ಬೆಂಗಳೂರು: ಕಾಂಗ್ರೆಸ್ಗೆ ಕರ್ನಾಟಕ ಹಾಲು ಕರೆಯುವ ಹಸು ಆಗಿತ್ತು, ಇಲ್ಲಿಂದ ಪಡೆಯುತ್ತಿದ್ದರೇ ಹೊರತು ಕೊಡುತ್ತಿರಲಿಲ್ಲ. ಆದರೆ ನಾವು ಕರ್ನಾಟಕಕ್ಕೆ ನೀಡಬೇಕಾದ ಆದ್ಯತೆ ನೀಡುತ್ತಿದ್ದೇವೆ. ಇದೇ ನಮಗೂ ಕಾಂಗ್ರೆಸ್ಗೂ ಇರುವ ವ್ಯತ್ಯಾಸ. ಹಾಗಾಗಿ ರಾಜ್ಯದಲ್ಲಿ ಮತ್ತೊಮ್ಮೆ ಡಬಲ್ ಇಂಜಿನ್ ಸರ್ಕಾರವನ್ನು ಅಧಿಕಾರಕ್ಕೆ ತನ್ನಿ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ರಾಜ್ಯದ ಜನತೆಗೆ ಕರೆ ನೀಡಿದರು.
ನಗರದ ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ ಪ್ರಕೋಷ್ಠಗಳ ರಾಜ್ಯ ಸಮಾವೇಶ ಉದ್ಘಾಟಿಸಿ ನಮಸ್ಕಾರ, ಚೆನ್ನಾಗಿದೀರಾ ಅಂತ ಕನ್ನಡದಲ್ಲಿ ಭಾಷಣ ಆರಂಭಿಸಿದ ಕೇಂದ್ರ ಸಚಿವರು, ಕರ್ನಾಟಕದಲ್ಲಿ ಶೇಕಡಾ 101 ರಷ್ಟು ಬಿಜೆಪಿ ಗೆಲ್ಲುತ್ತದೆ. ನಮ್ಮ ಕಾರ್ಯಕರ್ತರ ಜೋಷ್ ಮತ್ತೆ ಡಬಲ್ ಇಂಜಿನ್ ಸರ್ಕಾರಗಳನ್ನು ಅಧಿಕಾರಕ್ಕೆ ತರುತ್ತದೆ. ಮೋದಿಯವರು ಸದೃಢ ಭಾರತ ನಿರ್ಮಿಸುವ ಪಣ ತೊಟ್ಟಿದ್ದಾರೆ. ನಮ್ಮ ಸಮಾಜದ ವಂಚಿತ ವರ್ಗಗಳ ಪರ ಮೋದಿಯವರು ಸದಾ ಚಿಂತಿಸುತ್ತಾರೆ. ಡಬಲ್ ಇಂಜಿನ್ ಸರ್ಕಾರ ಇರುವ ರಾಜ್ಯಗಳಲ್ಲಿ ಅಭಿವೃದ್ಧಿ ಕೆಲಸಗಳು ವೇಗವಾಗಿ ನಡೆಯುತ್ತಿವೆ ಎಂದರು.
