ಬೆಂಗಳೂರು: ಬಿಜೆಪಿಯ ಆಡಳಿತದ ಅವಧಿಯಲ್ಲಿ ಹನುಮನ ಜನ್ಮಸ್ಥಳ ಅಂಜನಾದ್ರಿ ಅಭಿವೃದ್ಧಿಗೆ ಒಂದು ರೂಪಾಯಿ ಹಣ ನೀಡಲಿಲ್ಲ ಎಂದು ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷದ ಶಾಸಕ ಗಾಲಿ ಜನಾರ್ದನ ರೆಡ್ಡಿ ಆರೋಪಿಸಿದ್ದಾರೆ.
ವಿಧಾನಸಭೆಯಲ್ಲಿ ಇಂದು ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ್ದ ಅವರು, ಅಯೋಧ್ಯೆ ರಾಮನ ಜನ್ಮಸ್ಥಳವಾದರೆ ಕೊಪ್ಪಳ ಜಿಲ್ಲೆಯ ಗಂಗಾವತಿ ಕ್ಷೇತ್ರದ ಅಂಜನಾದ್ರಿ ಹನುಮಂತನ ಜನ್ಮಸ್ಥಳ. ಇಲ್ಲಿಗೆ ಆಡಳಿತಾವಧಿಯಲ್ಲಿ ಬಿಜೆಪಿ ಒಂದು ರೂಪಾಯಿಯನ್ನೂ ನೀಡಲಿಲ್ಲ. ಸರ್ಕಾರದ ಕೊನೆ ದಿನಗಳಲ್ಲಿ 120 ಕೋಟಿ ರೂ.ಗಳನ್ನು ಘೋಷಿಸಿದರು. ಇದನ್ನೇ ಆಧಾರವಾಗಿಟ್ಟುಕೊಂಡು ಬಿಜೆಪಿ ಆಡಳಿತದಲ್ಲಿರುವ ಐದಾರು ರಾಜ್ಯಗಳ ಮುಖ್ಯಮಂತ್ರಿಗಳು ಗಂಗಾವತಿಗೆ ಬಂದು ನನ್ನ ವಿರುದ್ಧ ಪ್ರಚಾರ ಮಾಡಿದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಳ್ಳಾರಿಯ ಹಂಪಿ, ಆನೆಗೊಂದಿ ಸೇರಿದಂತೆ ಅನೇಕ ಪ್ರವಾಸಿ ತಾಣಗಳನ್ನು ಸರ್ಕಾರ ನಿರ್ಲಕ್ಷಿಸಿದೆ. ಈ ಭಾಗದ ಪ್ರಮುಖ ಪ್ರವಾಸಿ ತಾಣಗಳಿಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಯಾಣಿಕರು ಬರುತ್ತಾರೆ. ಹೈದರಾಬಾದ್ - ಗೋವಾದಿಂದ ರಸ್ತೆಯಲ್ಲಿ ಬರುವಾಗ ಅಪಘಾತಗಳಾಗುತ್ತಿವೆ. ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಭೂ ಸ್ವಾಧೀನವಾಗಿದೆ. 900 ಎಕರೆ ಸರ್ಕಾರದ ಬಳಿ ಇದೆ. ಅದನ್ನು ಪೂರ್ಣಗೊಳಿಸಬೇಕು. ಹಂಪಿ, ಆನೆಗುಂದಿಗೆ ಖಾಸಗಿ ಸಹಭಾಗಿತ್ವದಲ್ಲಿ ಹಸಿರು ವಲಯ ರಸ್ತೆ ನಿರ್ಮಿಸಬೇಕು ಎಂದು ಸಲಹೆ ನೀಡಿದರು.
ಕಲ್ಯಾಣ ಕರ್ನಾಟಕ ಪಗತಿ ಪಕ್ಷ ಈ ಬಾರಿ ಐದು ಕ್ಷೇತ್ರಗಳಲ್ಲಿ ಗೆಲ್ಲುವ ಅವಕಾಶವಿತ್ತು. ಆದರೆ, ಕಾಂಗ್ರೆಸ್ನ ಅಂಚೆ ಖಾತ್ರಿ ಯೋಜನೆಗಳಿಂದ ನಮಗೆ ಹಿನ್ನಡೆಯಾಗಿದೆ. ನಾನೊಬ್ಬನು ಮಾತ್ರ ಗೆಲ್ಲಲು ಸಾಧ್ಯವಾಯಿತು. ಅಂಜನಾದ್ರಿ ಅಭಿವೃದ್ಧಿಗೆ ಹಿಂದಿನ ಸರ್ಕಾರ ಘೋಷಿಸಿದ 120 ಕೋಟಿ ರೂ.ಗಳ ಜೊತೆಗೆ ಇನ್ನಷ್ಟು ಅನುದಾನ ಸೇರಿಸಿ ಕ್ರಮ ಕೈಗೊಳ್ಳಬೇಕು ಎಂದು ಜನಾರ್ದನ ರೆಡ್ಡಿ ಆಗ್ರಹಿಸಿದರು.
