ದುರ್ಬಲ ಸಿಎಂ, ದುರ್ಬಲ ಹೈಕಮಾಂಡ್: ಸಿದ್ದರಾಮಯ್ಯ ಕಿಡಿ - high-command-week
ಬಿಜೆಪಿ ಹೈಕಮಾಂಡ್ ವೀಕ್ ಆಗಿದೆ. ದುರ್ಬಲ ಮುಖ್ಯಮಂತ್ರಿ, ದುರ್ಬಲ ಹೈಕಮಾಂಡ್ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು: ಯಡಿಯೂರಪ್ಪ ಬದಲಾವಣೆಗೆ ಚರ್ಚೆ ನಡೆಯುತ್ತಿದೆ, ಇದನ್ನು ನಾನು ಮುಂಚೆನೇ ಹೇಳಿದ್ದೆ. ಯೋಗೇಶ್ವರ್ ಮೇಲೇಕೆ ಕ್ರಮ ತೆಗೆದುಕೊಳ್ಳಲಿಲ್ಲ. ಯತ್ನಾಳ್ ಮೇಲೆ ಏಕೆ ಕ್ರಮ ತೆಗೆದುಕೊಳ್ಳಲಿಲ್ಲ. ಅರುಣ್ ಸಿಂಗ್ ಹೇಳಿದಾಕ್ಷಣ ಅವರ್ಯಾರು ಸುಮ್ಮನಾಗಲ್ಲ. ಬೆಂಕಿ ಇಲ್ಲದೇ ಯಾವ ಹೊಗೆಯೂ ಆಡುವುದಿಲ್ಲ. ನಾಯಕತ್ವ ಬದಲಾವಣೆ ಆಗಬೇಕೆಂದವರ ಮೇಲೆ ಕ್ರಮ ಏಕೆ ತೆಗೆದುಕೊಂಡಿಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು.
ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಬಿಜೆಪಿ ಹೈಕಮಾಂಡ್ ವೀಕ್ ಆಗಿದೆ. ದುರ್ಬಲ ಮುಖ್ಯಮಂತ್ರಿ, ದುರ್ಬಲ ಹೈಕಮಾಂಡ್ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ವಿದ್ಯುತ್ ದರದಲ್ಲಿ ಹೆಚ್ಚಳ ಸರಿಯಲ್ಲ:
ಇದೇ ವೇಳೆ, ಸಿದ್ದರಾಮಯ್ಯ ವಿದ್ಯುತ್ ಬೆಲೆ ಏರಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಕೆಇಆರ್ಸಿಗೆ ಎಸ್ಕಾಂಗಳು ದರ ಏರಿಕೆಗೆ ಮನವಿ ಸಲ್ಲಿಸಿತ್ತು. ಹಾಗಾಗಿ ಸರಾಸರಿ ಯೂನಿಟ್ಗೆ 30 ಪೈಸೆಯಷ್ಟು ವಿದ್ಯುತ್ ದರ ಹೆಚ್ಚಳ ಮಾಡಲಾಗಿದೆ. ಆದರೆ, ಇಂತಹ ಪರಿಸ್ಥಿತಿಯಲ್ಲಿ ದರ ಏರಿಸಿದ್ದು ಸರಿಯಲ್ಲ. ಜನಸಾಮಾನ್ಯರು ಊಟಕ್ಕಾಗಿ ಪರದಾಡ್ತಿದ್ದಾರೆ. ಇದನ್ನು ನಾನು ಖಂಡಿಸುತ್ತೇನೆ ಎಂದರು.
ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಹೆಚ್ಚಾಗಿದೆ. ಹೆಚ್ಚು ಬೆಲೆ ಕೊಟ್ಟು ಕೇಂದ್ರದಿಂದ ವಿದ್ಯುತ್ ತೆಗೆದುಕೊಳ್ತಿದ್ದಾರೆ. ಅದಾನಿ ಕಂಪನಿಯಿಂದ ವಿದ್ಯುತ್ ಖರೀದಿಸ್ತಿದ್ದಾರೆ. ಏಕೆ ಅವರಿಂದ ವಿದ್ಯುತ್ ಖರೀದಿಸಬೇಕು?. ಇಲ್ಲೇ ಹೆಚ್ಚು ಉತ್ಪಾದನೆಯಾಗುತ್ತಿದೆಯಲ್ಲಾ? ಎಂದು ಪ್ರಶ್ನಿಸಿದರು.
ಎಲ್ಲಿದೆ ಅಚ್ಚೇ ದಿನ್?
