ಬೆಂಗಳೂರು: ರಾಜ್ಯ ಬಿಜೆಪಿ ಘಟಕದ ನೂತನ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸಂಘಟನೆಯನ್ನು ಪುನರುಜ್ಜೀವನಗೊಳಿಸುವ ಕುರಿತು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯದ ಮಾಜಿ ಉಸ್ತುವಾರಿ ಅರುಣ್ ಸಿಂಗ್ ಜೊತೆ ಮಹತ್ವದ ಮಾತುಕತೆ ನಡೆಸಿದರು.
ನವದೆಹಲಿ ಪ್ರವಾಸದಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಕೇಂದ್ರದ ಪ್ರಮುಖ ನಾಯಕ ಅರುಣ್ ಸಿಂಗ್ ಅವರನ್ನು ಭೇಟಿಯಾದರು. ರಾಜ್ಯದಲ್ಲಿ ಸಂಘಟನೆಯನ್ನು ಪುನರುಜ್ಜೀವನ ಗೊಳಿಸುವ ಕುರಿತು ಫಲಪ್ರದ ಚರ್ಚೆ ನಡೆಸಿದ ವಿಜಯೇಂದ್ರ ಅವರು, ಮುಂದಿನ ಲೋಕಸಭೆ ಚುನಾವಣೆಗೆ ಸಿದ್ದತೆ ನಡೆಸಲು ಪೂರಕವಾಗಿ ಮಾರ್ಗದರ್ಶನ ಪಡೆದುಕೊಂಡರು.
ಸದ್ಯ ರಾಜ್ಯ ಘಟಕದ ನೂತನ ಅಧ್ಯಕ್ಷರಾಗಿರುವ ವಿಜಯೇಂದ್ರ ಪಕ್ಷದ ಪದಾಧಿಕಾರಿಗಳ ಬದಲಾವಣೆ, ಜಿಲ್ಲಾ ಸಮಿತಿಗಳ ಬದಲಾವಣೆ ಕುರಿತು ಚರ್ಚಿಸಿದರು. ಸಂಘಟನಾತ್ಮಕ ಚಟುವಟಿಕೆ ಯಾವ ರೀತಿ ಇರಬೇಕು ಎನ್ನುವ ಕುರಿತು ಮಾರ್ಗದರ್ಶನ ಸ್ವೀಕರಿಸಿದ್ದಾರೆ.
ನಾಲ್ಕೈದು ತಿಂಗಳಲ್ಲಿ ಲೋಕಸಭಾ ಚುನಾವಣೆ ಬರುವ ಹಿನ್ನೆಲೆಯಲ್ಲಿ ಪದಾಧಿಕಾರಿಗಳ ಸಮಗ್ರ ಬದಲಾವಣೆ ಬದಲು ಅಗತ್ಯ ಎನಿಸಿದ ಪ್ರಮುಖ ಕೆಲವರ ಮಾತ್ರ ಬದಲಾವಣೆ ಮಾಡಿ ಇರುವ ತಂಡದೊಂದಿಗೆ ಮುನ್ನಡೆಯುವುದು ಸೂಕ್ತ ಎಂದು ಅರುಣ್ ಸಿಂಗ್ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಈಗಿನಿಂದ ಬೂತ್ ಪ್ರಮುಖರನ್ನು ಸಂಘಟನಾತ್ಮಕ ಚಟುವಟಿಕೆಯಲ್ಲಿ ತೊಡಗುವಂತೆ ಮಾಡಬೇಕು. ಜಿಲ್ಲಾ ಸಮಿತಿಗಳು ಕಾರ್ಯಪ್ರವೃತ್ತವಾಗುವಂತೆ ನೋಡಿಕೊಳ್ಳಬೇಕು. ರಾಜ್ಯ ಸಮಿತಿ ಹೆಚ್ಚಾಗಿ ಕಾರ್ಯಚಟುವಟಿಕೆಯಿಂದ ಇರಬೇಕು, ನಿರಂತರ ಪ್ರವಾಸಗಳು ಇರಲಿ ಎನ್ನುವ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ವೇಳೆ ಅರುಣ್ಸಿಂಗ್ ರಾಜ್ಯ ಬಿಜೆಪಿಯ ಉಸ್ತುವಾರಿಯಾಗಿ ಕಾರ್ಯಭಾರ ಮಾಡಿದ್ದರು. ಹಾಗಾಗಿ ರಾಜ್ಯ ಬಿಜೆಪಿಯ ಸಂಘಟನಾತ್ಮಕ ಚಟುವಟಿಕೆ ಕುರಿತು ಅವರಿಗೆ ಸಮಗ್ರ ಮಾಹಿತಿ ಇರುವ ಕಾರಣದಿಂದ ಅರುಣ್ ಸಿಂಗ್ ಜೊತೆ ರಾಜ್ಯ ರಾಜಕೀಯದ ಕುರಿತು ವಿಜಯೇಂದ್ರ ಮಾತುಕತೆ ನಡೆಸಿದ್ದಾರೆ.
ಯತ್ನಾಳ್ ವಿಷಯ ಚರ್ಚೆ?: ಪದೇ ಪದೇ ಯಡಿಯೂರಪ್ಪ ಹಾಗೂ ತಮ್ಮ ವಿರುದ್ಧ ಹೇಳಿಕೆ ನೀಡಿ ಪಕ್ಷವನ್ನು ಮುಜುಗರಕ್ಕೆ ಸಿಲುಕಿಸುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಚಾರದ ಕುರಿತು ಅರುಣ್ ಸಿಂಗ್ ಜೊತೆ ವಿಜಯೇಂದ್ರ ಮಾತುಕತೆ ನಡೆಸಿರುವ ಸಾಧ್ಯತೆ ಇದೆ ಎನ್ನುವುದನ್ನು ವಿವಿಧ ಮೂಲಗಳು ತಿಳಿಸಿವೆ.
ಇದನ್ನೂಓದಿ: ಕಿತ್ತು ಬಿಸಾಡುವುದಲ್ಲ, ಜೋಡಿಸುವುದು ನನ್ನ ಜವಾಬ್ದಾರಿ: ಸ್ಪೀಕರ್ ಯು.ಟಿ.ಖಾದರ್