ಮುಂದಾದರು.
ನಂತರ ಅವರ ಕೈಯನ್ನು ಹಗ್ಗದಿಂದ ಕಟ್ಟಿ ಮಾರಕಾಸ್ತ್ರ ತೋರಿಸಿ ಮನೆಯಲ್ಲಿ ಚಿನ್ನಾಭರಣ ಇಟ್ಟಿರುವ ಸ್ಥಳದ ಬಗ್ಗೆ ಮಾಹಿತಿ ಕಲೆ ಹಾಕಿದರು. ಬೀರುವಿನಲ್ಲಿದ್ದ 170 ಗ್ರಾಂ ಚಿನ್ನಾಭರಣ, 2 ಲಕ್ಷ ರೂ. ನಗದು ಹಣವನ್ನು ದೋಚಿ ಕ್ಷಣಮಾತ್ರದಲ್ಲಿ ಪರಾರಿಯಾಗಿದ್ದರು.
ಇದನ್ನೂ ಓದಿ: ಶೋ ರೂಂ ಮಾಲೀಕನ ಮೇಲೆ ಮಾರಣಾಂತಿಕ ಹಲ್ಲೆ: ಬೆಂಗಳೂರಲ್ಲಿ ಆರೋಪಿ ಅರೆಸ್ಟ್
ಕೂಡಲೇ ನೆರೆ-ಹೊರೆಯವರಿಗೆ ವಿಷಯ ತಿಳಿಸಿದ ಜಯಶ್ರೀ, ವಿದ್ಯಾರಣ್ಯಪುರ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಮೇರೆಗೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಕೃತ್ಯ ನಡೆದ ಸ್ಥಳದಲ್ಲಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರಿಂದ 123 ಗ್ರಾಂ ಚಿನ್ನಾಭರಣ, 3 ಕೆ.ಜಿ. ಬೆಳ್ಳಿ ಅಭರಣವನ್ನು ವಶಕ್ಕೆ ಪಡೆದಿದ್ದಾರೆ.