ಪೆಟ್ರೋಲ್ ಬೆಲೆಯನ್ನೂ ಹೆಚ್ಚಳ ಮಾಡ್ತಾನೇ ಇದ್ದಾರೆ, ಗ್ಯಾಸ್ ಬೆಲೆ ಹೆಚ್ಚಿಸಿದ್ದಾರೆ. ಅಚ್ಚೇದಿನ್ ಆಯೇಗಾ ಅಂತಾರೆ, ಇದೇನಾ ಅಚ್ಚೇದಿನ್?. ನಿರಂತರವಾಗಿ ತೈಲ ಬೆಲೆ ಏರಿಸುತ್ತಲೇ ಬರುತ್ತಿದ್ದಾರೆ. ಆನೇಕ ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ 100 ರೂ. ದಾಟಿದೆ. ಇಷ್ಟೊಂದು ಬೆಲೆ ಯಾವ ಕಾಲದಲ್ಲೂ ಇರಲಿಲ್ಲ ಎಂದು ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಪೆಟ್ರೋಲ್ ಬೆಲೆ ಹೆಚ್ಚಳ ಖಂಡಿಸಿ ಪ್ರತಿಭಟನೆ ಮಾಡುವಂತೆ ಎಐಸಿಸಿ ಸೂಚಿಸಿದೆ. ನಾಳೆಯಿಂದ ಐದು ದಿನಗಳ ಕಾಲ ಪೆಟ್ರೋಲ್ ಬಂಕ್ ಮುಂದೆ ನಾವು ಧರಣಿ ಮಾಡುತ್ತೇವೆ. ದೇಶಾದ್ಯಂತ ಈ ಪ್ರತಿಭಟನೆಯನ್ನು ಮಾಡುತ್ತೇವೆ ಎಂದು ತಿಳಿಸಿದರು.
ಎಲ್ಲಾ ಧಾರ್ಮಿಕ ಕೇಂದ್ರಗಳಿಗೂ ನೆರವು ನೀಡಿ:
ಹಿಂದೂ ದೇಗುಲಗಳಿಗೆ ಮಾತ್ರ ತಸ್ತೀಕ್ ಬಿಡುಗಡೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಹಿಂದೂ ದೇವಾಲಯಗಳಿಗೂ ಕೊಡಿ, ಗುರುಧ್ವಾರ, ಚರ್ಚ್, ಮಸೀದಿಗಳಿಗೂ ಕೊಡಿ ಎಂದು ಆಗ್ರಹಿಸಿದರು.
ಧಾರ್ಮಿಕ ದತ್ತಿ ಇಲಾಖೆಯಿಂದ ಈ ಹಿಂದೆ ಕೊಟ್ಟಂತೆ ಕೊಡಿ, ಸರ್ಕಾರದ ಹಣ ಅಂದರೆ ಜನರ ಹಣ ಸಾರ್ವಜನಿಕವಾಗಿ ಎಲ್ಲರಿಗೂ ಕೊಡಿ. ಜಾತಿ, ಧರ್ಮ ಅಂತ ಭೇದ ಭಾವ ಮಾಡುವುದು ಬೇಡ ಎಂದು ಒತ್ತಾಯಿಸಿದರು.
ಲಸಿಕೆ ಕೊಡುವುದು ಪಕ್ಷದ ಕಾರ್ಯಕ್ರಮವೇ?:
100 ಕೋಟಿ ರೂ. ಲಸಿಕೆಗಾಗಿ ಕೊಡುವ ವಿಚಾರವಾಗಿ ಪ್ರತಿಕ್ರಿಯಿಸಿ, ಲಸಿಕೆ ಕೊಡುವುದು ಪಕ್ಷದ ಕಾರ್ಯಕ್ರಮವೇ?. ಇದು ಪಕ್ಷದ ಕಾರ್ಯಕ್ರಮವಲ್ಲ ಎಂದು ವಾಗ್ದಾಳಿ ನಡೆಸಿದರು.
ನಿಮ್ಮ ಪಕ್ಷದ ಶಾಸಕರು ಕೊಡಲಿ ಬೇಡ ಅನ್ನುತ್ತೇವಾ? ಜಮೀರ್ ಅವರ ಹಣದಲ್ಲಿ ಕೊಡ್ತಿಲ್ವಾ? ನಾನು ನನ್ನ ಹಣದಲ್ಲಿ ಕೊಡ್ತಿಲ್ವಾ? ಇವರಿಂದ ನಾವು ಪಾಠ ಕಲಿಯಬೇಕಾ? ಜನರ ದುಡ್ಡನ್ನ ಜನರಿಗೆ ಕೊಡುವುದಲ್ವೇ ಎಂದು ಪ್ರಶ್ನಿಸಿದರು.
