ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಮ್ಮ ಹುದ್ದೆಯನ್ನು ದುರುಪಯೋಗಪಡಿಸಿಕೊಂಡು ಪೊಲೀಸ್ ಇಲಾಖೆಯಿಂದ ನ್ಯಾಯಾಲಯಕ್ಕೆ ವಂಚನೆ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯ ವಕ್ತಾರ ಮತ್ತು ಮಾಜಿ ಶಾಸಕ ಪಿ.ರಾಜೀವ್ ಆರೋಪಿಸಿದ್ದಾರೆ. ಅಲ್ಲದೆ, ಪೊಲೀಸ್ ಇಲಾಖೆಯನ್ನು ನಿಯಂತ್ರಿಸುವಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿಫಲರಾಗಿದ್ದು, ಇಬ್ಬರೂ ಸಚಿವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ದೂರಿನ ಮರುಸೃಷ್ಟಿಯು ರಾಜ್ಯ ಸರ್ಕಾರ ಪ್ರಾಯೋಜಿತ ದೌರ್ಜನ್ಯ ಎಂದು ಆರೋಪ ಮಾಡಿದರು. ಬೆಳಗಾವಿಯಲ್ಲಿ ಹಲ್ಲೆ ಬಳಿಕ ಕೆಎಲ್‍ಇಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಬಿಜೆಪಿ ಮುಖಂಡ ಪೃಥ್ವಿ ಸಿಂಗ್ ಅವರು 6 ಪುಟಗಳ ದೂರು ದಾಖಲಿಸಿದ್ದರು. ಬಳಿಕ ನಿನ್ನೆ ಪೃಥ್ವಿ ಸಿಂಗ್ ಸಂಶಯಗೊಂಡು ಟ್ರೂ ಕಾಪಿಗೆ ಮನವಿ ಸಲ್ಲಿಸಿದ್ದರು ಎಂದು ರಾಜೀವ್ ತಿಳಿಸಿದರು.
ನಕಲಿ ದೂರಿನ ಕಾಪಿ ಸೃಷ್ಟಿ ಆರೋಪ: ಪೊಲೀಸರಿಗೆ ಕೇಳಿದಾಗ ಎಫ್‍ಐಆರ್ ಪ್ರತಿ, ದೂರಿನ ಪ್ರತಿ ಕೊಡುವುದಿಲ್ಲ. ಹಾಗಾಗಿ ಇಲಾಖೆ ಮೇಲೆ ಸಂಶಯಗೊಂಡು ನ್ಯಾಯಾಲಯದಿಂದ ಟ್ರೂ ಕಾಪಿ ಪಡೆದಿದ್ದಾರೆ. ಆಗ ಪೃಥ್ವಿ ಸಿಂಗ್ ಅವರು 6 ಪುಟಗಳ ದೂರಿನ ಬದಲಾಗಿ ಪೊಲೀಸರು ನಕಲಿ ದೂರಿನ ಕಾಪಿ ಸೃಷ್ಟಿಸಿ, 2 ಪುಟಗಳ ದೂರನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದು ಸ್ಪಷ್ಟಗೊಂಡಿದೆ ಎಂದು ರಾಜೀವ್ ಆರೋಪಿಸಿದರು.
ಇದು ಸಣ್ಣ ಅಪರಾಧವಲ್ಲ, ಸಂವಿಧಾನದ ಉಲ್ಲಂಘನೆ ಹಾಗೂ ಮೂಲಭೂತ ಹಕ್ಕುಗಳ ಉಲ್ಲಂಘನೆ ಆಗಿದೆ ಎಂದು ಆರೋಪಿಸಿದ ರಾಜೀವ್, ಒಬ್ಬ ಬಲಿಪಶು, ಫಿರ್ಯಾದುದಾರನ ದೂರು ಯಥಾವತ್ತಾಗಿ ನ್ಯಾಯಾಲಯಕ್ಕೆ ಹೋಗಬೇಕು. ಅದು ಹೋಗದಿದ್ದರೆ ಪೊಲೀಸರಿಂದ ಅವರ ಮೂಲಭೂತ ಹಕ್ಕುಗಳ ಉಲ್ಲಂಘನೆ ಆದಂತೆ ಎಂದು ಕಿಡಿಕಾರಿದರು. ಭಾರತದ ಇತಿಹಾಸದಲ್ಲೇ ಎಫ್‍ಐಆರ್ ಮರುಸೃಷ್ಟಿ (ಫ್ಯಾಬ್ರಿಕೇಟ್) ಮಾಡಿದ ಪ್ರಕರಣ ಇಲಾಖೆಯಲ್ಲೇ ಇದ್ದ ನಾನು ಇಲ್ಲಿವರೆಗೆ ಕೇಳಿಲ್ಲ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಹೈಕೋರ್ಟ್ ಇದರ ಬಗ್ಗೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ, ಸರ್ಕಾರದ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ರಾಜೀವ್ ಆಗ್ರಹಿಸಿದರು.
ಸಾಬೀತುಪಡಿಸಿದರೆ ಕ್ಷಮೆ ಕೇಳುತ್ತೇನೆಂದ ರಾಜೀವ್: ದಲಿತ ಜನಾಂಗದ ಪೃಥ್ವಿ ಸಿಂಗ್ ಅವರು ಬರೆದು ಕೊಟ್ಟ ಮೂಲ ಸಹಿ ಇರುವ ದೂರನ್ನು ಕೋರ್ಟಿಗೆ ಕಳುಹಿಸಿಲ್ಲ. ಯಾವುದೋ ಸ್ಕ್ಯಾನ್ ಮಾಡಿದ ನಕಲಿ ಮರುಸೃಷ್ಟಿಸಿದ ದಾಖಲೆಯನ್ನು ಕಳುಹಿಸಿದ್ದಾರೆ ಎಂದು ಪಿ.ರಾಜೀವ್ ದೂರಿದರು. ಇದು ಮೂಲ ಎಫ್‍ಐಆರ್ ಎಂದು ಸರ್ಕಾರವು ಸಾಬೀತುಪಡಿಸಿದರೆ, ನಾನು ಮಂಡಿಯೂರಿ ರಾಜ್ಯದ ಜನರ ಕ್ಷಮೆ ಕೇಳುತ್ತೇನೆ. ಇದು ನಕಲಿ ಎಂದು ಸಾಬೀತಾದರೆ ತಕ್ಷಣಕ್ಕೆ ಎರಡೂ ಸಚಿವರಿಂದ ರಾಜೀನಾಮೆ ಪಡೆದುಕೊಳ್ಳಿ ಎಂದು ಸಿಎಂ ಸಿದ್ದರಾಮಯ್ಯಗೆ ಒತ್ತಾಯಿಸಿದ್ದಾರೆ.