ಬೆಂಗಳೂರು: ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬದ್ಧ ವೈರಿಗಳಂತಿದ್ದ ಬಿಜೆಪಿ ಮತ್ತು ಜೆಡಿಎಸ್ ಮತ್ತೆ ಮೈತ್ರಿಯಾಗಲು ವೇದಿಕೆ ಸಜ್ಜಾಗಿದೆ. ವಿಧಾನಪರಿಷತ್ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ವಿರುದ್ಧ ಬಿಜೆಪಿಯು ಅವಿಶ್ವಾಸ ನಿರ್ಣಯ ಮಂಡಿಸಿದ್ದು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ತೆರವಾಗಲಿರುವ ಸಭಾಪತಿ ಸ್ಥಾನ ಜೆಡಿಎಸ್‍ಗೆ ಬಿಟ್ಟುಕೊಡಲು ಬಿಜೆಪಿ ಸಮ್ಮತಿಸಿದೆ. ಈ ಪ್ರಕಾರವಾಗಿ ಸದನದ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ವಿಧಾನ ಪರಿಷತ್‍ನ ನೂತನ ಸಭಾಪತಿಯಾಗುವುದು ಬಹುತೇಕ ಖಚಿತವಾಗಿದೆ.
ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರ ಸೂಚನೆ ಮೇರೆಗೆ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾದ ಹೊರಟ್ಟಿ ಸಭಾಪತಿ ಸ್ಥಾನವನ್ನು ಜೆಡಿಎಸ್‍ಗೆ ಬಿಟ್ಟುಕೊಡಬೇಕು ಎಂದು ಮನವಿ ಮಾಡಿದ್ದರು.
ಪಕ್ಷದ ಮುಖಂಡರು ಹಾಗೂ ಪರಿಷತ್ ಸದಸ್ಯರ ಜೊತೆ ಸಂಜೆ ಚರ್ಚೆ ನಡೆಸಿ ತಮ್ಮ ನಿಲುವು ತಿಳಿಸುತ್ತೇನೆ ಎಂದು ಯಡಿಯೂರಪ್ಪ ಹೊರಟ್ಟಿಗೆ ತಿಳಿಸಿದ್ದರು. ಅದರಂತೆ ನಿನ್ನೆ ರಾತ್ರಿ ಸಿಎಂ ನೇತೃತ್ವದಲ್ಲಿ ನಡೆದ ಪರಿಷತ್ ಸದಸ್ಯರ ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಂಡಿದ್ದು, ಬಿಜೆಪಿಗೆ ಉಪ ಸಭಾಪತಿ ಸ್ಥಾನ, ಜೆಡಿಎಸ್ಗೆ ಸಭಾಪತಿ ಸ್ಥಾನ ಬಿಟ್ಟುಕೊಡಲು ನಿರ್ಧರಿಸಲಾಗಿದೆ.
ಇಂದು ಉಪಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಸಭಾಪತಿ ಸ್ಥಾನವನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟಿರುವುದರಿಂದ ಉಪ ಸಭಾಪತಿ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ಕೊಡಲು ಜೆಡಿಎಸ್ ತೀರ್ಮಾನಿಸಿದೆ. ಈ ಕುರಿತು ಜೆಡಿಎಸ್ ವರಿಷ್ಠರು ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಬಹುಮತ ಇಲ್ಲದ ಕಾರಣ ಮೇಲ್ಮನೆಯಲ್ಲಿ ಬಿಜೆಪಿಗೆ ಜೆಡಿಎಸ್ ಅನಿವಾರ್ಯವಾಗಿರುವುದರಿಂದ ಜೆಡಿಎಸ್‌ಗೆ ಸಭಾಪತಿ ಸ್ಥಾನ ಬಿಟ್ಟುಕೊಟ್ಟ ಬಿಜೆಪಿ ಉಪಸಭಾಪತಿ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಬಿಜೆಪಿ ಬೆಂಬಲದೊಂದಿಗೆ ಸಭಾಪತಿ ಸ್ಥಾನವನ್ಮು ಜೆಡಿಎಸ್ನ ಹಿರಿಯ ನಾಯಕ ಬಸವರಾಜ ಹೊರಟ್ಟಿ ಅಲಂಕರಿಸಲಿದ್ದು, ಇತ್ತ ಉಪಸಭಾಪತಿ ಚುನಾವಣೆಗೆ ಜೆಡಿಎಸ್ ಬೆಂಬಲದೊಂದಿಗೆ ಪ್ರಾಣೇಶ್ ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆ.
ಕೊಟ್ಟು ತೆಗೆದುಕೊಳ್ಳುವ ಸೂತ್ರದೊಂದಿಗೆ ಬಿಜೆಪಿ- ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ವಿಧಾನಪರಿಷತ್‍ನ ಒಟ್ಟು 75 ಸ್ಥಾನಗಳಲ್ಲಿ ಆಡಳಿತಾರೂಢ ಬಿಜೆಪಿ 33, ಕಾಂಗ್ರೆಸ್ 27, ಜೆಡಿಎಸ್ 13, ಒಬ್ಬ ಪಕ್ಷೇತರ ಹಾಗೂ ಓರ್ವ ಸಭಾಪತಿ ಇದ್ದಾರೆ. ಯಾವುದೇ ಪಕ್ಷ ಸಭಾಪತಿ ಸ್ಥಾನವನ್ನು ಅಲಂಕರಿಸಬೇಕಾದರೆ 38 ಸ್ಥಾನಗಳನ್ನು ಪಡೆಯಬೇಕು. ಪ್ರಸ್ತುತ ಇರುವ ಲೆಕ್ಕಾಚಾರದಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ ಅನಿವಾರ್ಯವಾಗಿದೆ.