ಬೆಂಗಳೂರು: ಯಶವಂತಪುರ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು. ಕೆಂಗೇರಿ ಭಾಗದಲ್ಲಿ ನೂತನ ಹೆರಿಗೆ ಆಸ್ಪತ್ರೆ ಹಾಗೂ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಮಂಜೂರಾತಿ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿರುವುದಾಗಿ ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್ ಸ್ಪಷ್ಟಪಡಿಸಿದ್ದಾರೆ.
ಶಾಸಕ ಎಸ್.ಟಿ ಸೋಮಶೇಖರ್ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕುಮಾರಪಾರ್ಕ್ ಈಸ್ಟ್ನಲ್ಲಿರುವ ಸಿಎಂ ಅಧಿಕೃತ ನಿವಾಸದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಈ ವೇಳೆ ಸೋಮಶೇಖರ್ ತಮ್ಮ ಕ್ಷೇತ್ರದ ಅಭಿವೃದ್ಧಿ ವಿಷಯದ ಬಗ್ಗೆ ಚರ್ಚಿಸಿದ್ದರು. ಜೊತೆಗೆ ವಿವಿಧ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಸಿಎಂಗೆ ಮನವಿ ಪತ್ರ ಸಲ್ಲಿಸಿದ್ದರು.
ಬಳಿಕ 'ಇದು ರಾಜಕೀಯ ಕಾರಣದ ಭೇಟಿಯಲ್ಲ, ಕೇವಲ ಕ್ಷೇತ್ರದ ಅಭಿವೃದ್ಧಿ ವಿಚಾರಕ್ಕೆ ಸೀಮಿತವಾದ ಭೇಟಿ ಎಂದು ಎಸ್ ಟಿ ಸೋಮಶೇಖರ್ ಸ್ಪಷ್ಟನೆ ನೀಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನಂತರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮುಖ್ಯಮಂತ್ರಿಗಳ ನಿವಾಸಕ್ಕೆ ತೆರಳಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಿ ತುರ್ತಾಗಿ ಆಗಬೇಕಿರುವ ಕಾಮಗಾರಿಗಳ ಕುರಿತು ಮನವಿ ಸಲ್ಲಿಸಿದ್ದೇನೆ. ಕೆಂಗೇರಿ ಹೋಬಳಿಯಲ್ಲಿ ಸಣ್ಣ ಹೆರಿಗೆ ಆಸ್ಪತ್ರೆ ಇದ್ದು ಜನಸಂಖ್ಯೆಗೆ ಅನುಗುಣವಾಗಿ ನೂತನವಾಗಿ ಹೆರಿಗೆ ಆಸ್ಪತ್ರೆ ನಿರ್ಮಿಸಲು ಸರ್ ಎಂ.ವಿಶ್ವೇಶ್ವರಯ್ಯ 2ನೇ ಬ್ಲಾಕ್ ಬಡಾವಣೆಯಲ್ಲಿ ಬಿಡಿಎ ವತಿಯಿಂದ 3432 ಚ.ಮೀ.ನಷ್ಟು ಸಿ.ಎ. ನಿವೇಶನ ಮಂಜೂರಾಗಿದೆ.
ಆದರೆ ಹೆರಿಗೆ ಆಸ್ಪತ್ರೆ ನಿರ್ಮಿಸಲು ಬಿಬಿಎಂಪಿ ಮುಂದಾಗಿಲ್ಲ. ಹೆರಿಗೆ ಆಸ್ಪತ್ರೆ ಇಲ್ಲದಿರುವುದರಿಂದ ಹೆಣ್ಣುಮಕ್ಕಳು ನಗರದ ಕೇಂದ್ರ ಭಾಗದಲ್ಲಿರುವ ವಾಣಿವಿಲಾಸ ಆಸ್ಪತ್ರೆಗೆ ತೆರಳುವಂತಾಗಿದೆ. ವಾಣಿವಿಲಾಸ ಆಸ್ಪತ್ರೆ ದೂರವಿರುವುದರಿಂದ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿ ಒಂದು ಲಕ್ಷ ರೂ.ಗಳವರಗೆ ಬಿಲ್ ಪಾವತಿಸಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಹೀಗಾಗಿ ಕೆಂಗೇರಿ ಭಾಗದಲ್ಲಿ ತುರ್ತಾಗಿ ಹೆರಿಗೆ ಆಸ್ಪತ್ರೆ ನಿರ್ಮಾಣಕ್ಕೆ ಬಿಬಿಎಂಪಿಗೆ ಆದೇಶ ನೀಡಬೇಕೆಂದು ಮನವಿ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.
ಜೊತೆಗೆ ಕೆಂಗೇರಿ ಉಪನಗರದಲ್ಲಿರುವ ಎಲ್ಸಿ 10ರಲ್ಲಿ ಅತಿ ಹೆಚ್ಚು ಸಂಚಾರ ದಟ್ಟಣೆ ಉಂಟಾಗುತ್ತಿರುವುದರಿಂದ ಓವರ್ ಬ್ರಿಡ್ಜ್ ನಿರ್ಮಿಸುವಂತೆ ಮೈಲಸಂದ್ರ ಮತ್ತು ಕೆಂಗೇರಿ ಉಪನಗರದ ನಿವಾಸಿಗಳ ಒತ್ತಾಸೆಯಾಗಿದೆ. ಮೇಲ್ಸೇತುವೆ ನಿರ್ಮಾಣದ ಕುರಿತಂತೆ ಸಮೀಕ್ಷೆ ನಡೆಸಿ ವರದಿ ತಯಾರಿಸಿದ್ದು, ಈ ಸಂಬಂಧ ಅಗತ್ಯ ಕ್ರಮಕೈಗೊಳ್ಳುವಂತೆಯೂ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ ಎಂದು ಶಾಸಕ ಎಸ್.ಟಿ ಸೋಮಶೇಖರ್ ತಿಳಿಸಿದ್ದಾರೆ.
ಇದನ್ನೂ ಓದಿ : ಸಿಎಂ ಸಿದ್ದರಾಮಯ್ಯ ಭೇಟಿಯಾದ ಎಸ್ಟಿ ಸೋಮಶೇಖರ್: ಬಿಜೆಪಿಯಲ್ಲಿ ಮತ್ತೆ ಸಂಚಲನ..!