ಬೆಂಗಳೂರು: ಜನರು ಪಾವತಿಸಿದ ತೆರಿಗೆ ಹಣವನ್ನು ಅಭಿವೃದ್ಧಿಗೆ ಬಳಸುವ ಬದಲು ಸ್ವಾರ್ಥಕ್ಕೆ ಬಳಸಲಾಗುತ್ತಿದೆ. ಅಂತೆಯೇ ಸಾರ್ವಜನಿಕ ಜೀವನದ ಮೌಲ್ಯಗಳು ನಶಿಸುತ್ತಿವೆ ಎಂದು ಶಾಸಕ ಅರಗ ಜ್ಞಾನೇಂದ್ರ ಹೇಳಿದರು.
ವಿಧಾನಸಭೆಯಲ್ಲಿ ಇಂದು ಭಾರತ ಸಂವಿಧಾನ ಕುರಿತ ವಿಶೇಷ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಒಂದೆಡೆ ದೇಶ ಬಡವಾಗುತ್ತಿದೆ. ಮತ್ತೊಂದೆಡೆ ವ್ಯಕ್ತಿ ಶ್ರೀಮಂತನಾಗುತ್ತಿದ್ದಾನೆ. ಆಸ್ತಿ ಘೋಷಣೆ ಮಾಡದ ಬಹಳಷ್ಟು ಕುಬೇರರು ನಮ್ಮಲ್ಲಿದ್ದಾರೆ. ಅಷ್ಟೇ ಅಲ್ಲದೆ, ನಡೆ ನುಡಿಯ ನಡುವೆ ಕಿ.ಮೀಗಳ ಅಂತರವಿದ್ದರೆ ಹೇಗೆ? ಎಂದು ಪ್ರಶ್ನಿಸಿದರು.
ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಭಾರತ ರತ್ನ ಪ್ರಶಸ್ತಿ ಕೊಡಲು ವಿ.ಪಿ.ಸಿಂಗ್ ಅವರು ಪ್ರಧಾನಿಯಾಗಿ ಬರಬೇಕಾಯಿತು. ಆದರೆ ಅದರ ಹಿಂದಿನ ಸರ್ಕಾರಗಳಿಗೆ ಏಕೆ ಕೊಡಲಾಗಲಿಲ್ಲ ಎಂಬ ಪ್ರಶ್ನೆ ಕಾಡುತ್ತಿದೆ. ಅಂಬೇಡ್ಕರ್ ಅವರು ಎರಡು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಸೋಲಿಸಲಾಯಿತು. ಅಂಥ ಮಹಾನುಭಾವರನ್ನು ಅವಿರೋಧವಾಗಿ ಆಯ್ಕೆ ಮಾಡಬೇಕಿತ್ತು. ಅವರು ನಿಧನರಾದಾಗ ಪಾರ್ಥಿವ ಶರೀರದ ಸಂಸ್ಕಾರಕ್ಕೂ ಜಾಗ ಕೊಡಲಿಲ್ಲ. ಬಾಂಬೆ ಕಡಲ ಮರಳು ದಿಬ್ಬದ ಮೇಲೆ ಅವರ ಸಂಸ್ಕಾರ ಮಾಡಲಾಗಿದೆ ಎಂದು ಅರಗ ಜ್ಞಾನೇಂದ್ರ ಬೇಸರ ವ್ಯಕ್ತಪಡಿಸಿದರು.