ಬೆಂಗಳೂರು: ಹೆಬ್ಬಾಳ ಕ್ಷೇತ್ರದ ಕಾಂಗ್ರೆಸ್ ಶಾಸಕ ಬೈರತಿ ಸುರೇಶ್ ನಗರೋತ್ಥಾನ ಯೋಜನೆಯಡಿ ಸಾಕಷ್ಟು ಭ್ರಷ್ಟಾಚಾರ ಎಸಗಿದ್ದಾರೆ. ಇದರಲ್ಲಿ ಅಧಿಕಾರಿಗಳು ಮತ್ತು ಶಾಸಕರ ಮನೆಗೆ ಹಣ ಹೋಗಿದೆ ಎಂದು ಮಾಜಿ ಸಚಿವ ಕಟ್ಟಾ ಸುಬ್ರಮಣ್ಯನಾಯ್ಡು ಆರೋಪಿಸಿದರು.
ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ಕ್ಷೇತ್ರ ಅವಿವೇಕಿ ಶಾಸಕರನ್ನು ಹೊಂದಿದೆ. ನಾಲ್ಕು ವರ್ಷದಲ್ಲಿ ಅವರ ಸಾಧನೆ ಶೂನ್ಯ. ನಗರೋತ್ಥಾನ ಯೋಜನೆ ಅಡಿಯಲ್ಲಿ 90 ಕೋಟಿಯಂತೆ 450 ಕೋಟಿ ರೂ. ಬಿಡುಗಡೆಯಾಗಿದೆ. ಒಟ್ಟಾರೆ 650 ಕೋಟಿ ರೂ. ವೆಚ್ಚದ 12 ಕಾಮಗಾರಿಗಳಲ್ಲಿ ಮಾತ್ರವೇ ಶೇ.40ರಷ್ಟು ಕೆಲಸವಾಗಿದೆ. ಉಳಿದ ಕೆಲಸ ಮಾಡಿಸಲು ಆಗಿಲ್ಲ. ಇದರಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ದೂರಿದರು.
ಈ ಭ್ರಷ್ಟಾಚಾರದಲ್ಲಿ ಶಾಸಕರು ಶೇ.20ರಷ್ಟು ಕಮಿಷನ್ ಪಡೆಯುತ್ತಿದ್ದಾರೆ. ಅಲ್ಲದೇ, ಅಧಿಕಾರಿಗಳು ಶೇ.30ರಷ್ಟು ಕಮಿಷನ್ ಪಡೆದಿದ್ದಾರೆ. ಎಂಜಿನಿಯರಿಂಗ್ ಕಚೇರಿ ಅಧಿಕಾರಿಗಳು ಕಚೇರಿಗೇ ಬರೋದಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳು ವಿಶೇಷ ತನಿಖೆ ನಡೆಸಿ ಶಾಸಕರನ್ನು ಬಂಧಿಸಬೇಕೆಂದು ಒತ್ತಾಯಿಸಿದರು.
ಇದೇ ವೇಳೆ ಕಟ್ಟಾ ಸುಬ್ರಮಣ್ಯನಾಯ್ಡು ಬೇಲ್ನಲ್ಲಿದ್ದಾರೆ ಎಂಬ ಬೈರತಿ ಸುರೇಶ್ ಹೇಳಿಕೆಗೆ ಪ್ರತಿಕ್ರಿಯಿಸಿ,, ಹೌದು ನಾನು ಬೇಲಲ್ಲಿ ಇದಿನಿ ಏನಿವಾಗ?. ನಾನು ಒಬ್ಬನೆ ಅಲ್ಲ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಡಿ.ಕೆ.ಶಿವಕುಮಾರ್, ಚಿದಂಬರಂ ಎಲ್ಲರೂ ಬೇಲ್ ಮೇಲೆ ಇದ್ದಾರೆ ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ: ಬಿಬಿಎಂಪಿ ವಾರ್ಡ್ ವಿಂಗಡನೆ ವಿರುದ್ಧ ಕೋರ್ಟ್ ಮೆಟ್ಟಿಲೇರುತ್ತೇವೆ: ರಾಮಲಿಂಗಾರೆಡ್ಡಿ