ಹಗರಣ ನಡೆದಿದ್ದರೆ ಸಮಗ್ರ ತನಿಖೆ ನಡೆಸಲಿ:
ಭೂ ಮಾಫಿಯಾದಿಂದ ವರ್ಗಾವಣೆ ಎಂಬ ಸಿಂಧೂರಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಇದರ ಬಗ್ಗೆ ತನಿಖೆ ಮಾಡಲಿ. ಅದೊಂದು ರಾಜಕೀಯ ಪ್ರೇರಿತ ಕ್ರಮವಾಗಿದೆ. ಹಗರಣ ನಡೆದಿದ್ದರೆ ಸಮಗ್ರ ತನಿಖೆ ನಡೆಸಲಿ ಎಂದು ಆಗ್ರಹಿಸಿದರು.
ರಾಜಕಾಲುವೆ ಮೇಲೆ ಕಟ್ಟಡ ಕಟ್ಟಿಲ್ಲ ಅಂದರೆ ಹೇಗೆ? ಕಟ್ಟಿದ್ದರೆ ತನಿಖೆ ಮಾಡಲಿ, ಕಟ್ಟಿದ್ದಾರಾ ಕಟ್ಟಿಲ್ಲವಾ ಎಂಬುದನ್ನು ತನಿಖೆ ಮಾಡಲಿ. ಆಯಮ್ಮ ಹೇಳಿಕೆ ನೀಡಿದ್ದಾಳೆ, ಸಾ.ರಾ.ಮಹೇಶ್ ಹೇಳಿಕೆ ನೀಡಿದ್ದಾರೆ. ಇದರ ಬಗ್ಗೆ ತನಿಖೆಯಾಗಲಿ ದಾಖಲೆಗಳು ಇದನ್ನು ಅರ್ಥ ಮಾಡಿಸುತ್ತವೆ ಎಂದರು.
ಪ್ರತಾಪ್ ಸಿಂಹ ಅಪ್ರಬುದ್ಧ:
ಸಂಸದ ಪ್ರತಾಪ ಸಿಂಹ ಸಿದ್ದರಾಮಯ್ಯಗಾರು ಎಂದು ಸಂಬೋಧಿಸಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪ್ರತಾಪ್ ಸಿಂಹ ತಮಗೂ ತೆಲಗು ಬರುತ್ತೆ ಅಂತಾ ತೋರಿಸಲು ಯತ್ನಿಸಿದ್ದಾರೆ. ಇದು ವ್ಯಂಗ್ಯ ಇರಬಹುದು. ನನಗೆ ಗೊತ್ತಿಲ್ಲ. ಗಾರು ಎಂಬುದನ್ನ ಸೂಕ್ತ ರೀತಿಯಲ್ಲಿ ಸ್ವೀಕರಿಸುತ್ತೇನೆ. ಆದರೆ, ಪಾಪ ಬಹುವಚನದಲ್ಲಿ ಮಾತನಾಡಿದ್ದಾನೆ ಎಂದು ಸೂಚ್ಯವಾಗಿ ತಿರುಗೇಟು ನೀಡಿದರು.
ಮರಿ ಸ್ವಾಮಿಗೆ ಬುದ್ದಿ ಹೇಳಲಿ ಎಂಬ ವಿಚಾರವಾಗಿ ತಿರುಗೇಟು ನೀಡುತ್ತಾ, ಪ್ರತಾಪ್ ಸಿಂಹ ಅಪ್ರಬುದ್ದ ರಾಜಕಾರಣಿ. ಯಾವುದೇ ನಿಲುವಿಲ್ಲ ಅವನಿಗೆ, ಪ್ರತಿ ಬಾರಿ ನಿಲುವು ಬದಲಿಸುತ್ತಾನೆ. ಚಾಮರಾಜನಗರ ಪ್ರಕರಣದಲ್ಲಿ ಸಿಂಧೂರಿ ಪರ ಮಾತನಾಡಿದ್ದರು. ಈ ಹಿಂದೆ ರೋಹಿಣಿ ಸಿಂಧೂರಿಗೆ ಬೆಂಬಲಿಸಿದ್ದು ಯಾರು? ಈಗ ಸ್ವಾರ್ಥಕ್ಕಾಗಿ ವಿರೋಧಿಸುತ್ತಿದ್ದಾರೆ. ಅವನೊಬ್ಬ ಅಪ್ರಭುದ್ದ ರಾಜಕಾರಣಿ ಎಂದು ಟೀಕಿಸಿದರು.