ಬೆಂಗಳೂರು: ಮೂರು ತಂಡಗಳಲ್ಲಿ ಮೂರು ಹಂತದ ಸಂಘಟನಾತ್ಮಕ ಪ್ರವಾಸ ಮಾಡಿರುವ ರಾಜ್ಯ ಬಿಜೆಪಿ ತಂಡ ಇಂದು ಬೆಂಗಳೂರಿನಲ್ಲಿ ಸಭೆ ನಡೆಸುತ್ತಿದೆ. ಎರಡು ದಿನಗಳ ಕಾಲ ನಡೆಯಲಿರುವ ಸಭೆಯಲ್ಲಿ ಭವಿಷ್ಯದ ಚುನಾವಣಾ ದೃಷ್ಟಿಯಿಂದ ಸಂಘಟನೆ ಬಲಪಡಿಸುವ ಕುರಿತು ಮಹತ್ವದ ಸಮಾಲೋಚನೆ ನಡೆಸಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದ ಮೊದಲ ತಂಡ ಮೂರು ವಿಭಾಗದಲ್ಲಿ ಸಭೆ ಮುಗಿಸಿ, ಕೊನೆಯದಾಗಿ ಬೆಂಗಳೂರಿನಲ್ಲಿ ಸಭೆ ನಡೆಸುತ್ತಿವೆ.
ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಸಚಿವ ವಿ.ಸೊಮಣ್ಣ, ಸಂಸದ ಪ್ರತಾಪ್ ಸಿಂಹ, ಉಪಾಧ್ಯಕ್ಷೆ ತೇಜಸ್ವಿನಿ ಅನಂತ್ ಕುಮಾರ್ ಇರುವ ತಂಡ ಎರಡು ದಿನ ಬೆಂಗಳೂರು ನಗರ ವಿಭಾಗದ ಸಂಘಟನಾತ್ಮಕ ಸಭೆ ನಡೆಸಲಿದೆ. ಬೆಳಗ್ಗೆ 10.30 ಕ್ಕೆ ಜಯನಗರ ಮೂರನೇ ಬ್ಲಾಕ್ನಲ್ಲಿರುವ ಪ್ರೆಸಿಡೆನ್ಸಿ ಹೋಟೆಲ್ನಲ್ಲಿ ರಾಜ್ಯಾಧ್ಯಕ್ಷ ಕಟೀಲ್ ಸುದ್ದಿಗೋಷ್ಠಿ ನಡೆಸಿ ಸಭೆಯ ವಿವರಗಳನ್ನು ಒದಗಿಸಲಿದ್ದಾರೆ. ಕಳೆದ ಮೂರು ಸಭೆಗಳ ಮಾಹಿತಿ ಹಂಚಿಕೊಳ್ಳಲಿದ್ದಾರೆ.
ಇದನ್ನೂ ಓದಿ: ದ್ವಿತೀಯ ಪಿಯುಸಿ ಪರೀಕ್ಷೆ: ಮೊದಲ ದಿನ 11 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಗೈರು
ಬಳಿಕ ಪಕ್ಷದ ಮುಖಂಡರ ಆಂತರಿಕ ಸಭೆ ನಡೆಸಲಿದ್ದು, ಮಧ್ಯಾಹ್ನ 3 ಗಂಟೆಗೆ ಕ್ಯಾಪಿಟಲ್ ಹೋಟೆಲ್ನಲ್ಲಿ ಬೆಂಗಳೂರು ಕೇಂದ್ರ ಜಿಲ್ಲೆಯ ಕೋರ್ ಕಮಿಟಿ ಸಭೆ ನಡೆಸಲಿದ್ದಾರೆ. ಸಂಜೆ 4.30 ಕ್ಕೆ ಜಿಲ್ಲಾ ಪ್ರಮುಖರ ಸಭೆ ನಡೆಸಲಿದ್ದು, ಸಂಘಟನೆ ಕುರಿತು ವಿಸ್ತೃತವಾದ ಚರ್ಚೆ ನಡೆಸಲಿದ್ದಾರೆ. ಭಾನುವಾರ ಬೆಳಗ್ಗೆ ನಗರದ ಅರಮನೆ ಮೈದಾನದಲ್ಲಿ ಸಮಾರೋಪ ಸಮಾರಂಭದ ರೀತಿಯಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮ ನಡೆಸಲು ಸಿದ್ದತೆ ಮಾಡಿಕೊಳ್ಳಲಾಗಿದೆ.