ಗೃಹಜ್ಯೋತಿ ಅರ್ಜಿ ಸ್ವೀಕರಿಸಲು ವಿಶೇಷ ಅಭಿಯಾನ: ಮುಂದಿನ ಎರಡು ತಿಂಗಳ ಬಳಿಕ ಗೃಹಜ್ಯೋತಿ ಯೋಜನೆಗೆ ಅರ್ಜಿ ಸ್ವೀಕರಿಸಲು ವಿಶೇಷ ಅಭಿಯಾನ ಹಮ್ಮಿಕೊಳ್ಳುವುದಾಗಿ ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು. ವಿಧಾನಸಭೆಯಲ್ಲಿ ಇಂದು ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ರಾಜ್ಯದಲ್ಲಿ 2.14 ಕೋಟಿ ವಿದ್ಯುತ್ ಗ್ರಾಹಕರಿಗೆ ಗೃಹಜ್ಯೋತಿ ಸೌಲಭ್ಯ ದೊರೆಯಬೇಕಿದೆ. ಆದರೆ, ಈವರೆಗೂ 1.3 ಕೋಟಿ ಗ್ರಾಹಕರು ಮಾತ್ರ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸದೇ ಇರುವವರ ನಿಟ್ಟಿನಲ್ಲಿ ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ ಎಂದು ಪ್ರಶ್ನಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ಸಚಿವ ಕೆ.ಜೆ.ಜಾರ್ಜ್ ಅರ್ಜಿ ಹಾಕಲು ಯಾವುದೇ ಕಾಲಮಿತಿಯ ಗಡುವನ್ನು ನಿಗದಿ ಮಾಡಿಲ್ಲ. ಕೆಲವರಿಗೆ ಯೋಜನೆ ಸೌಲಭ್ಯ ಅಗತ್ಯ ಇರುವುದಿಲ್ಲ. ಅಂತಹವರಿಗೆ ಬಲವಂತ ಪಡಿಸುವುದಿಲ್ಲ. ಸೌಲಭ್ಯ ಪಡೆಯಲು ಆಸಕ್ತರು ಅರ್ಜಿ ಸಲ್ಲಿಸಲೇಬೇಕೆಂದು ಹೇಳಿದರು. ಕುಟೀರ ಜ್ಯೋತಿ, ಭಾಗ್ಯಜ್ಯೋತಿ ಯೋಜನೆಯಡಿ 40 ಯುನಿಟ್, ಅಮೃತ ಯೋಜನೆಯಡಿ 75 ಯುನಿಟ್ ವಿದ್ಯುತ್ ಅನ್ನು ಉಚಿತವಾಗಿ ಸರಬರಾಜು ಮಾಡಲಾಗುತ್ತಿತ್ತು. ಈಗ ಈ ಫಲಾನುಭವಿಗಳ ವಿದ್ಯುತ್ ಬಳಕೆಯನ್ನು ವಾರ್ಷಿಕ ಸರಾಸರಿ ಪರಿಗಣಿಸಲು ಕಷ್ಟವಾಗುತ್ತದೆ. ಈ ನಿಟ್ಟಿನಲ್ಲಿ ನಿರ್ಧಾರ ತೆಗೆದುಕೊಳ್ಳುವ ಸಂಬಂಧಪಟ್ಟಂತೆ ಮುಖ್ಯಮಂತ್ರಿಯವರಿಗೆ ಕಡತ ರವಾನಿಸುವುದಾಗಿ ತಿಳಿಸಿದರು. ಎರಡು ತಿಂಗಳ ಬಳಿಕ ವಿಶೇಷ ಅಭಿಯಾನದ ಮೂಲಕ ಯೋಜನೆಯನ್ನು ಫಲಾನುಭವಿಗಳಿಗೆ ತಲುಪಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಇದನ್ನೂ ಓದಿ: ಕಾಮಗಾರಿಗಳಿಗೆ ನೀಡಿರುವ ತಡೆಯಾಜ್ಞೆ ತೆರವು ಮಾಡಿ: ಸರ್ಕಾರಕ್ಕೆ ಶಾಸಕ ಜಿ.ಟಿ.ದೇವೇಗೌಡ ಆಗ್ರಹ