ಬೆಂಗಳೂರು: ನಿಮ್ಮ ಎಂಜಿನಿಯರ್ ಹಣದ ಜೊತೆ ಸಿಕ್ಕಿ ಬಿದ್ದಿರಲಿಲ್ಲವೇ? ಪುಟ್ಟರಂಗಶೆಟ್ಟಿ ಪಿ ಎ ಬಳಿ ಆಗ ಹಣ ಪತ್ತೆಯಾಗಿದ್ದು ಏನಾಯಿತು? ನಿಮ್ಮ ಸರ್ಕಾರ ಪ್ರಾಮಾಣಿಕ ಸರ್ಕಾರವೇ? ನಿಮ್ಮ ಎಲ್ಲ ಆರೋಪಗಳನ್ನೂ ನಾವು ನಿರಾಧಾರ ಎಂದು ಸಾಬೀತುಪಡಿಸಲಿದ್ದೇವೆ ಎಂದು ಮಾಜಿ ಸಚಿವ ಸಿ.ಟಿ. ರವಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಶ್ರೀನಿವಾಸಗೌಡ ಅವರು ಬಿಜೆಪಿ ಶಾಸಕರಾದ ಅಶ್ವತ್ಥನಾರಾಯಣ, ವಿಶ್ವನಾಥ್, ಮಾಜಿ ಶಾಸಕ ಸಿ.ಪಿ. ಯೋಗೀಶ್ ವಿರುದ್ಧ ಹಣದ ಆಮಿಷವೊಡ್ಡಿದ ಆರೋಪ ಮಾಡಿದ್ದಾರೆ. ಕಳೆದ ಫೆಬ್ರವರಿಯಲ್ಲಿ 30 ಕೋಟಿ ಹಣದ ಆಮಿಷವೊಡ್ಡಿ ಐದು ಕೋಟಿ ಮುಂಗಡ ಕೊಟ್ಟ ಆರೋಪ ಮಾಡಿದ್ದರು. ಆದರೆ, ಸಮ್ಮಿಶ್ರ ಸರ್ಕಾರ ಉಳಿಸಲು ಸುಳ್ಳು ಹೇಳಿದ್ದೆ ಎಂದಿದ್ದರು. ಎಸಿಬಿ ಮುಂದೆ ಅವರು ಈ ಹೇಳಿಕೆ ನೀಡಿದ್ದರು. ಈ ಕುರಿತಂತೆ ಅವರು ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಅವರ ಬುದ್ಧಿ ಸರಿ ಇದೆಯಾ? ಮಾನಸಿಕ ಸ್ಥಿಮಿತತೆಯ ಪರೀಕ್ಷೆ ಮಾಡುವುದು ಸೂಕ್ತ ಎಂದರು.
ಬಿಜೆಪಿ ಕೆರಳಿಸಲು ಸುಳ್ಳು ಆರೋಪ ಮಾಡಲಿದ್ದಾರೆ ಎನ್ನುವ ಮಾಹಿತಿ ಸಿಕ್ಕ ಹಿನ್ನಲೆ ನಾವು ಅದಕ್ಕೆ ಪ್ರತಿಕ್ರಿಯೆ ಕೊಡದೆ ಮೌನವಾಗಿದ್ದೆವು. ಬೆಳಗ್ಗೆ ಅವರಿಗೆ ಸಿಕ್ಕ ನಿರ್ದೇಶನದ ಪ್ರಕಾರ ನಡೆದುಕೊಂಡಿದ್ದಾರೆ ಎನ್ನುವುದು ಈಗ ಸ್ಪಷ್ಟವಾಗಿದೆ. ಕುಮಾರಸ್ವಾಮಿ ಬಹುಮತ ಕಳೆದುಕಿಂಡಿದ್ದಾರೆ. ಹಾಗಾಗಿ ವಿಶ್ವಾಸಮತ ಸಾಬೀತಿಗೆ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ರಾಜ್ಯಪಾಲರ ನಿರ್ದೇಶನ ಪಾಲಿಸದಿರುವುದು ಸಂವಿಧಾನಕ್ಕೆ ಮಾಡಿದ ದ್ರೋಹ. ರಾಜ್ಯಪಾಲರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ಸಿ ಟಿ ರವಿ ಹೇಳಿದ್ರು.
