ಬೆಂಗಳೂರು: ನಗರದ ಬಿಎಂಟಿಸಿ ಬಸ್ಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿರುವ ಬಗ್ಗೆ ಕಾರಣ ತಿಳಿದುಕೊಳ್ಳಲು ತನಿಖೆ ನಡೆಸುವಂತೆ ಸೂಚನೆ ನೀಡಲಾಗಿದೆ. ಇತ್ತೀಚೆಗೆ ನಡೆದ ಪ್ರತ್ಯೇಕ ಘಟನೆಗಳಲ್ಲಿ ಎರಡು ಬಸ್ಗಳಿಗೆ ಬೆಂಕಿ ಹೊತ್ತಿಕೊಂಡಿತ್ತು.
ಕಳೆದ ಜನವರಿ 21ರಂದು ಕೆಂಪೇಗೌಡ ಬಸ್ ನಿಲ್ದಾಣದಿಂದ ದೀಪಾಂಜಲಿ ನಗರಕ್ಕೆ 25 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಸಮಯದಲ್ಲಿ ಮಕ್ಕಳಕೂಟ ಸಿಗ್ನಲ್ ಬಳಿ ವಾಹನದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಆಗ ಚಾಲಕರ ಸಮಯ ಪ್ರಜ್ಞೆಯಿಂದ ಪ್ರಯಾಣಿಕರು ಬಚಾವ್ ಆಗಿದ್ದರು.
ಈ ಘಟನೆ ಮರೆಯುವ ಮುನ್ನವೇ ಮಂಗಳವಾರ ಡಿಪೋ 44 ಅಂಜನಾಪುರಕ್ಕೆ ಸೇರಿದ ಬಿಎಂಟಿಸಿ ಬಸ್ವೊಂದು ಕೆಂಪೇಗೌಡ ಬಸ್ ನಿಲ್ದಾಣದಿಂದ ಬನಶಂಕರಿ ಟಿಟಿಎಂಸಿ ಕಡೆಗೆ ತೆರಳುತ್ತಿದ್ದಾಗ ಬೆಂಕಿ ಹೊತ್ತಿ ಉರಿದಿತ್ತು. ನಂದಾ ಟಾಕೀಸ್ ಬಳಿ 25 ಪ್ರಯಾಣಿಕರಿದ್ದ ಈ ಬಸ್ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಘಟನೆಯಲ್ಲಿ ಎಲ್ಲ ಪ್ರಯಾಣಿಕರು ಪಾರಾಗಿದ್ದರು.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಈ ಘಟನೆ ಕಾರಣದ ಬಗ್ಗೆ ತನಿಖೆ ನಡೆಸಿ ವಿವರವಾದ ವರದಿ ಸಲ್ಲಿಸಲು ಮುಖ್ಯ ತಾಂತ್ರಿಕ ಅಭಿಯಂತರರಿಗೆ ಮತ್ತು ತಂಡಕ್ಕೆ ಸೂಚಿಸಲಾಗಿದೆ. ಅಶೋಕ್ ಲೇಲ್ಯಾಂಡ್ ಮತ್ತು ಅಗ್ನಿಶಾಮಕ ಸೇವೆಗಳ ತಜ್ಞರು ತಾಂತ್ರಿಕ ಕಾರಣಗಳಿಗಾಗಿ ಬೆಂಕಿಯಲ್ಲಿ ಹಾನಿಗೊಳಗಾದ ಎರಡು ಬಸ್‌ಗಳನ್ನು ಪರಿಶೀಲಿಸುತ್ತಿದ್ದಾರೆ.
ಬಿಎಂಟಿಸಿ ಈ ಘಟನೆಯ ಕಾರಣವನ್ನು ಕೂಲಂಕಷವಾಗಿ ತನಿಖೆ ನಡೆಸುತ್ತಿದೆ ಮತ್ತು ಬಸ್‌ಗಳು ಸುಸ್ಥಿತಿಯಲ್ಲಿ ಕಾರ್ಯನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಲು ಎಲ್ಲ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಎಲ್ಲಾ ಅಶೋಕ್ ಲೇಲ್ಯಾಂಡ್ ಮಿಡಿ ಬಸ್‌ಗಳು ಕಾರ್ಯನಿರ್ವಹಿಸಲು ಅದರ ಸುರಕ್ಷತೆಗಾಗಿ ಸಂಪೂರ್ಣವಾಗಿ ಪರಿಶೀಲಿಸಲಾಗಿದೆ ಅಂತ ಬಿಎಂಟಿಸಿ ನಿಗಮದಿಂದ ಪ್ರಕಟಣೆ ಹೊರಡಿಸಲಾಗಿದೆ.
ಇದನ್ನೂ ಓದಿ: ಶೀಘ್ರದಲ್ಲೇ ಬಿಬಿಎಂಪಿಯಿಂದ 'ಗಾರ್ಬೇಜ್ ಯೂಸರ್ ಬಿಲ್'.. ಪವರ್ ಬಿಲ್ ಜೊತೆ ಕಸದ ಬಿಲ್ ಕಟ್ಟಲು ಸಜ್ಜಾಗಿ!