ಕಾಂಗ್ರೆಸ್ ಇದ್ದಾಗ ಅಭಿವೃದ್ಧಿ ಮರೀಚಿಕೆ ಆಗಿತ್ತು. ರೈಲ್ವೆ ವಲಯಕ್ಕೆ ಕಾಂಗ್ರೆಸ್ ಇದ್ದಾಗ ಕರ್ನಾಟಕಕ್ಕೆ ಕೊಟ್ಟಿದ್ದು ವಾರ್ಷಿಕ 834 ಕೋಟಿ ಅಷ್ಟೇ. 2014 ಕ್ಕೂ ಮುನ್ನ ಕರ್ನಾಟಕಕ್ಕೆ ಕಾಂಗ್ರೆಸ್ ಎಷ್ಟು ಅನುದಾನ ಕೊಡುತ್ತಿತ್ತು? ಮೋದಿಯವರು ಕರ್ನಾಟಕಕ್ಕೆ 6091 ಕೋಟಿ ರೂ ಕೊಡುತ್ತಿದ್ದಾರೆ. ಕರ್ನಾಟಕಕ್ಕೆ ಕಾಂಗ್ರೆಸ್ ಯಾವಾಗಲೂ ತಾರತಮ್ಯ ಮಾಡುತ್ತಿತ್ತು. ಟೆಲಿಕಾಂ ಇರಲಿ ಬೇರೆ ಯಾವುದೇ ವಲಯ ಇರಲಿ, ಕಾಂಗ್ರೆಸ್ ಸರಿಯಾದ ಅನುದಾನ ಕೊಡುತ್ತಿರಲಿಲ್ಲ. ಆದರೆ ಮೋದಿ ರೈಲ್ವೆ ವಲಯವನ್ನು ಪೂರ್ಣ ಪುನಶ್ಚೇತನ ಮಾಡಿದ್ದಾರೆ. ಹೀಗಾಗಿ ಮತ್ತೆ ಡಬಲ್ ಇಂಜಿನ್ ಸರ್ಕಾರವನ್ನು ಅಧಿಕಾರಕ್ಕೆ ತರುವ ಅಗತ್ಯ ಇದೆ ಎಂದು ಕೇಂದ್ರ ಸಚಿವರು ಹೇಳಿದರು.
ನಂತರ ಮಾತನಾಡಿದ ಸಂಸದ ಡಿ ವಿ ಸದಾನಂದಗೌಡ, ಕರ್ನಾಟಕದಲ್ಲಿ ಗುಜರಾತ್ ಮಾಡೆಲ್ ಹಾಗೆ ಅಭಿವೃದ್ಧಿ ಮಾಡುತ್ತೇವೆ. ಗುಜರಾತ್ ಮಾಡೆಲ್ ಏನು ಅಂತ ತಿಳ್ಕೊಂಡು ಕಾಂಗ್ರೆಸ್ನವರು ಮಾತಾಡಲಿ. 2023 ರ ಕರ್ನಾಟಕ ಚುನಾವಣೆ ದಕ್ಷಿಣ ಭಾರತಕ್ಕೆ ಹೊಸ ದಿಕ್ಕು ತೋರಿಸುತ್ತದೆ. ಯಡಿಯೂರಪ್ಪ ಅವರು ಜಾತಿ ಆಧಾರಿತ ಯೋಜನೆ ಕೊಡಲಿಲ್ಲ. ಅವರು ನೂರಾರು ಕಾರ್ಯಕ್ರಮಗಳನ್ನು ಎಲ್ಲರಿಗೂ ಕೊಟ್ಟಿದ್ದಾರೆ. ಯಾವುದೇ ಜಾತಿಗೆ ಸೀಮಿತವಾಗಿ ಕಾರ್ಯಕ್ರಮ ಕೊಡಲಿಲ್ಲ. ಕುಲಕಸುಬು, ವೃತ್ತಿ ಆಧಾರಿತ ಕಾರ್ಯಕ್ರಮಗಳನ್ನು ಬಿಜೆಪಿ ಕೊಟ್ಟಿದೆ. ಇದೇ ಈಗ ಈ ದೇಶಕ್ಕೆ ಬೇಕಾಗಿದೆ ಎಂದರು.
ಸಮಾವೇಶದಲ್ಲಿ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ, ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಂಸದರಾದ ಪಿ ಸಿ ಮೋಹನ್, ಪರಿಷತ್ ಸದಸ್ಯ ರವಿಕುಮಾರ್, ಪಕ್ಷದ ಪ್ರಮುಖರು, 24 ವಿವಿಧ ಪ್ರಕೋಷ್ಠಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಮಾವೇಶದಲ್ಲಿ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿರುವ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.
ಇದನ್ನೂ ಓದಿ: ಬಿಜೆಪಿ ಯಾರನ್ನೂ ಕಡೆಗಣಿಸಲ್ಲ, ನಿಷ್ಠೆಯಿಂದ ಕೆಲಸ ಮಾಡಿ: ಪ್ರಕೋಷ್ಠ ಪ್ರಮುಖರಿಗೆ ಕಟೀಲ್ ಕರೆ