ಬೆಂಗಳೂರು: ವಿಧಾನಸಭೆ ಅಧಿವೇಶನ ಮುಗಿಯುತ್ತಿದ್ದಂತೆ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯಲಿದ್ದು, ಸಂಘಟನಾತ್ಮಕ ನಿರ್ಧಾರಗಳ ಕುರಿತು ಮಹತ್ವದ ಚರ್ಚೆ ನಡೆಯಲಿದೆ. ನಾಯಕರ ರಾಜ್ಯ ಪ್ರವಾಸದ ದಿನಾಂಕದ ಬಗ್ಗೆಯೂ ನಿರ್ಧಾರವಾಗಲಿದೆ.
ಸೆಪ್ಟೆಂಬರ್ 24 ರಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯಲಿದೆ. ಅರಮನೆ ಮೈದಾನದಲ್ಲಿ ನಡೆಯಲಿರುವ ಸಭೆಯಲ್ಲಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಕಾರ್ಯಕಾರಿಣಿ ಸಮಿತಿ ಸದಸ್ಯರು ಭಾಗವಹಿಸಲಿದ್ದಾರೆ.
ಪ್ರತಿ ಎರಡು ತಿಂಗಳಿಗೊಮ್ಮೆ ಒಂದೊಂದು ನಗರದಲ್ಲಿ ನಡೆಯಬೇಕಿರುವ ಕಾರ್ಯಕಾರಿಣಿ ಸಭೆ ಈ ಬಾರಿ ಬೆಂಗಳೂರಿನಲ್ಲಿ ನಡೆಯುತ್ತಿದೆ. ಕೋವಿಡ್, ಮಳೆ ಕಾರಣಕ್ಕೆ ಸ್ವಲ್ಪ ವಿಳಂಬವಾಗಿ ಕಾರ್ಯಕಾರಿಣಿ ನಡೆಯುತ್ತಿದೆ.
ಈ ಹಿಂದೆ ಸೆಪ್ಟೆಂಬರ್ 11ಕ್ಕೆ ನಿಗದಿಯಾಗಿದ್ದ ಸಭೆ ಮಳೆ ಅವಾಂತರದಿಂದ ಜನ ಸಂಕಷ್ಟಕ್ಕೆ ಸಿಲುಕಿದ್ದರಿಂದ ಜನರ ಬಳಿ ನಾಯಕರು ತೆರಳಲು ಕಾರ್ಯಕಾರಿಣಿ ಮುಂದೂಡಿಕೆ ಮಾಡಲಾಗಿತ್ತು. ಇದೀಗ ಅದನ್ನು ಸೆಪ್ಟೆಂಬರ್ 24ಕ್ಕೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ಚುನಾವಣಾ ವರ್ಷವಾಗಿದ್ದು, ಸಂಘಟನೆ ಬಲಪಡಿಸುವುದು, ಸಮಾವೇಶಗಳ ಆಯೋಜನೆ, ಚುನಾವಣಾ ಪ್ರಚಾರ ಕಾರ್ಯಕ್ಕೆ ಸಿದ್ಧತೆ ಸೇರಿದಂತೆ ಹಲವು ವಿಷಯಗಳ ಕುರಿತು ಮಹತ್ವದ ಚರ್ಚೆ ನಡೆಯಲಿದೆ. ಕಟೀಲ್ ಹಾಗೂ ಸಿಎಂ ನೇತೃತ್ವದ ತಂಡಗಳ ರಾಜ್ಯ ಪ್ರವಾಸದ ದಿನಾಂಕವನ್ನೂ ನಿರ್ಧರಿಸಲಾಗುತ್ತದೆ ಎನ್ನಲಾಗಿದೆ.
(ಇದನ್ನೂ ಓದಿ: ಬೆಂಗಳೂರು ಮಳೆ ಹಾನಿಯ ತಪ್ಪಿನ ಹೆಚ್ಚು ಭಾಗ ಬಿಜೆಪಿ ಸರ್ಕಾರಕ್ಕೆ ಸಲ್ಲುತ್ತದೆ: ರಾಮಲಿಂಗಾ ರೆಡ್ಡಿ)