ಬೆಂಗಳೂರು: ರಾಜ್ಯ ಬಿಜೆಪಿಯ ಮಹತ್ವದ ಚಿಂತನಾ ಸಭೆಯು ನಂದಿ ಬೆಟ್ಟದ ತಪ್ಪಲಿನಲ್ಲಿರುವ ದೇವನಹಳ್ಳಿ ಸಮೀಪದ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್ನಲ್ಲಿ ಆರಂಭವಾಗಿದೆ. ಇಡೀ ದಿನ ನಡೆಯಲಿರುವ ಸಭೆಯಲ್ಲಿ ಮುಂದಿನ ಚುನಾವಣೆಗೆ ಸಿದ್ಧತೆ ಆರಂಭಿಸುವ ಕುರಿತು ಮಹತ್ವದ ಯೋಜನೆಗಳನ್ನು ರೂಪಿಸಲಾಗುತ್ತದೆ ಎನ್ನಲಾಗಿದೆ.
ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಂಪುಟ ಸದಸ್ಯರು ಮತ್ತು ಆಹ್ವಾನಿತ ನಾಯಕರು ಆಗಮಿಸಿದರು. ಆರ್‌ಎಸ್ಎಸ್ ನಾಯಕರಾದ ಮುಕುಂದ್, ತಿಪ್ಪೇಸ್ವಾಮಿ, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ನೇತೃತ್ವದಲ್ಲಿ ಸಭೆ ಆರಂಭಗೊಂಡಿದೆ.
ಸರ್ಕಾರದ ವರ್ಚಸ್ಸು ಹೆಚ್ಚಿಸುವ ಬಗ್ಗೆ ಸಮಾಲೋಚನೆ ನಡೆಯಲಿದ್ದು, ಸರ್ಕಾರದ ಸಾಧನೆಗಳ ಪರಾಮರ್ಶೆ, ಸಚಿವರ ಮೌಲ್ಯಮಾಪನ ನಡೆಯಲಿದೆ. ಭವಿಷ್ಯದ ಚುನಾವಣೆಗೆ ಸ್ಪಷ್ಟ ಕಾರ್ಯತಂತ್ರ ರೂಪಿಸುವ ಕುರಿತು ಮಹತ್ವದ ನಿರ್ಧಾರ ಕೈಗೊಳ್ಳಲಾಗುತ್ತದೆ.
ನೋ ಎಂಟ್ರಿ: ನಂದಿ ಬೆಟ್ಟದ ಬಳಿ ಇರುವ ರೆಸಾರ್ಟ್ನಲ್ಲಿ ನಡೆಯುತ್ತಿರುವ ಬಿಜೆಪಿ ಸಭೆಯ ಸ್ಥಳದಲ್ಲಿ ಸಿಎಂ, ಸಚಿವರ ಗನ್ ಮ್ಯಾನ್ ಗಳಿಗೂ ಪ್ರವೇಶ ನಿರಾಕರಿಸಲಾಗಿದೆ. ಬಿಜೆಪಿ ಆಹ್ವಾನಿತ ನಾಯಕರ ಹೊರತುಪಡಿಸಿ ಬೇರೆ ಯಾರಿಗೂ ಪ್ರವೇಶವಿಲ್ಲ. ಹಾಗಾಗಿ ನಾಯಕರನ್ನು ರೆಸಾರ್ಟ್ ಒಳಗೆ ಬಿಟ್ಟು ಗನ್ ಮ್ಯಾನ್ಗಳು ಹಾಗೂ ಕಾರು ಚಾಲಕರು ಹೊರಗಡೆ ಬರುತ್ತಿದ್ದಾರೆ. ರೆಸಾರ್ಟ್ ಒಳಗೆ ಮಾಧ್ಯಮಗಳಿಗೂ ನಿರ್ಬಂಧ ವಿಧಿಸಲಾಗಿದೆ.
ಬಿಗಿ ಭದ್ರತೆ: ಸಭೆ ಹಿನ್ನೆಲೆಯಲ್ಲಿ ರೆಸಾರ್ಟ್ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ರೆಸಾರ್ಟ್ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರ ನಿಯೋಜನೆ ಮಾಡಲಾಗಿದೆ. ಸಿಎಂ, ಸಚಿವರು ಹಾಗೂ ಬಿಜೆಪಿಯ ಪ್ರಮುಖರಿಗೆ ಬಿಟ್ಟು, ರೆಸಾರ್ಟ್ ಒಳಗೆ ಯಾರಿಗೂ ಪ್ರವೇಶ ನೀಡುತ್ತಿಲ್ಲ.
ಇದನ್ನೂ ಓದಿ: 'ಮುಂದಿನ ಸಿಎಂ ಸಿದ್ದರಾಮಯ್ಯ': ಮುದ್ದೇಬಿಹಾಳದಲ್ಲಿ ಅಭಿಮಾನಿಗಳು, ಕಾರ್ಯಕರ್ತರ ಘೋಷಣೆ