ಚಿಕ್ಕಮಗಳೂರು/ಬೆಂಗಳೂರು: ಭಾರಿ ಕುತೂಹಲ ಮೂಡಿಸಿದ್ದ ಬಿಜೆಪಿಯ ಎರಡನೇ ಪಟ್ಟಿ ಬಿಡುಗಡೆ ಆಗಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಎಸ್ಸಿ ಮೀಸಲು ಕ್ಷೇತ್ರದ ಬಿಜೆಪಿ ಹಾಲಿ ಶಾಸಕ ಎಂ ಪಿ ಕುಮಾರಸ್ವಾಮಿಗೆ ಟಿಕೆಟ್ ಕೈ ತಪ್ಪಿದೆ. ಈ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯಾಗಿ ದೀಪಕ್ ದೊಡ್ಡಯ್ಯ ಅವರನ್ನು ಕಣಕ್ಕಿಳಿಸಲು ಬಿಜೆಪಿ ಹೈಕಮಾಂಡ್ ಘೋಷಿಸಿದೆ. ಇದರಿಂದ ಎಂ ಪಿ ಕುಮಾರಸ್ವಾಮಿ ಅಸಮಾಧಾನಗೊಂಡು, ಶಾಸಕ ಸ್ಥಾನಕ್ಕೆ ಮತ್ತು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಮೂರು ಬಾರಿ ಗೆದ್ದು ಎರಡು ದಶಕಗಳ ಕಾಲ ಬಿಜೆಪಿಯಲ್ಲಿದ್ದ ಎಂಪಿಕೆ ಇದೀಗ ಪರ್ಯಾಯ ರಾಜಕೀಯ ಹಾದಿಗೆ ಮುಂದಾಗಿದ್ದಾರೆ.
ಬಿಜೆಪಿಯಲ್ಲಿ ಬಂಡಾಯದ ಬಿಸಿ ಹೆಚ್ಚಾಗುತ್ತಿದ್ದು ಟಿಕೆಟ್ ವಂಚಿತ ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ಬಿಜೆಪಿಗೆ ಗುಡ್ ಬೈ ಹೇಳಿದ್ದು ಶಾಸಕ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸಿದ್ದಾರೆ.
ಜೈಲು ಶಿಕ್ಷೆಗೆ ಗುರಿಯಾದವರು ಹಾಗು ಗುರುತರ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವವರಿಗೆ ಈ ಬಾರಿ ಟಿಕೆಟ್ ನೀಡದಿರಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ. ಅಂತೆಯೇ ಚೆಕ್ ಬೌನ್ಸ್ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿದ್ದ ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿಗೆ ಟಿಕೆಟ್ ನಿರಾಕರಿಸಿದೆ. 2004, 2008 ಮತ್ತು 2018 ರಲ್ಲಿ ಒಟ್ಟು ಮೂರು ಬಾರಿ ಶಾಸಕರಾಗಿದ್ದ ಕುಮಾರಸ್ವಾಮಿ ಬದಲು ಈ ಬಾರಿ ಹೊಸ ಮುಖಕ್ಕೆ ಮಣೆ ಹಾಕಲಾಗಿದೆ. ಪಕ್ಷದ ಈ ನಿರ್ಧಾರದಿಂದ ಬೇಸರಗೊಂಡಿರುವ ಕುಮಾರಸ್ವಾಮಿ ಬಿಜೆಪಿ ಹಾಗೂ ಶಾಸಕ ಸ್ಥಾನಕ್ಕೆ ವಿದಾಯ ಹೇಳಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ಗೆ ರಾಜೀನಾಮೆ ಪತ್ರ ಬರೆದಿರುವ ಕುಮಾರಸ್ವಾಮಿ, ಪಕ್ಷದಲ್ಲಿನ ಬೆಳವಣಿಗೆಗಳಿಂದ ಬೇಸತ್ತು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದು, ರಾಜೀನಾಮೆಯನ್ನು ಅಂಗೀಕರಿಸುವಂತೆ ಮನವಿ ಮಾಡಿದ್ದಾರೆ. ಅದೇ ರೀತಿ ಸ್ವ ಇಚ್ಚೆಯಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದು ಅಂಗೀಕರಿಸುವಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಅವರಿಗೆ ರಾಜೀನಾಮೆ ಪತ್ರ ಬರೆದಿದ್ದು, ಶಾಸಕರ ಭವನದಲ್ಲಿ ರಾಜೀನಾಮೆ ಪತ್ರಗಳನ್ನು ಪ್ರದರ್ಶಿಸಿ ಸ್ಪೀಕರ್ ಭೇಟಿಯಾಗಲು ಕುಮಾರಸ್ವಾಮಿ ತೆರಳಿದರು.
