ಬೆಂಗಳೂರು: ಆರ್ಎಸ್ಎಸ್ ಅನ್ನು ತಾಲಿಬಾನಿಗಳಿಗೆ ಹೋಲಿಸುವ ಸಿದ್ದರಾಮಯ್ಯಗೆ ತಲೆ ಕೆಟ್ಟಿದೆ. ಅವರನ್ನು ನಿಮಾನ್ಸ್ಗೆ ಸೇರಿಸಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ವಾಗ್ದಾಳಿ ನಡೆಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಆರ್ಎಸ್ಎಸ್ ಸಂಘಟನೆಯನ್ನು ತಾಲಿಬಾನಿಗಳಿಗೆ ಹೋಲಿಕೆ ಮಾಡುವ ಸಿದ್ದರಾಮಯ್ಯಗೆ ತಲೆ ಕೆಟ್ಟಿದೆ. ಅವರನ್ನು ನಿಮಾನ್ಸ್ಗೆ ಸೇರಿಸಬೇಕು. ಅಫ್ಘಾನಿಸ್ತಾನದಲ್ಲಿ ಆಗುವ ಹತ್ಯೆಗಳನ್ನು ಸಿದ್ದರಾಮಯ್ಯ ಒಪ್ಪಿಕೊಳ್ತಾರಾ? ಎಸ್ಡಿಪಿಐಯನ್ನು ಒಪ್ಪಿಕೊಳ್ಳುತ್ತಾರಾ? ದೇಶ ತಾಲಿಬಾನೀಕರಣ ಆಗಬೇಕಾ? ಎಂದು ಪ್ರಶ್ನಿಸಿದರು.
ಹೆಚ್ಡಿಕೆ ಬಾಯಿ ಹರಕೆಯಿಂದ ಹಾಗೇ ಆಗಲಿ:
ಇದೇ ಸಂದರ್ಭ ಆರ್ಎಸ್ಎಸ್ ಸಂಘಟನೆಯಲ್ಲಿ ಐಎಎಸ್, ಐಪಿಎಸ್ ಅಧಿಕಾರಿಗಳಾಗಿದ್ದಾರೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿದ ಅವರು, ಆರ್ಎಸ್ಎಸ್ ಆಡಳಿತ ನಡೆಸುವ ಸಂಸ್ಥೆಯಲ್ಲ. ಸೇವೆ ಮಾಡುವ ಸಂಸ್ಥೆಯಾಗಿದೆ. ಕಾರ್ಯಕರ್ತರಿಗೆ ಸೇವಾ ಮನೋಭಾವ ಬೆಳೆಸುವ ಪ್ರಪಂಚದ ಅತಿ ದೊಡ್ಡ ಸಂಘಟನೆ ಆರ್ಎಸ್ಎಸ್. ಕುಮಾರಸ್ವಾಮಿ ಬಾಯಿ ಹರಕೆಯಿಂದ ಹಾಗಾದಲ್ಲಿ ನಿಜಕ್ಕೂ ಆಗ ದೇಶಕ್ಕೆ ಒಳ್ಳೆದಾಗುತ್ತದೆ ಎಂದರು.
ಆರ್ಎಸ್ಎಸ್ ಎಲ್ಲಿ ಇರತ್ತೋ ಅಲ್ಲಿ ಬಹಳ ಒಳ್ಳೆಯ ಕೆಲಸಗಳಾಗುತ್ತವೆ. ಕುಮಾರಸ್ವಾಮಿ aವರಿಗೆ ಡೌಟ್ ಬೇಡ, ಆರ್ಎಸ್ಎಸ್ ಇರುವುದರಿಂದ ದೇಶದಲ್ಲಿ ಒಳ್ಳೆಯ ಕೆಲಸಗಳಾಗುತ್ತಿವೆ. ಕಾಶ್ಮೀರದಲ್ಲಿ 370ನೇ ವಿಧಿ ಹೋಯ್ತು, ಭಯೋತ್ಪಾದನೆ ನಿರ್ಮೂಲನೆ ಆಯ್ತು, 4000 ಜನ ಅನ್ನೋದು ಬಹಳ ದೊಡ್ಡ ಸಂಖ್ಯೆ, ಕುಮಾರಸ್ವಾಮಿ ಬಾಯಿ ಹರಕೆಯಿಂದ ಅಷ್ಟು ಮಂದಿ ಆರ್ಎಸ್ಎಸ್ನವರು ಐಎಎಸ್, ಐಪಿಎಸ್ ಅಧಿಕಾರಿಗಳಾಗಲಿ. ಆರ್ಎಸ್ಎಸ್ ದೇಶಭಕ್ತ ಸಂಘಟನೆಯಾಗಿದೆ. ನಿಮ್ಮ ಮಕ್ಕಳು ಹಾಗೂ ಮೊಮ್ಮಕ್ಕಳನ್ನು ಆರ್ಎಸ್ಎಸ್ಗೆ ಕಳುಹಿಸಿ ಎಂದರು.
ಬಿ.ವೈ.ವಿಜಯೇಂದ್ರ ಕೈಬಿಟ್ಟಿದ್ದು ಕಣ್ತಪ್ಪಿನಿಂದ ಆಗಿದೆ:
ಸಿಂದಗಿ ಹಾಗೂ ಹಾನಗಲ್ ಉಪಚುನಾವಣೆಯ ಉಸ್ತುವಾರಿ ನೇಮಕ ಪಟ್ಟಿಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಕೈಬಿಟ್ಟಿದ್ದು ಕಣ್ತಪ್ಪಿನಿಂದಾಗಿ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಸ್ಪಷ್ಟನೆ ನೀಡಿದರು.
ವಿಜಯೇಂದ್ರ ಅವರು ಉಪಚುನಾವಣೆಯಲ್ಲಿ ಕೆಲಸ ಮಾಡಿಕೊಂಡು ಬಂದಿದ್ದಾರೆ. ಮಸ್ಕಿ ಉಪಚುನಾವಣೆ, ಮಂಡ್ಯ, ಕೆ.ಆರ್.ಪೇಟೆ, ಶಿರಾದಲ್ಲೂ ಕೆಲಸ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಉದ್ದೇಶಪೂರ್ವಕವಾಗಿ ವಿಜಯೇಂದ್ರ ಹೆಸರು ಕೈಬಿಟ್ಟಿಲ್ಲ. ಅದು ಕಣ್ತಪ್ಪಿನಿಂದಾಗಿ ಆಗಿರುವುದು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅದನ್ನು ತಿದ್ದುಪಡಿ ಮಾಡಿದ್ದಾರೆ ಎಂದರು.