ಬೆಂಗಳೂರು: ಎಲ್ಲ ಅವಕಾಶಗಳ ಹೊರತಾಗಿಯೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ಸೋಲಿಸಲು ಬಿಜೆಪಿ ಹೈಕಮಾಂಡ್ ರಣತಂತ್ರ ರೂಪಿಸುತ್ತಿದೆ. ಅದರ ಭಾಗವಾಗಿ ರಾಜ್ಯ ಬಿಜೆಪಿಯ ಹಿರಿಯ ನಾಯಕ ಹಾಗೂ ವೀರಶೈವ ಲಿಂಗಾಯತ ಸಮುದಾಯದ ಅಗ್ರಗಣ್ಯ ನಾಯಕ ಬಿ.ಎಸ್.ಯಡಿಯೂರಪ್ಪ ಅವರನ್ನು ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಭೇಟಿ ಮಾಡಿ ಮಾತುಕತೆ ನಡೆಸಿದರು. ಮೂಲಗಳ ಪ್ರಕಾರ ಶೆಟ್ಟರ್ಗೆ ಖೆಡ್ಡಾ ಸಿದ್ದಪಡಿಸಲಾಗಿದೆ ಎಂದು ತಿಳಿದುಬಂದಿದೆ.
ಕುಮಾರಪಾರ್ಕ್ನಲ್ಲಿರುವ ಪಕ್ಷದ ಹಿರಿಯ ನಾಯಕ, ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿಎಸ್ ಯಡಿಯೂರಪ್ಪ ಅಧಿಕೃತ ನಿವಾಸ ಕಾವೇರಿಗೆ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಭೇಟಿ ನೀಡಿದರು. ಪ್ರಸ್ತುತ ರಾಜ್ಯ ರಾಜಕೀಯ ವಿದ್ಯಮಾನಗಳ ಕುರಿತು ಸಮಾಲೋಚನೆ ನಡೆಸಿದರು. ವಿಶೇಷವಾಗಿ ಪಕ್ಷದಲ್ಲಿನ ಬಂಡಾಯದ ವಿಚಾರದ ಕುರಿತು ಚರ್ಚೆ ನಡೆಸಲಾಯಿತು. ಕಳೆದ ರಾತ್ರಿ ಅಮಿತ್ ಶಾ ನಡೆಸಿದ ಸಭೆಯಲ್ಲಿ ಚರ್ಚಿತವಾದ ವಿಷಯಗಳ ಕುರಿತು ವಿಸ್ತೃತವಾದ ಚರ್ಚೆ ನಡೆಸಲಾಯಿತು.
ಎಲ್ಲ ಅವಕಾಶಗಳನ್ನು ಕೊಟ್ಟು ಈಗಲೂ ಹೆಚ್ಚಿನ ಅವಕಾಶದ ಭರವಸೆ ನೀಡಿದ ಹೊರತಾಗಿಯೂ ಕಾಂಗ್ರೆಸ್ ಸೇರಿದ ಜಗದೀಶ್ ಶೆಟ್ಟರ್ ನಿಲುವಿಗೆ ಅಮಿತ್ ಶಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜನಸಂಘದ ಕಾಲದಿಂದಲೂ ಪಕ್ಷದ ಜೊತೆ ಬೆಳೆದು ಬಂದ ಶೆಟ್ಟರ್ ಕುಟುಂಬ ಪಕ್ಷ ನಿಷ್ಟೆಗೆ ಹೆಸರಾಗಿತ್ತು. ಆದರೆ, ಕೇವಲ ಒಂದು ಟಿಕೆಟ್ ವಿಚಾರಕ್ಕೆ ಇಂತಹ ನಿರ್ಧಾರ ತೆಗೆದುಕೊಳ್ಳುವ ಮೂಲಕ ಪಕ್ಷದ ವಿರುದ್ಧ ನಿಲುವು ತಳೆದಿದ್ದು ಪಕ್ಷದ ಬಲ ಏನು ಎನ್ನುವುದನ್ನು ಚುನಾವಣೆಯಲ್ಲಿ ಅವರಿಗೆ ತೋರಿಸಬೇಕು ಎಂದು ಸೂಚಿಸಲಾಗಿದೆ.
ಅಮಿತ್ ಶಾ ಸೂಚನೆ ಹಿನ್ನೆಲೆಯಲ್ಲಿ ರಾಜ್ಯ ನಾಯಕರು ಕಾರ್ಯಪ್ರವೃತ್ತರಾಗಿದ್ದು, ಖುದ್ದು ಬಿ.ಎಲ್ ಸಂತೋಷ್ ಅಖಾಡಕ್ಕೆ ದುಮುಕಿದ್ದಾರೆ. ವಿಶೇಷ ಕಾರ್ಯತಂತ್ರ ಹೆಣೆಯಲು ಮುಂದಾಗಿದ್ದಾರೆ. ಇದಕ್ಕೆ ಪೂರಕವಾಗಿ ಯಡಿಯೂರಪ್ಪ ಜೊತೆ ಮಾತುಕತೆ ನಡೆಸಿದ್ದಾರೆ. ಸಂಘಟನೆ ಹಿನ್ನೆಲೆಯ ಮಹೇಶ್ ಟೆಂಗಿನಕಾಯಿ ಪಕ್ಷದ ಅಭ್ಯರ್ಥಿಯಾಗಿದ್ದು, ಯಾವ ಕಾರಣಕ್ಕೂ ಅವರಿಗೆ ಹಿನ್ನಡೆಯಾಗಬಾರದು ವ್ಯಕ್ತಿಗಿಂತ ಸಂಘಟನೆ ಮುಖ್ಯ ಎನ್ನುವುದನ್ನು ತೋರಿಸಬೇಕು ಅದಕ್ಕೆ ಸಹಕಾರ ನೀಡಬೇಕು.