ಈ ಬಾರಿ ಟಿಕೆಟ್ ಕೈ ತಪ್ಪುವ ಆತಂಕ ಇದ್ದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹಿರಿಯ ನಾಯಕ ಯಡಿಯೂರಪ್ಪ ಅವರನ್ನು ಪದೇ ಪದೇ ಭೇಟಿ ಮಾಡಿ ಟಿಕೆಟ್ ಬೇಡಿಕೆ ಇಟ್ಟಿದ್ದ ಕುಮಾರಸ್ವಾಮಿ ನಿನ್ನೆಯೂ ಮಲ್ಲೇಶ್ವರದಲ್ಲಿರುವ ಪಕ್ಷದ ಕಚೇರಿಗೆ ತೆರಳಿ ನಾಯಕರ ಜೊತೆ ಮಾತುಕತೆ ನಡೆಸಿದ್ದರು. ಆದರೆ ತಡರಾತ್ರಿ ಬಿಡುಗಡೆಯಾದ ಪಟ್ಟಿಯಲ್ಲಿ ದೀಪಕ್ ದೊಡ್ಡಯ್ಯಗೆ ಟಿಕೆಟ್ ಪ್ರಕಟಿಸಿದ ಹಿನ್ನೆಲೆಯಲ್ಲಿ ಇಂದು ಪಕ್ಷ ಮತ್ತು ಶಾಸಕ ಸ್ಥಾನಕ್ಕೆ ಗುಡ್ ಬೈ ಹೇಳಿದ್ದಾರೆ.
ಶಾಸಕ ಎಂಪಿ ಕುಮಾರಸ್ವಾಮಿಗೆ ಟಿಕೆಟ್ ನೀಡಬಾರದೆಂದು ಪಕ್ಷದ ಕಾರ್ಯಕರ್ತರೇ ಪಟ್ಟು ಹಿಡಿದಿದ್ದರು. ಇದರಿಂದ ಹೈಕಮಾಂಡ್, ಕಾರ್ಯಕರ್ತರ ಬೇಡಿಕೆಯಂತೆ ಹೊಸ ಅಭ್ಯರ್ಥಿಯನ್ನು ಘೋಷಿಸಿದೆ. ಮೂಡಿಗೆರೆ ಕ್ಷೇತ್ರದಲ್ಲಿ ಬಿಜೆಪಿಯಿಂದ ಪ್ರಬಲ ಮೂರು ಜನ ಆಕಾಂಕ್ಷಿಗಳಿದ್ದರು. ಹಾಕಿ ಶಾಸಕ ಕುಮಾರಸ್ವಾಮಿ ಸೇರಿ ದೀಪಕ್ ದೊಡ್ಡಯ್ಯ, ವಿಜಯ ಕುಮಾರ್ ಅವರು ಟಿಕೆಟ್ಗಾಗಿ ರೇಸ್ನಲ್ಲಿದ್ದರು. ಆದ್ರೆ ಕೊನೆಗೆ ಹಾಲಿ ಶಾಸಕರನ್ನು ಕೈ ಬಿಟ್ಟು ದೀಪಕ್ ದೊಡ್ಡಯ್ಯ ಅವರಿಗೆ ಪಕ್ಷ ಟಿಕೆಟ್ ನೀಡಿದೆ.
ಇದನ್ನೂ ಓದಿ: ದಾವಣಗೆರೆಯ 7 ಕ್ಷೇತ್ರಗಳಲ್ಲಿ ಬಿಜೆಪಿ ಟಿಕೆಟ್ ಘೋಷಣೆ.. ಮಾಡಾಳ್ ಸೇರಿ ಮೂವರು ಹಾಲಿಗಳಿಗೆ ಕೊಕ್!
ಮೂಡಿಗೆರೆಯಲ್ಲಿ ಕಾಂಗ್ರೆಸ್ನಿಂದ ಬಹುತೇಕ ನಯನ ಮೋಟಮ್ಮ ಅವರಿಗೆ ಟಿಕೆಟ್ ಫೈನಲ್ ಆಗಿತ್ತು. ಆದರೆ ಎಂ ಪಿ ಕುಮಾರಸ್ವಾಮಿ ಕಾಂಗ್ರೆಸ್ ಸೇರಬಹುದು ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ. ಇನ್ನು ಜೆಡಿಎಸ್ ಬಿಡುಗಡೆಗೊಳಿಸಿದ ಮೊದಲ ಪಟ್ಟಿಯಲ್ಲೇ ಮೂಡಿಗೆರೆ ಮಾಜಿ ಶಾಸಕ ಬಿ ಬಿ ನಿಂಗಯ್ಯ ಅವರ ಹೆಸರಿತ್ತು. ಈ ಬಾರಿ ಮೂಡಿಗೆರೆಯಲ್ಲಿ ಜಿದ್ದಾಜಿದ್ದಿ ಏರ್ಪಡುವ ಸಾಧ್ಯತೆ ಹೆಚ್ಚಿದ್ದು, ಎಂ ಪಿ ಕುಮಾರಸ್ವಾಮಿ ಅವರ ಮುಂದಿನ ನಡೆ ಏನು ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಶೆಟ್ಟರ್ ಭವಿಷ್ಯ, ಈಶ್ವರಪ್ಪ ಉತ್ತರಾಧಿಕಾರಿ ಆಯ್ಕೆ ಕಗ್ಗಂಟು: 12 ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಿಸದ ಬಿಜೆಪಿ..!