ಬೆಂಗಳೂರು : ಮುಂದಿನ ಸಾರ್ವತ್ರಿಕ ಚುನಾವಣೆಗೆ ಬಿಜೆಪಿಯಲ್ಲಿ ಈಗಿನಿಂದಲೇ ಸಿದ್ಧತೆ ಆರಂಭವಾಗಿದ್ದು, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೇರಿ ಪ್ರಮುಖ ನಾಯಕರ ರಾಜ್ಯ ಪ್ರವಾಸಕ್ಕೆ ಕೊನೆಗೂ ಕಾಲ ಕೂಡಿ ಬಂದಿದೆ.
ನವೆಂಬರ್ 12 ರಿಂದ ಬಿಜೆಪಿಯ ಪ್ರಮುಖ ನಾಯಕರು ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಮೂಲಕ ಮಾಜಿ ಸಿಎಂ ಯಡಿಯೂರಪ್ಪ ರಾಜ್ಯ ಪ್ರವಾಸಕ್ಕೆ ಕೊನೆಗೂ ಮುಹೂರ್ತ ನಿಗದಿಯಾಗಿದೆ. ಬಿಜೆಪಿಯ ನಾಲ್ವರು ನಾಯಕರ ನೇತೃತ್ವದಲ್ಲಿ ನಾಲ್ಕು ತಂಡಗಳಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲು ಯೋಜಿಸಲಾಗಿದೆ.
ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಸಿಎಂಗಳಾದ ಜಗದೀಶ್ ಶೆಟ್ಟರ್ ಮತ್ತು ಡಿ.ವಿ. ಸದಾನಂದ ಗೌಡರ ನೇತೃತ್ವದಲ್ಲಿ ರಾಜ್ಯ ಪ್ರವಾಸ ಕೈಗೊಳ್ಳಲಾಗುವುದು. ರಾಜ್ಯದ ನಾಲ್ಕು ಸಂಘಟನಾತ್ಮಕ ವಿಭಾಗಗಳಲ್ಲೂ ಬಿಜೆಪಿ ನಾಯಕರಿಂದ ಪ್ರವಾಸ ನಡೆಯಲಿದೆ.
ನಾಳೆ ರಾಜ್ಯ ಬಿಜೆಪಿ ಕಚೇರಿಯಲ್ಲಿ ಈ ಸಂಬಂಧ ಮಹತ್ವದ ಮಾಧ್ಯಮಗೋಷ್ಠಿ ನಡೆಯಲಿದೆ. ಈ ಮಾಧ್ಯಮಗೋಷ್ಠಿಯಲ್ಲಿ ಬಿಜೆಪಿ ನಾಯಕರ ರಾಜ್ಯ ಪ್ರವಾಸದ ಬ್ಲೂಪ್ರಿಂಟ್ ಪ್ರಕಟವಾಗಲಿದೆ. ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ನಾಳೆ ಈ ಸಂಬಂಧ ಮಾಹಿತಿ ನೀಡಲಿದ್ದಾರೆ.
ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಅತ್ಯಧಿಕ ಸ್ಥಾನ ಗೆಲ್ಲಲು ಪ್ಲಾನ್ ರೂಪಿಸಲಾಗಿದೆ. ಮುಖ್ಯವಾಗಿ 2023 ರ ಸಾರ್ವತ್ರಿಕ ಚುನಾವಣೆಯಲ್ಲಿ ಮಿಷನ್ 140 ಗುರಿ ಇಟ್ಟುಕೊಂಡಿದ್ದು, ಆ ಸಂಬಂಧ ಈಗಲೇ ಪಕ್ಷ ಸಂಘಟನೆಗೆ ಬಿಜೆಪಿ ಸಿದ್ಧವಾಗುತ್ತಿದೆ.
ನವೆಂಬರ್ 9ಕ್ಕೆ ರಾಜ್ಯ ಬಿಜೆಪಿ ಪದಾಧಿಕಾರಿಗಳ ಸಭೆ:
ನವೆಂಬರ್ 9 ರಂದು ರಾಜ್ಯ ಬಿಜೆಪಿ ಪದಾಧಿಕಾರಿಗಳ ಸಭೆ ನಡೆಯಲಿದೆ. ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಈ ಸಭೆ ನಡೆಯಲಿದ್ದು, ರಾಜ್ಯ ಪ್ರವಾಸದ ಬಗ್ಗೆ ಮಹತ್ವದ ಚರ್ಚೆ ನಡೆಯಲಿದೆ ಎನ್ನಲಾಗ್ತಿದೆ.
ನಾಲ್ಕು ತಂಡಗಳಿಂದ ರಾಜ್ಯ ಪ್ರವಾಸ ಬಗ್ಗೆ ಮಹತ್ವದ ಚರ್ಚೆ ನಡೆಯಲಿದೆ. ರಾಜ್ಯ ಪ್ರವಾಸ ಯಶಸ್ವಿಗೊಳಿಸುವ ಬಗ್ಗೆ ಚರ್ಚೆ ನಡೆಯಲಿದೆ. ಪ್ರವಾಸದ ವೇಳೆ ಸಂಘಟನಾತ್ಮಕವಾಗಿ ಬಿಜೆಪಿಯನ್ನು ಮತ್ತಷ್ಟು ಬಲಗೊಳಿಸುವ ಬಗ್ಗೆ ಸಮಾಲೋಚನೆ ನಡೆಯಲಿದೆ. ಉಳಿದಂತೆ ಪಕ್ಷ ಸಂಘಟನೆ, ಉಪಸಮರದ ಫಲಿತಾಂಶದ ಬಗ್ಗೆ ಚರ್ಚೆ ಆಗಲಿದೆ ಎಂದು ತಿಳಿದುಬಂದಿದೆ.