ಇದೇ ವೇಳೆ ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಸಹ ಮೈತ್ರಿ ಸರ್ಕಾರ ಸಂವಿಧಾನದ ವಿರುದ್ಧ ನಿಲುವು ತಳೆದಿದೆ ಎಂದು ಆರೋಪಿಸಿದರು. ಮೈತ್ರಿ ಸರ್ಕಾರ ನಿನ್ನೆಯ ರೀತಿ ಇಂದೂ ಸದನ ದುರುಪಯೋಗ ಮಾಡಿಕೊಂಡಿದೆ. ಇಂದು ಬಹುಮತ ಸಾಬೀತುಪಡಿಸಲು ರಾಜ್ಯಪಾಲರು ಆದೇಶ ನೀಡಿದ್ದರೂ ಅದನ್ನು ಪಾಲಿಸದೇ ಇವತ್ತು ಸಂವಿಧಾನದ ವಿರುದ್ಧ ನಿಲುವು ತೆಗೆದುಕೊಂಡಿದ್ದಾರೆ. ಸಂಖ್ಯಾ ಬಲ, ನೈತಿಕ ಬಲ ಇಲ್ಲ. ಕಾನೂನು ಬಾಹಿರ ಸರ್ಕಾರ ರಾಜ್ಯದಲ್ಲಿ ಇದೆ ಎಂದು ವಾಗ್ದಾಳಿ ನಡೆಸಿದರು.
ಕೃಷ್ಣ ಬೈರೇಗೌಡರು ರಾಜ್ಯಪಾಲರಿಗೆ ಅಧಿಕಾರ ಇಲ್ಲ ಎಂದಿದ್ದಾರೆ. ಆದರೆ, ಅದು ಸರ್ಕಾರಕ್ಕೆ ಪೂರ್ಣ ಬಹುಮತ ಇದ್ದಾಗ ಮಾತ್ರ. ಆದರೆ, ಬಹುಮತ ಕಳೆದುಕೊಂಡಿರುವುದು ಅವರ ಮುಂದೆ ಬಂದಾಗ ವಿಶ್ವಾಸಮತ ಸಾಬೀತುಪಡಿಸಿ ಎಂದು ಹೇಳುವ ಅಧಿಕಾರ ಅವರಿಗಿದೆ. ಹಿಂದೆ 2010 ರಲ್ಲಿ ಅಂದಿನ ರಾಜ್ಯಪಾಲರಾಗಿದ್ದ ಹಂಸರಾಜ್ ಭಾರದ್ವಾಜ್ ಅವರು ಯಡಿಯೂರಪ್ಪ ಸಿಎಂ ಆಗಿದ್ದಾಗ ಮೂರು ದಿನಗಳಲ್ಲಿ ಬಹುಮತಕ್ಕೆ ಆದೇಶ ನೀಡಿದ್ದರು.
ಅಂದು ಶಾಸಕರು ರಾಜೀನಾಮೆ ನೀಡಿರಲಿಲ್ಲ. ಆದರೂ, ನಾವು ಬಹುಮತ ಸಾಬೀತು ಮಾಡಿದ್ದೆವು. ಆದರೆ, ಈಗ ಶಾಸಕರರು ರಾಜೀನಾಮೆ ನೀಡಿದ್ದಾರೆ. ಆದರೂ, ರಾಜ್ಯಪಾಲರ ನಿರ್ಧಾರದ ವಿರುದ್ಧ ಕಾಂಗ್ರೆಸ್ ನಾಯಕರು ಮಾತನಾಡಿದ್ದಾರೆ. ತಮಗೆ ಬೇಕಾದಾಗ ರಾಜ್ಯಪಾಲರಿಗೆ ಅಧಿಕಾರ ಇದೆ. ತಮಗೆ ಬೇಡವಾದಾಗ ಅಧಿಕಾರ ಇಲ್ಲ ಎನ್ನುವ ದ್ವಿಮುಖ ನೀತಿಯನ್ನು ಕಾಂಗ್ರೆಸ್ ಅನುಸರಿಸುತ್ತಿದೆ ಎಂದು ಬೊಮ್ಮಾಯಿ ಕಿಡಿಕಾರಿದರು.