ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕಾಗಿ ಕಾಂಗ್ರೆಸ್ ನಲ್ಲಿ ತೀವ್ರ ಪೈಪೋಟಿ ಆರಂಭಗೊಂಡಿದ್ದು, ತಾವೇ ಮುಂದಿನ ಮುಖ್ಯಮಂತ್ರಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಘೋಷಣೆ ಕೂಗಿಸಿಕೊಳ್ಳಲು ಸ್ಪರ್ಧೆಗಿಳಿದಿದ್ದಾರೆ. ಕುರ್ಚಿಗಾಗಿ ಕೈಗೆ ರಾಜ್ಯದ ಚುಕ್ಕಾಣಿ ಸಿಕ್ಕರೆ ಏನಾಗಲಿದ ಎಂದು ಯೋಜಿಸಿ ಎಂದು ಬಿಜೆಪಿ ಟ್ವೀಟ್ ಮೂಲಕ ಕಾಂಗ್ರೆಸ್ಗೆ ಟಾಂಗ್ ನೀಡಿದೆ.
ಚುನಾವಣೆ ಮುನ್ನವೇ ಕಾಂಗ್ರೆಸ್ ಪಕ್ಷದ ನಾಯಕರೊಳಗಿನ ಕಾದಾಟ ಮತ್ತೆ ತಾರಕಕ್ಕೇರಿದೆ. ಸಿಎಂ ಕುರ್ಚಿಗಾಗಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಿತ್ಯ ಬೀದಿಕಾಳಗ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಹಣಿಯಲೆಂದೇ ಟಿಕೆಟ್ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿ ಎಂಬ ಹೊಸ ನಿಯಮವನ್ನು ಡಿಕೆಶಿ ಜಾರಿಗೆ ತಂದರು.
ಸಿದ್ದರಾಮಯ್ಯ ಅವರನ್ನು ಸೋಲಿಸಿದರೆ ಮಾತ್ರ ತಾನು ಸಿಎಂ ಆಗಬಹುದು ಎಂದು ಡಿಕೆ ಶಿವಕುಮಾರ್ ಬಲವಾಗಿ ನಂಬಿದ್ದಾರೆ. ಹೀಗಾಗಿ "ಸಿದ್ದು ಕ್ಷೇತ್ರ ನಾಡಿಮಿಡಿತ" ಪರೀಕ್ಷಿಸಲು ಡಿಕೆಶಿ ಅರ್ಜಿ ಸಲ್ಲಿಸುವ ನಿಯಮ ಜಾರಿಗೊಳಿಸಿದರು ಎಂದು ಬಿಜೆಪಿ ಸರಣಿ ಟ್ವೀಟ್ ಮಾಡಿದೆ.
ಕಾಂಗ್ರೆಸ್ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸುವ ಅಂತಿಮ ದಿನವನ್ನು ಎರಡೆರಡು ಬಾರಿ ಮುಂದಕ್ಕೆ ಹಾಕಿದರೂ ಡಿಕೆ ಶಿವಕುಮಾರ್ ಮಾತಿಗೆ ಸಿದ್ದರಾಮಯ್ಯ ಕಿಮ್ಮತ್ತೇ ನೀಡಲಿಲ್ಲ. ಸಿದ್ದರಾಮಯ್ಯ ಅರ್ಜಿ ಸಲ್ಲಿಸಬೇಕಾದರೆ ದೆಹಲಿಯಿಂದಲೇ ಅಪ್ಪಣೆ ಬರಬೇಕಾಯಿತು. ಡಿಕೆಶಿ ರಣತಂತ್ರಕ್ಕೆ ಸಿದ್ದರಾಮಯ್ಯ ನಿರ್ಲ್ಯಕ್ಷದ ಪ್ರತ್ಯುತ್ತರ ನೀಡಿದ್ದೇ? ಹೈಕಮಾಂಡ್ ಒತ್ತಡದಿಂದ.
ಸಿದ್ದರಾಮಯ್ಯ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸುತ್ತಿದ್ದಂತೆ "ಒಬ್ಬರಿಗೆ ಒಂದೇ ಕ್ಷೇತ್ರ" ಎಂಬ ಹೊಸ ನಿಯಮವನ್ನು ಡಿಕೆ ಶಿವಕುಮಾರ್ ಘೋಷಿಸಿದರು. ಸಿದ್ದರಾಮಯ್ಯ ಅವರನ್ನೇ ಗುರಿಯಾಗಿಸಿ ಟಿಕೆಟ್ ಅರ್ಜಿ, ಒಂದೇ ಕ್ಷೇತ್ರದ ಷರತ್ತು ವಿಧಿಸಲಾಗುತ್ತಿದೆ. ಸಿದ್ದರಾಮಯ್ಯ ಅವರೇ, ನಿಮಗೆ ಖೆಡ್ಡಾ ತೋಡುತ್ತಿದ್ದಾರೆ! ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಸಿದ್ದರಾಮಯ್ಯ ಹೋದಲ್ಲೆಲ್ಲಾ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಮಾಡುತ್ತಿದ್ದರು. ಇದನ್ನು ನಿಯಂತ್ರಿಸಲು "ಟಿಕೆಟ್ ಘೋಷಿಸುವ ಅಧಿಕಾರ ಸಿದ್ದರಾಮಯ್ಯ ಅವರಿಗಿಲ್ಲ" ಎನ್ನುವ ಹೇಳಿಕೆಯನ್ನು ಡಿಕೆಶಿ ಘಂಟಾಘೋಷವಾಗಿ ನೀಡಿದರು. ಸಿಎಂ ಕುರ್ಚಿಗಾಗಿ ಶೀತಲ ಸಮರವೇ? ಚುನಾವಣೆಗೂ ಮೊದಲೇ ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಂ ಮ್ಯೂಸಿಕಲ್ ಚೇರ್ ಆರಂಭಗೊಂಡಿದೆ.
ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ತಮಗೆ ತಾವೇ ಮುಂದಿನ ಮುಖ್ಯಮಂತ್ರಿ ಅಂತ ಸಾರ್ವಜನಿಕವಾಗಿ ಘೋಷಣೆ ಮಾಡಿಕೊಳ್ಳುವ ಮೂಲಕ ಬೀದಿ ಜಗಳಕ್ಕೆ ನಿಂತಿದ್ದಾರೆ. ಕುರ್ಚಿಗಾಗಿ ಕಿತ್ತಾಡುವ ಇವರು ರಾಜ್ಯದ ಚುಕ್ಕಾಣಿ ಹಿಡಿದರೆ ರಾಜ್ಯದ ಗತಿ ಏನಾಗಬಹುದು ಯೋಚಿಸಿ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಇದನ್ನೂ ಓದಿ: ಬಿಜೆಪಿಯಲ್ಲಿ ಇರುವವರೆಲ್ಲ ಮೋಸಗಾರರು, ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿದವರು: ಈಶ್ವರ್ ಖಂಡ್ರೆ