ಬೆಂಗಳೂರು: ಅಕ್ಕನ ಜೊತೆ ಜಗಳ ತೆಗೆದ ಬಾವನನ್ನು ಕೊಂದು ತಲೆಮರೆಸಿಕೊಂಡಿದ್ದ ಬಾಮೈದನನನ್ನು ನಂದಿನಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ನಂದಿನಿ ಲೇಔಟ್ ಕೂಲಿ ನಗರದ ನಿವಾಸಿ ಖಾದರ್ ಬಂಧಿತ ಆರೋಪಿ. ಅಜಿಮ್ ಉಲ್ಲಾ ಕೊಲೆಯಾದ ವ್ಯಕ್ತಿ. ಖಾಸಗಿ ಟ್ರಾನ್ಸ್ ಪೋರ್ಟ್ನಲ್ಲಿ ಕೆಲಸ ಮಾಡುತಿದ್ದ ಅಜೀಮ್ ಉಲ್ಲಾ ಹಲವು ವರ್ಷಗಳ ಹಿಂದೆ ಖಾದರ್ ಸಹೋದರಿಯನ್ನು ಮದುವೆಯಾಗಿದ್ದ. ಪತ್ನಿ ಜೊತೆ ನಂದಿನಿ ಬಡಾವಣೆಯ ಕಂಠೀರವ ನಗರದಲ್ಲಿ ವಾಸವಾಗಿದ್ದ.
ಇಬ್ಬರ ನಡುವೆ ಸಣ್ಣ-ಪುಟ್ಟ ವಿಷಯಗಳಿಗಾಗಿ ಆಗಾಗ ಜಗಳ ನಡೆಯುತಿತ್ತು. ಮಾನಸಿಕ ಕಿರುಕುಳ ನೀಡಿದ ಆರೋಪದಡಿ 2018ರಲ್ಲಿ ಪತಿ ವಿರುದ್ಧ ಪತ್ನಿ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಮದ್ಯ ಸೇವನೆ ಚಟ ಅಂಟಿಸಿಕೊಂಡಿದ್ದ ಅಜೀಂ ಉಲ್ಲಾ ಪ್ರತಿದಿನ ಕ್ಷುಲ್ಲಕ ಕಾರಣಕ್ಕಾಗಿ ಜಗಳವಾಡುತ್ತಿದ್ದ. ನಿನ್ನೆ ಸಹ ಮನೆಯಲ್ಲಿ ಜಗಳ ಶುರುವಾಗಿ ರಾತ್ರಿವರೆಗೂ ಮುಂದುವರೆದಿತ್ತು. ಅಕ್ಕ, ಭಾವ ಗಲಾಟೆ ವಿಷಯ ಅರಿತ ಆರೋಪಿ ಖಾದರ್ ತಾನು ವಾಸವಿದ್ದ ಕೂಲಿನಗರದಿಂದ ತನ್ನ ಇಬ್ಬರು ಗೆಳೆಯರ ಜೊತೆ ಅಕ್ಕನ ಮನೆ ಬಳಿ ಬಂದಿದ್ದ.
ಈ ವೇಳೆ ಬಾವನ ಜೊತೆ ಖಾದರ್ ಮಾತಿಗೆ ನಿಂತಿದ್ದಾನೆ. ಮಾತಿಗೆ ಮಾತು ಬೆಳೆದು ಬಾವನ ಮೇಲೆ ಹಲ್ಲೆ ಮಾಡಿದ್ದಾನೆ. ಅಲ್ಲೇ ಇದ್ದ ಕಲ್ಲುಗಳಿಂದ ತಲೆಯ ಮೇಲೆ ಹಲವು ಬಾರಿ ಹಲ್ಲೆ ಮಾಡಿ ಹತ್ಯೆ ಮಾಡಿ ಪರಾರಿಯಾಗಿದ್ದ ಎಂದು ನಗರ ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದ್ದಾರೆ.