ಬೆಂಗಳೂರು: ರಾಷ್ಟ್ರೀಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಇಂದು ಕಾವೇರಿ ನಿವಾಸದಲ್ಲಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು.
ನಿನ್ನೆ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ್ದ ಬಿ.ಎಲ್.ಸಂತೋಷ್ ಸಿಎಂ ಅವರನ್ನು ಭೇಟಿಯಾಗಿ ರಾಜಕೀಯ ವಿದ್ಯಮಾನ, ಬೆಂಗಳೂರು ಗಲಭೆ ಪ್ರಕರಣ, ಕೊರೊನಾ ನಿಯಂತ್ರಣ, ಪಕ್ಷ ಸಂಘಟನೆ ಸಂಬಂಧ ಚರ್ಚೆ ನಡೆಸಿದ್ದಾರೆ. ಇದೇ ವೇಳೆ, ಕೊರೊನಾದಿಂದ ಯಡಿಯೂರಪ್ಪ ಚೇತರಿಕೆ ಕಂಡ ಹಿನ್ನೆಲೆ ಅವರ ಆರೋಗ್ಯ ವಿಚಾರಿಸಿ ಸಿಎಂಗೆ ಗಣೇಶ ಹಬ್ಬದ ಶುಭಾಶಯಗಳನ್ನೂ ತಿಳಿಸಿದರು.
ಇತ್ತೀಚಿನ ರಾಜಕೀಯ ಬೆಳವಣಿಗೆ, ಸಂಪುಟ ವಿಸ್ತರಣೆ ಸೇರಿ ಹಲವು ವಿಚಾರಗಳ ಬಗ್ಗೆ ಸಿಎಂ ಜೊತೆ ಚರ್ಚಿಸಿದ್ದಾರೆ. ಈ ವೇಳೆ, ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ಕೂಡ ಸಾಥ್ ನೀಡಿದ್ದರು. ಸುಮಾರು ಎರಡು ತಾಸುಗಳ ಕಾಲ ಕಾವೇರಿ ನಿವಾಸದಲ್ಲಿ ಸಿಎಂ ಜೊತೆ ಬಿ.ಎಲ್. ಸಂತೋಷ್ ಚರ್ಚೆ ನಡೆಸಿದರು.
ನಿನ್ನೆ ಬಿಜೆಪಿ ಕಚೇರಿಗೆ ಸಚಿವರಾದ ಬೊಮ್ಮಾಯಿ ಮತ್ತು ಸುಧಾಕರ್ ಅವರನ್ನು ಕರೆಸಿ ಬಿ.ಎಲ್.ಸಂತೋಷ್ ಚರ್ಚಿಸಿದ್ದರು. ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಕರೆಯಿಸಿಕೊಂಡು ಡಿಜೆ ಹಳ್ಳಿ-ಕೆಜಿ ಹಳ್ಳಿ ಗಲಭೆ ಬಗ್ಗೆ ಮಾಹಿತಿ ಪಡೆದಿದ್ದರು. ಜೊತೆಗೆ ಸಚಿವ ಸುಧಾಕರ್ ಅವರ ಜತೆ ರಾಜ್ಯದಲ್ಲಿ ಕೊರೊನಾ ನಿಯಂತ್ರಣ ಕ್ರಮಗಳ ಬಗ್ಗೆ ಚರ್ಚಿಸಿದ್ದರು.
ನಾಳೆ ಬಿಜೆಪಿ ಪದಾಧಿಕಾರಿಗಳ ಸಭೆ:
ನಾಳೆ ರಾಜ್ಯ ಬಿಜೆಪಿಯ ನೂತನ ಪದಾಧಿಕಾರಿಗಳ ಸಭೆ ನಿಗದಿಯಾಗಿದೆ. ರಾಜ್ಯದಲ್ಲಿ ಪಕ್ಷ ಸಂಘಟನೆ ಕುರಿತು ನೂತನ ಪದಾಧಿಕಾರಿಗಳಲ್ಲಿ ಬಿ.ಎಲ್. ಸಂತೋಷ್ ಸಮಾಲೋಚನೆ ನಡೆಸಿ, ಪಕ್ಷ ಸಂಘಟನೆ ಬಗ್ಗೆ ಸಲಹೆ ಸೂಚನೆ ನೀಡಲಿದ್ದಾರೆ.
ಕಾಂಗ್ರೆಸ್ ಕೋಟೆಗಳಲ್ಲಿ ಪಕ್ಷ ಸಂಘಟನೆಗೆ ಆದ್ಯತೆ ನೀಡುವ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿದು ಬಂದಿದೆ. ಈ ಸಭೆಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಸಹ ಇರಲಿದ್ದು, ರಾಜ್ಯ ಬಿಜೆಪಿಯ ನಾನಾ ಮೋರ್ಚಾಗಳಿಗೆ ಪದಾಧಿಕಾರಿಗಳ ನೇಮಕ ಬಾಕಿ ಇರುವುದರಿಂದ ಈ ಬಗ್ಗೆ ಹೆಚ್ಚಿನ ಚರ್ಚೆ ನಡೆಯಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.