ಬೆಂಗಳೂರು: ನಮ್ಮ ಸಮೀಕ್ಷೆ ಪ್ರಕಾರ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು 120 ಸ್ಥಾನದಲ್ಲಿ ಗೆಲುವು ಸಾಧಿಸಲಿದೆ. ಇದು ಎಲ್ಲರ ನೇತೃತ್ವದಲ್ಲಿ ನಡೆಯುವ ಚುನಾವಣೆ. ರಾಜ್ಯಕ್ಕೆ ಚುನಾವಣಾ ಪ್ರಚಾರ ನಡೆಸಲು ಕೇಂದ್ರ ಗೃಹಮಂತ್ರಿ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಬರುತ್ತಿರುವ ಹಿನ್ನೆಲೆ ಅಧಿಕ ಸ್ಥಾನಗಳನ್ನು ನಾವು ಗೆಲ್ಲುತ್ತೇವೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಶ್ವಾಸ ವ್ಯಕ್ತಪಡಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಿ ಟಿ ರವಿ ಮಾಂಸ ತಿಂದು ದೇವಾಲಯಕ್ಕೆ ಭೇಟಿ ನೀಡಿದ ವಿಚಾರವಾಗಿ ಪ್ರತಿಕ್ರಿಯಿಸಿದರು. "ಸಿಟಿ ರವಿ ದೇವಾಲಯದ ಒಳಗೆ ಹೋಗಿಲ್ಲ, ಹೊರಗಡೆ ನಿಂತಿದ್ದಾರೆ. ದೇವಾಲಯಗಳಲ್ಲಿ ವ್ಯತ್ಯಾಸವಿದೆ. ಮಾಂಸಹಾರಿ, ಶಾಕಾಹಾರಿ ದೇವಾಲಯಗಳು ಇವೆ. ತಾವು ದೇವಸ್ಥಾನದ ಹೊರಗಡೆ ನಿಂತು ನಮಸ್ಕಾರ ಮಾಡಿದ್ದೇನೆ ಎಂದು ಅವರು ಹೇಳಿದ್ದಾರೆ. ಪ್ರಾಂಗಣದಲ್ಲಿ ಹೋಗೋದು ಬೇರೆ. ದೇವಾಲದ ಒಳಗೆ ಹೋಗೋದು ಬೇರೆ" ಎಂದು ಸ್ಪಷ್ಟಪಡಿಸಿದರು.
7ನೇ ವೇತನ ಆಯೋಗ ಜಾರಿ ವಿಚಾರವಾಗಿ ಮಾತನಾಡಿದ ಅವರು, "ನಿನ್ನೆ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಈ ಕುರಿತು ಒತ್ತಾಯ ಮಾಡಿದ್ದಾರೆ. ಇಂದು ಮುಖ್ಯಮಂತ್ರಿಗಳು ಘೋಷಣೆ ಮಾಡಬಹುದು. ಇವರು ಏನು ಘೋಷಣೆ ಮಾಡಿದರೂ ಮುಂದಿನ ಸರ್ಕಾರ ಅಲ್ಲವಾ 7ನೇ ವೇತನ ಆಯೋಗ ಜಾರಿಗೊಳಿಸೋದು?" ಎಂದು ಯತ್ನಾಳ್ ಪ್ರಶ್ನಿಸಿದರು.
ಇದನ್ನೂ ಓದಿ: ಮಾಂಸ ತಿಂದು ದೇವಾಲಯಕ್ಕೆ ಹೋಗಿಲ್ಲ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಸ್ಪಷ್ಟನೆ
ಸಿ ಟಿ ರವಿ ಮಾಂಸಾಹಾರ ಸೇವಿಸಿ ದೇವರ ದರ್ಶನ ಪಡೆದ ವಿಚಾರವಾಗಿ ಪ್ರತಿಕ್ರಿಯಿಸಿದ ಎಂ.ಪಿ.ರೇಣುಕಾಚಾರ್ಯ, "ಬಿಜೆಪಿ ಪಕ್ಷ ಧರ್ಮ, ಸಂಸ್ಕೃತಿ ಮೇಲೆ ರಾಜಕೀಯ ಮಾಡುತ್ತಿದೆ. ನಾವು ಶುದ್ಧವಾಗಿ ದೇವಸ್ಥಾನಕ್ಕೆ ಹೋಗ್ತಿವಿ ಎಂದು ಸಿ ಟಿ ರವಿ ಹೇಳಿದ್ದಾರೆ. ನಾನು ಮಾಂಸಾಹಾರಿ ಕುಟುಂಬದಲ್ಲಿ ಹುಟ್ಟಿದ್ದೇನೆ ಎಂದು ಅವರು ಮಾಂಸ ತಿಂದು ದೇವಸ್ಥಾನದ ಗರ್ಭಗುಡಿಗೆ ಹೋಗಿಲ್ಲ. ನಾನು ಸಿ ಟಿ ರವಿ ದೇವಸ್ಥಾನಕ್ಕೆ ಹೋಗಿರುವ ವಿಡಿಯೋ ನೋಡಿದ್ದೇನೆ. ಅವರು ದೇವಾಲಯದ ಒಳಗಡೆ ಹೋಗಿಲ್ಲ" ಎಂದು ಸಮರ್ಥಿಸಿಕೊಂಡರು.
ಇದನ್ನೂ ಓದಿ: ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ತೆರಳಿದ ಆರೋಪ ವಿಚಾರ: ಕಾಂಗ್ರೆಸ್ ಕಿಡಿ, ಮಂಡ್ಯದಲ್ಲಿ ಸಿಟಿ ರವಿ ಸ್ಪಷ್ಟನೆ
ಈ ಹಿಂದೆ ಸಿದ್ದರಾಮಯ್ಯ ಕೂಡ ಮಾಂಸ ತಿಂದು ಧರ್ಮಸ್ಥಳಕ್ಕೆ ಹೋಗಿದ್ರು. ಸಿದ್ದರಾಮಯ್ಯ ಮಾಂಸ ತಿಂದ್ದು ದೇವಸ್ಥಾನಕ್ಕೆ ಹೋಗಿದ್ದು ನಿಜ. ಆದರೆ, ಸಿಟಿ ರವಿ ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿಲ್ಲ ಎಂದು ಸಮಜಾಯಿಷಿ ನೀಡಿದರು.
ಇದನ್ನೂ ಓದಿ: ನಾನ್ ವೆಜ್ ತಿಂದಿದ್ದು ಮರೆತಿದ್ದೆ, ಗರ್ಭಗುಡಿಯ ಹೊರಭಾಗದಲ್ಲಿ ನಿಂತಿದ್ದೆ: ಸಿ.ಟಿ.ರವಿ