ಲಿಂಗಾಯತ ಸಮುದಾಯವನ್ನು ಎತ್ತಿಕಟ್ಟುವ ಪ್ರಯತ್ನವನ್ನು ವಿಫಲಗೊಳಿಸಿ ಲಿಂಗಾಯತ ಮತ ಬ್ಯಾಂಕ್ ಭದ್ರಪಡಿಸಿಕೊಳ್ಳಬೇಕು, ಬಂಡಾಯದ ಕಡೆ ಹೆಚ್ಚಿನ ಪ್ರಚಾರ ನಡೆಸಬೇಕು ಎನ್ನುವ ವಿಚಾರದ ಬಗ್ಗೆ ಹೆಚ್ಚಿನ ಚರ್ಚೆ ನಡೆಸಿದರು. ಸವದಿ ಕ್ಷೇತ್ರದ ವಿಚಾರದ ಬಗ್ಗೆಯೂ ಚರ್ಚೆಯಾಯಿತು. ಆದರೆ ಬಹುಪಾಲ ಶೆಟ್ಟರ್ ಗೆ ಖೆಡ್ಡಾ ಸಿದ್ದಪಡಿಸುವ ಭಾಗವಾಗಿಯೇ ಚರ್ಚೆಯಾಯಿತು ಎನ್ನಲಾಗಿದೆ. ನಂತರ ರಾಜ್ಯದಲ್ಲಿ ವಾತಾವರಣ ಹೇಗಿದೆ ಎನ್ನುವ ಕುರಿತು ಮಾತುಕತೆ ನಡೆಸಿದರು.
ಸಂತೋಷ್ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಬಿ.ಎಲ್ ಸಂತೋಷ್ ಭೇಟಿ ಮಾಡಿದ್ದರು. ಪೊಲಿಟಿಕಲ್ ಸಿಚುಯೇಷನ್ ಹೇಗಿದೆ? ಅನ್ನುವುದರ ಬಗ್ಗೆ ಚರ್ಚೆ ನಡೆಸಿದರು. ಹಿರಿಯರಾಗಿ ಸಲಹೆ ನೀಡಿದರು. ಸಂತೋಷ್ ಅವರಿಗೂ ಸಮಾಧಾನ ಇದೆ. 130ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದ್ದೇವೆ ಅಂತ ಭರವಸೆ ಇದೆ ಎಂದರು.
ಗೆಲ್ಲುವ ಆತ್ಮವಿಶ್ವಾಶ ವ್ಯಕ್ತಪಡಿಸಿದ ಬಿಎಸ್ವೈ: ಇವತ್ತಿಂದ ಚುನಾವಣೆ ಮುಗಿಯೋವರೆಗೂ ನನ್ನ ಪ್ರಚಾರ ನಡೆಯಲಿದೆ. ದೇವದುರ್ಗ, ಮಾಯಕೊಂಡ, ಜಗಳೂರಿನಲ್ಲಿ ಪ್ರಚಾರಕ್ಕೆ ಹೋಗುತ್ತಿದ್ದೇವೆ. ವಾತಾವಾರಣ ನಿರೀಕ್ಷೆ ಮೀರಿ ನಮ್ಮಪರ ಇದೆ. ಎಲ್ಲ ಕಡೆ ಬಿಜೆಪಿ ಪರ ಅಲೆ ಇದೆ. ಮೋದಿ, ಅಮಿತ್ ಶಾ ಬಂದು ಹೋದ ಮೇಲೆ ಮತ್ತಷ್ಟು ಅನುಕೂಲ ಆಗಿದೆ. ಯಾರ ಬೆಂಬಲವೂ ಇಲ್ಲದೆ ಸರ್ಕಾರ ರಚನೆ ನಿಶ್ಚಿತ. ದೇವದುರ್ಗಕ್ಕೆ ಹೋದಾಗ ಕಾರ್ಯಕರ್ತರು ಅದ್ದೂರಿ ಸ್ವಾಗತ ಕೋರಿದರು. ಯಾರ ಬೆಂಬಲ ಇಲ್ಲದೇ ಸರ್ಕಾರ ರಚನೆ ಮಾಡುತ್ತೇವೆ ಎಂದರು.
ಇದನ್ನೂ ಓದಿ: ಕಾಂಗ್ರೆಸ್ ಭ್ರಷ್ಟಾಚಾರ ಕುರಿತು ಮಾತನಾಡುವುದೇ ಹಾಸ್ಯಾಸ್ಪದ : ಸಿಎಂ ಬೊಮ್ಮಾಯಿ