ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರ ಮತ್ತು ವಿವಿಧ ಸಮುದಾಯಗಳ ಮೀಸಲಾತಿ ಬೇಡಿಕೆ ಈಡೇರಿಸುವಲ್ಲಿ ಬಿಜೆಪಿ ಸರ್ಕಾರ ಎಡವಿರುವುದೇ ಈ ಬಾರಿಯ ಚುನಾವಣೆಯಲ್ಲಿ ಗೆಲ್ಲಲು ನಮಗೆ ದೊಡ್ಡ ಅಸ್ತ್ರಗಳಾಗಲಿವೆ ಎಂಬ ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ಸುರ್ಜೇವಾಲಾ ಅವರು ಮೀಸಲಾತಿಗೆ ಸಂಬಂಧಿಸಿದಂತೆ ಇತಿಹಾಸವನ್ನು ಓದಬೇಕು ಎಂದು ಸಲಹೆ ನೀಡಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಮುಖ್ಯಮಂತ್ರಿಗಳ ರಾಜೀನಾಮೆಗೆ ಆಗ್ರಹಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಮೀಸಲಾತಿ ಬಗ್ಗೆ ಕಾಂಗ್ರೆಸ್‌ಗೆ ಮಾತನಾಡುವ ನೈತಿಕ ಹಾಗೂ ರಾಜಕೀಯ ಅಧಿಕಾರವಿಲ್ಲ. ಈಗಾಗಲೇ ಮೀಸಲಾತಿಗೆ ಕಾನೂನು ರಚಿಸಿದ್ದು, ಆ ಪ್ರಕಾರ ನೇಮಕಾತಿ ಹಾಗೂ ಬಡ್ತಿ ಪ್ರಕ್ರಿಯೆ ಪ್ರಾರಂಭವಾಗಿದೆ. ಸಂವಿಧಾನದ ಶೆಡ್ಯೂಲ್ 9 ಕ್ಕೆ ಸೇರಿಸಲು ಸಚಿವ ಸಂಪುಟದ ಅನುಮೋದನೆಯಾಗಿದ್ದು, ರಾಜ್ಯಪಾಲರಿಗೆ ಕಳುಹಿಸಲಾಗಿದೆ. ಕಾನೂನು ಇಲಾಖೆ ಸಲಹೆ ಪಡೆದು ಪ್ರಕ್ರಿಯೆ ಜಾರಿಗೊಳಿಸಿದೆ. ಶೆಡ್ಯೂಲ್ 9 ಗೆ ಸೇರ್ಪಡೆ ಮಾಡುವ ಬದ್ಧತೆ ಸರ್ಕಾರಕ್ಕಿದೆ ಎಂದರು.
ಇದನ್ನೂ ಓದಿ: ಬಿಜೆಪಿ ಸರ್ಕಾರ ವಿದಾಯ ಹೇಳುವ ಕಾಲ ಬಂದಿದೆ: ಸುರ್ಜೆವಾಲಾ
ಮೀಸಲಾತಿ ಬಗ್ಗೆ ಮಾತನಾಡುವ ನೈತಿಕ, ರಾಜಕೀಯ ಅಧಿಕಾರ ಕಾಂಗ್ರೆಸ್‌ಗೆ ಇಲ್ಲ. ಅವರ ಸರ್ಕಾರದ ಅವಧಿಯಲ್ಲಿ ಬೇಡಿಕೆ ಇದ್ದಾಗ ಏನೇನು ಮಾಡಿಲ್ಲ. ರಣದೀಪ್ ಸಿಂಗ್ ಸುರ್ಜೇವಾಲಾ ಇದರ ಬಗ್ಗೆ ಇತಿಹಾಸ ಓದಬೇಕು ಎಂದು ಸಲಹೆ ಕೊಡ್ತೀನಿ. ಮೀಸಲಾತಿ ಮಾಡಿ, ಕಾನೂನು ಮಾಡಿ ಅದರ ಪ್ರಕಾರ ನೇಮಕಾತಿ ಕೂಡ ಶುರುವಾಗಿದೆ ಎಂದು ಹೇಳಿದರು.
