ಬೆಂಗಳೂರು: ಸರ್ಕಾರ ಯಾವುದೇ ಕಾರಣಕ್ಕೂ ಬೀಳಲ್ಲ. ಬಿಜೆಪಿಯವರು ಬೀಳಿಸುವ ಪ್ರಯತ್ನ ನಡೆಸ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪರನ್ನ ಹೊರಗಿಟ್ಟು ಕೇಂದ್ರದವರೇ ಈ ಕೆಲಸ ಮಾಡ್ತಿದ್ದಾರೆ. ಅವರು ಏನೇ ಮಾಡಿದ್ರೂ ಏನೂ ಆಗಲ್ಲ. ಇನ್ನೂ ಏನೇನು ಮಾಡ್ತಾರೋ ನೋಡೋಣ. ಯಡಿಯೂರಪ್ಪಗೆ ಸಿಎಂ ಆಗೋದಷ್ಟೇ ಬೇಕಿದೆ. ನಮಗೂ ಶಕ್ತಿ ಇದೆ. ರಿವರ್ಸ್ ಆಪರೇಷನ್ ನಾವೂ ಮಾಡುತ್ತೆವೆ ಎಂದರು.
ನಮ್ಮಲ್ಲಿ ಯಾರೂ ಅತೃಪ್ತ ಶಾಸಕರಿಲ್ಲ. ನೀವೇ ಕೆಲವು ಶಾಸಕರನ್ನ ತೋರಿಸ್ತೀದ್ದೀರಾ. ಅವರೆಲ್ಲರೂ ನಮ್ಮ ಜೊತೆ ಬಂದಿದ್ದಾರೆ. ಭೀಮಾನಾಯ್ಕ, ಅಮರೇಗೌಡ ಸಹ ಬಂದಿದ್ದಾರೆ. ಮಾನಹಾನಿ ಕೇಸ್ ಹಾಕೋಕೆ ಚಿಂತಿಸ್ತಿದ್ದಾರೆ. ಆನಂದ್ ಸಿಂಗ್, ರಮೇಶ್ ನಮ್ಮ ಸ್ನೇಹಿತರು. ನಿರ್ಧಾರ ತೆಗೆದುಕೊಳ್ಳೋಕೆ ಅವರು ಅರ್ಹರಿದ್ದಾರೆ. ಅದರಿಂದ ಸರ್ಕಾರಕ್ಕೆ ಏನೂ ಸಮಸ್ಯೆಯಾಗಲ್ಲ ಎಂದರು.
ಪಕ್ಷದಲ್ಲಿ ಕೆಲ ತಿಂಗಳಿಂದ ಗೊಂದಲ ಸೃಷ್ಟಿ ಮಾಡಿದ್ದವರು ರಾಜೀನಾಮೆ ನೀಡುತ್ತಿದ್ದಾರೆ. ಅದು ಸ್ಪೀಕರ್ಗೆ ಬಿಟ್ಟ ವಿಚಾರ. ಉಳಿದಂತೆ ಯಾರೂ ಬಿಡಲ್ಲ. ಇವರೆಲ್ಲಾ ಕಾಂಗ್ರೆಸ್ ಪಕ್ಷದ ಚಿಹ್ನೆಯಿಂದ ಗೆದ್ದವರು. ಅನಗತ್ಯವಾಗಿ ದೊಡ್ಡ ಸುದ್ದಿಯನ್ನು ಹಬ್ಬಿಸಿ ಜನರಲ್ಲಿ ಗೊಂದಲವನ್ನುಂಟು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಇದು ಬಿಜೆಪಿಯ ವ್ಯವಸ್ಥಿತ ತಂತ್ರ. ಹೋದವರು ಹೋಗಲಿ, ನಾವು ಯಾರನ್ನು ಕಟ್ಟಿ ಹಾಕಿ ಕೂರುವುದಿಲ್ಲ. ಬೇರೆ ಶಾಸಕರ ಹೆಸರನ್ನು ಪ್ರಸ್ತಾಪ ಮಾಡಿ ತೇಜೋವಧೆ ಮಾಡುವುದನ್ನ ನಿಲ್ಲಿಸಿ ಎಂದರು.