ಬೆಂಗಳೂರು: ಒಂದೆಡೆ ಕೊರೊನಾ ಆತಂಕ, ಮತ್ತೊಂದೆಡೆ ಟಿಕೆಟ್ ವಿತರಣೆ ಇಲ್ಲದೇ ಪಾಸ್ ಖರೀದಿಸಬೇಕಿತ್ತು. ಆದರೆ ಸಾಕಷ್ಟು ವಿರೋಧದ ನಂತರ ಬಿಎಂಟಿಸಿ ಟಿಕೆಟ್ ವಿತರಣೆಗೆ ಮುಂದಾಯ್ತು. ಇದರ ನಡುವೆ ನಿಗಮದ ಸಿಬ್ಬಂದಿಗೆ ಕೊರೊನಾ ತಗುಲಿದ ಸುದ್ದಿ ಕೇಳಿ ಬರುತ್ತಿದ್ದಂತೆ ಪ್ರಯಾಣಿಕರ ಸಂಖ್ಯೆ ಇಳಿಕೆಮುಖವಾಯ್ತು.
ಇಂಥ ಪರಿಸ್ಥಿತಿಯಲ್ಲಿ ತನ್ನ ಪ್ರಯಾಣಿಕರ ಸುರಕ್ಷತೆಗೆ ನಿಗಮ ಮುಂದಾಗಿದ್ದು, ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಮೂಲಕ ಕ್ಯೂಆರ್ ಕೋಡ್ ಮೂಲಕ ಆನ್ಲೈನ್ ಪೇಮೆಂಟ್ ಮಾಡುವ ವ್ಯವಸ್ಥೆ ಇದ್ದರೂ, ಜನ ಅಷ್ಟು ಉಪಯೋಗಿಸುತ್ತಿರಲಿಲ್ಲ. ಆದರೆ ಇದೀಗ ಆನ್ಲೈನ್ ಪೇಮೆಂಟ್ ಮಾಡುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಜನರು ಕೂಡಾ ಒಳ್ಳೆಯ ರೆಸ್ಪಾನ್ಸ್ ನೀಡುತ್ತಿದ್ದಾರೆ. ಯಾಕೆಂದರೆ, ಡಿಜಿಟಲ್ ಪೇಮೆಂಟ್ನಲ್ಲಿ ಕಂಡಕ್ಟರ್ ನೇರವಾಗಿ ಹಣ ನೀಡುವ ಅವಶ್ಯಕತೆ ಇರುವುದಿಲ್ಲ. ಡಿಜಿಟಲ್ ಪೇಮೆಂಟ್ ಆ್ಯಪ್ನ ಮೂಲಕ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವುದು, ಟಿಕೆಡ್ ದರವನ್ನು ನಮೂದಿಸುವುದಕ್ಕೆ ಕೇವಲ ಸೆಂಡ್ ಬಟನ್ ಕ್ಲಿಕ್ ಮಾಡಿದರೆ ಕೇಲಸ ಸಲೀಸು. ಯುಪಿಐ ನಂಬರ್ ಹಾಕಿ ಪೇಮೆಂಟ್ ಮಾಡಬಹುದು.
ಡಿಜಿಟಲ್ ಪೇಮೆಂಟ್ಗೆ ಮೇ 19 ರಂದೇ ಚಾಲನೆ ನೀಡಲಾಗಿದ್ದರೂ, ಕೊರೊನಾದ ಈ ಪರಿಸ್ಥಿತಿಯಲ್ಲಿ ಇದೀಗ ಪ್ರಯಾಣಿಕರು ನಿಧಾನವಾಗಿ ಡಿಜಿಟಲ್ ನತ್ತ ಹೆಜ್ಜೆ ಹಾಕುತ್ತಿದ್ದಾರೆ. ಇತ್ತೀಚೆಗೆ ಡಿಜಿಟಲ್ ವಿಧಾನದ ಬಳಕೆ ಜಾಸ್ತಿಯಾಗುತ್ತಿದ್ದು, ನಿಗಮದ ಆದಾಯಕ್ಕೂ ಮತ್ತೊಂದು ಕಾರಣವಾಗಿದೆ.
ಡಿಜಿಟಲ್ ಪೇಮೆಂಟ್ ಬಳಸಿ ಬಂದ ಮೊತ್ತವೆಷ್ಟು?
ಜೂನ್ 8 - 951 ಮಂದಿ- 48,797 ರೂ
ಜೂನ್9- 951 ಮಂದಿ- 48,923 ರೂ
ಜೂನ್ 10- 1047 ಮಂದಿ- 57,308 ರೂ
ಜೂನ್ 11- 948 ಮಂದಿ- 50,519 ರೂ
ಜೂನ್ 12-1,132 ಮಂದಿ- 55,597 ರೂ
ಜೂನ್ 13- 828 ಮಂದಿ- 42,357 ರೂ
ಜೂನ್ 14 - 635 ಮಂದಿ- 32,797 ರೂ
ಒಟ್ಟಾರೆ ಬಿಎಂಟಿಸಿಯಲ್ಲಿ ಡಿಜಿಟಲ್ ಪೇಮೆಂಟ್ ಬಳಕೆಯಿಂದಾಗಿ ಇನ್ಮುಂದೆ ಚಿಲ್ಲರೆ ವಿಷಯಕ್ಕೆ ಆಗುತ್ತಿದ್ದ ಮಾತಿನ ಚಕಮಕಿಯೂ ನಿಲ್ಲಬಹುದು. ಜೊತೆಗೆ ನಿತ್ಯದ ಕೆಲಸಕ್ಕೆ ತೆರಳುವ ಸಾರ್ವಜನಿಕರು ಕೊರೊನಾ ವೈರಸ್ ಭೀತಿಯಿಲ್ಲದೆ ಸುರಕ್ಷಿತ ಪ್ರಯಾಣ ಮಾಡಬಹುದು.