9 ನೇ ಶೆಡ್ಯೂಲ್ ಸೇರಿಸಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆಯಾಗಿದೆ. ರಾಜ್ಯಪಾಲರಿಗೂ ಕೂಡ ಕಳುಹಿಸಲಾಗಿದೆ. ಅದಕ್ಕೆ ಕೆಲವು ನಿಯಮಾವಳಿಗಳಿದೆ. ಅದರಂತೆ ಎಜಿ ಸಲಹೆ ತೆಗೆದುಕೊಂಡು ನಾವು ಪ್ರೊಸಿಜರ್ ಮಾಡ್ತಿದ್ದೇವೆ. 9ನೇ ಶೆಡ್ಯೂಲ್‌ಗೆ ಸೇರಿಸುತ್ತವೆ ಎಂದು ಹೇಳಿದ್ದೇವೆ. ಆ ಬಗ್ಗೆ ನಮಗೆ ಬದ್ಧತೆಯಿದೆ. ಅದರಂತೆ ಕಳುಹಿಸುತ್ತೇವೆ, ಎಲ್ಲಾ ಪ್ರೊಸಿಜರ್‌ಗಳ ಕೂಡ ಶುರುವಾಗಿದೆ ಎಂದರು.
ಇದನ್ನೂ ಓದಿ: ಕರ್ನಾಟಕದ ಯುವಜನರ ಭವಿಷ್ಯಕ್ಕಾಗಿ ಯುವ ಗ್ಯಾರೆಂಟಿ ಕಾರ್ಡ್ ರಾಹುಲ್ ಘೋಷಣೆ : ರಣದೀಪ್‌ಸಿಂಗ್ ಸುರ್ಜೇವಾಲಾ
ಅರ್ಜಿ ಹರಿದು ಯುವಕನ ಆಕ್ರೋಶ: ಕೆಪಿಸಿಎಲ್ ಹುದ್ದೆ ನೇಮಕಾತಿ ಗೊಂದಲ ವಿಚಾರವಾಗಿ ಸಿಎಂ ಕೊಟ್ಟ ಉತ್ತರದಿಂದ ಸಿಟ್ಟಾಗಿ ಯುವಕನೋರ್ವ ಅರ್ಜಿ ಹರಿದು ಹಾಕಿದ ಘಟನೆ ಗೃಹ ಕಚೇರಿ ಕೃಷ್ಣಾದಲ್ಲಿ ನಡೆಯಿತು. ನೇಮಕಾತಿ ವಿಚಾರದಲ್ಲಿ ಕೋರ್ಟ್ ಸ್ಟೇ ಇದೆ, ಗೊಂದಲ ಸರಿಪಡಿಸಿ ಅಂತ ಯುವಕ ಅರ್ಜಿ ಕೊಟ್ಟಿದ್ದ. ಸ್ಟೇ ಇದ್ರೆ ನೀವೇ ಕೋರ್ಟ್ ನಲ್ಲಿ ನೋಡ್ಕೋಬೇಕು ಎಂದು ಸಿಎಂ ಉತ್ತರಿಸಿದರು. ಸಿಎಂ ಉತ್ತರದಿಂದ ಸಿಟ್ಟಾಗಿ ಯುವಕ ಅರ್ಜಿ ಹರಿದು ಹಾಕಿದನು.
ಕಳೆದ ಐದಾರು ವರ್ಷಗಳಿಂದ ಬರೆದ ಪರೀಕ್ಷೆಗಳ ನೇಮಕಾತಿಗಳನ್ನೆಲ್ಲ ರದ್ದು ಮಾಡಲಾಗ್ತಿದೆ. ಈ ಸಲ ಕೆಪಿಟಿಸಿಎಲ್ ಹುದ್ದೆಗೆ ಪರೀಕ್ಷೆ ಬರೆದಿದ್ದೆ. ಈ ಸಲವೂ ನೇಮಕಾತಿ ರದ್ದು ಮಾಡಲಾಗ್ತಿದೆ ಎಂದು ಯುವಕ ಆರೋಪಿಸಿದ್ದಾನೆ.