ಬೆಂಗಳೂರು: ಸಮೂಹ ಸಾರಿಗೆ ವ್ಯವಸ್ಥೆಯಲ್ಲಿ ಡಿಜಿಟಲ್ ಪಾವತಿ ಪದ್ಧತಿ ಉತ್ತೇಜಿಸಲು ಸರ್ಕಾರ ಮುಂದಾಗಿದೆ. ನಮ್ಮ ಮೆಟ್ರೋ ಬಳಿಕ ಇದೀಗ ಬಿಎಂಟಿಸಿಯಲ್ಲೂ ಡಿಜಿಟಲ್ ಪಾವತಿ ಮೂಲಕ ಟಿಕೆಟ್ ಖರೀದಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಇನ್ನೊಂದು ತಿಂಗಳಿನಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಬಿಎಂಟಿಸಿ ಬಸ್ಗಳಲ್ಲಿ ಪ್ರಯಾಣಿಸಬಹುದಾಗಿದೆ.
ಪ್ರಾಯೋಗಿಕವಾಗಿ ಕೋವಿಡ್ ವೇಳೆ ಪರಿಚಯಿಸಿದ್ದ ಕ್ಯೂಆರ್ ಕೋಡ್ ಸ್ಕ್ಯಾನ್ ಪದ್ಧತಿಯನ್ನು ಮತ್ತೊಮ್ಮೆ ಪರಿಚಯಿಸಲು ಬಿಎಂಟಿಸಿ ಮುಂದಾಗಿದೆ. ತಾಂತ್ರಿಕ ಕಾರಣದಿಂದ ಸ್ಥಗಿತಗೊಂಡಿದ್ದ ಡಿಜಿಟಲ್ ಪಾವತಿ ಸೇವೆಯನ್ನು ಎಲ್ಲ ಸಮಸ್ಯೆ ಸರಿಪಡಿಸಿಕೊಂಡು ಪೂರ್ಣ ಪ್ರಮಾಣದಲ್ಲಿ ಆರಂಭಿಸಲಾಗುತ್ತಿದೆ.
ಈಗಾಗಲೇ ಕೆಲ ಬಸ್ಗಳಲ್ಲಿ ವಿಶೇಷವಾಗಿ ಹವಾ ನಿಯಂತ್ರಿತ ಬಸ್ಗಳಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಟಿಕೆಟ್ ಖರೀದಿಸಬಹುದಾಗಿದೆ. ಸದ್ಯ ದಿನದ ಪಾಸ್ ಮತ್ತು ತಿಂಗಳ ಪಾಸ್ಗಳನ್ನು ಕ್ಯೂಆರ್ ಕೋಡ್ ಮೂಲಕ ಹಣ ಪಾವತಿಸಿ ಪಡೆದುಕೊಳ್ಳುವ ವ್ಯವಸ್ಥೆ ಲಭ್ಯವಿದೆ. ಇದರ ಜೊತೆ ಇದೀಗ ಟಿಕೆಟ್ ಅನ್ನು ಕೂಡ ಪಡೆದುಕೊಳ್ಳಬಹುದು.
ಬಿಎಂಟಿಸಿ ಬಸ್ಗಳ ನಿರ್ವಾಹಕರಿಗೆ ಆಧುನಿಕ ವಿದ್ಯುನ್ಮಾನ ಟಿಕೆಟಿಂಗ್ ಮಷಿನ್ ಒದಗಿಸಲಾಗುತ್ತಿದೆ. ಇದರಲ್ಲಿಯೇ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ಹಣ ನೇರವಾಗಿ ನಿಗಮದ ಖಾತೆಗೆ ಜಮೆಯಾಗಲಿದೆ. ಪ್ರಯಾಣಿಕರಿಗೆ ಟಿಕೆಟ್ ಲಭ್ಯವಾಗಲಿದೆ. ಡಿಜಿಟಲ್ ಪಾವತಿ ಖಚಿತಪಡಿಸಿಕೊಳ್ಳಲು ಸ್ಪೀಕರ್ಗಳನ್ನೂ ಬಸ್ಗಳಲ್ಲಿ ಅಳವಡಿಕೆ ಮಾಡಲಾಗುತ್ತದೆ ಎಂದು ನಿಗಮದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈಗಾಗಲೇ ಡಿಜಿಟಲ್ ಪಾವತಿ ಸ್ವೀಕಾರ ಮಾಡಬಹುದಾದ ವ್ಯವಸ್ಥೆ ಹೊಂದಿರುವ ಸಾವಿರದಷ್ಟು ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರಗಳನ್ನು ಖರೀದಿಸಲಾಗಿದೆ. ಡಿಸೆಂಬರ್ 10ರ ವೇಳೆಗೆ ಬಿಎಂಟಿಸಿಯ ಎಲ್ಲ ಬಸ್ಗಳಿಗೂ ಲಭ್ಯವಾಗುವಂತೆ 8 ಸಾವಿರ ಇಟಿಎಂ ಖರೀದಿ ಮಾಡಲಾಗುತ್ತದೆ ಎನ್ನಲಾಗಿದೆ. ಡಿಜಿಟಲ್ ಪಾವತಿ ವ್ಯವಸ್ಥೆ ಮೂಲಕ ಪ್ರಯಾಣಿಕರು ಮತ್ತು ನಿರ್ವಾಹಕರ ನಡುವೆ ಚಿಲ್ಲರೆ ಗದ್ದಲ ತಪ್ಪಲಿದ್ದು, ಸ್ಮಾರ್ಟ್ ಟಿಕೆಟಿಂಗ್ ವ್ಯವಸ್ಥೆ ಅಳವಡಿಸಿಕೊಂಡಂತಾಗಲಿದೆ.
ಇದನ್ನೂ ಓದಿ: ನಮ್ಮ ಮೆಟ್ರೋದಲ್ಲಿ ಕ್ಯೂಆರ್ ಕೋಡ್ ಟಿಕೆಟಿಂಗ್ ವ್ಯವಸ್ಥೆ ಶುರು: ಮೊದಲ ದಿನವೇ 1,669 ಮಂದಿ ಬಳಕೆ