ಬೆಂಗಳೂರು: ನಂಜನಗೂಡು ದೇವಸ್ಥಾನ ತೆರವು ಸಂಬಂಧ ವಿವಿಧ ಪಕ್ಷದ ನಾಯಕರು ವಿಧಾನಸೌಧದಲ್ಲಿ ತಮ್ಮ ಅಸಮಾಧಾನ ಹೊರಹಾಕಿದರು.
ವಿಧಾನಸೌಧದಲ್ಲಿ ಮಾತನಾಡಿದ ಸಿ.ಟಿ.ರವಿ, ಹಬ್ಬದ ದಿನವೇ ದೇವಸ್ಥಾನವನ್ನು ಒಡೆದುಹಾಕೋದು ಅಲ್ಲ. ಇದರ ಬಗ್ಗೆ ಎಲ್ಲಿ ಮಾತಾಡಬೇಕೋ ಅಲ್ಲಿ ಮಾತನಾಡುತ್ತೇನೆ ಎಂದರು.
ಮೈಸೂರು ದೇವಾಲಯ ನೆಲಸಮ ಮಾಡಿರುವುದು ಬಹಳ ದುಃಖದ ವಿಚಾರ. ಈ ಬಗ್ಗೆ ಸಿಎಂ ಹಾಗೂ ಜಿಲ್ಲಾಧಿಕಾರಿಗಳ ಜತೆ ಮಾತಾಡಿದ್ದೇನೆ. ಸುಪ್ರೀಂಕೋರ್ಟ್ ಆದೇಶವನ್ನು ಅನುಷ್ಟಾನ ಮಾಡುವಾಗ ಗೌರವಯುತವಾಗಿ ಮಾಡಬೇಕಿತ್ತು. ಈ ಬಗ್ಗೆ ಮುಖ್ಯಮಂತ್ರಿಯವರ ಜೊತೆ ಪ್ರಧಾನ ಕಾರ್ಯದರ್ಶಿಗಳು ಹಾಗೂ ಮೇಲಾಧಿಕಾರಿಗಳೊಂದಿಗೆ ಚರ್ಚಿಸಲಿದ್ದೇವೆ ಎಂದರು.
ಇದೇ ವೇಳೆ ಮಾತನಾಡಿದ ಬಸನಗೌಡ ಯತ್ನಾಳ್, ಹಿಂದೂ ದೇವಾಲಯಗಳ ತೆರವು ಮಾಡದಿರುವ ಬಗ್ಗೆ ಸಿಎಂ ನಿನ್ನೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಹೇಳಿದ್ದಾರೆ. ಸರ್ಕಾರ ಆದೇಶ ನೀಡದೇ ದೇವಸ್ಥಾನಗಳ ತೆರವು ಮಾಡದಂತೆ ಸೂಚಿಸಲಾಗಿದೆ. ಹಾಗೇನಾದರೂ ಅಧಿಕಾರಿಗಳು ಉದ್ಧಟತನ ತೋರಿದರೆ ಕ್ರಮ ಕೈಗೊಳ್ಳಲಾಗುವುದು ಎಂದರು.
ದೇವಸ್ಥಾನವನ್ನು ಏಕಾಏಕಿ ತೆರವು ಮಾಡಿದ್ದು ಸರಿ ಇಲ್ಲ. ನ್ಯಾಯಾಂಗಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ವಿಧೇಯಕರು. ಇದನ್ನು ನಾವು ಸುಪ್ರಿಂಕೋರ್ಟ್ನಲ್ಲಿ ಪ್ರಶ್ನೆ ಮಾಡಬೇಕೇ ಹೊರತು, ಇಲ್ಲಿ ನಾವು ಆ ಬಗ್ಗೆ ಚರ್ಚೆ ಮಾಡಿ ಪ್ರಯೋಜನವಿಲ್ಲ. ಸುಪ್ರೀಂಕೋರ್ಟ್ ಯಾಕೆ ಈ ಆದೇಶ ಕೊಟ್ಟಿದೆ ಅನ್ನೋದನ್ನು ಚರ್ಚೆ ಮಾಡಬೇಕು ಎಂದು ಜೆಡಿಎಸ್ ಶಾಸಕ ಶಿವಲಿಂಗೇಗೌಡ ತಿಳಿಸಿದರು.
ಸದನದ ಒಳಗಡೆ ನಿಂತು ಚರ್ಚೆ ಮಾಡಬಹುದು. ಹೊರಗಡೆ ನಿಂತು ಸುಪ್ರೀಂಕೋರ್ಟ್ ಆದೇಶವನ್ನು ಚರ್ಚೆ ಮಾಡೋಕೆ ಆಗಲ್ಲ. ಕೋರ್ಟ್ ತೀರ್ಪನ್ನು ಪ್ರಶ್ನೆ ಮಾಡುವ ಅಧಿಕಾರ ಇಲ್ಲ. ಸದನದಲ್ಲಿ ಈ ಬಗ್ಗೆ ಚರ್ಚೆಗೆ ಬಂದ್ರೆ ಮಾತನಾಡುತ್ತೇನೆ ಎಂದರು.
ಇದೇ ವೇಳೆ ಮಾತನಾಡಿದ ಸಾ.ರಾ ಮಹೇಶ್, ಜನರು ಈಗಲೇ ಕೋವಿಡ್ನಿಂದ ನೊಂದಿದ್ದಾರೆ. ಎಲ್ಲರಿಗೂ ಅವರ ಧಾರ್ಮಿಕ ಭಾವನೆಗಳು ಮುಖ್ಯ. ಉಸ್ತುವಾರಿ ಸಚಿವರ ಜತೆ ಮಾತಾಡಿದ್ದೇನೆ. ಎಲ್ಲಾದರು ಒಂದು ಸಭೆ ನಡೆಸಿ ಒಂದು ತೀರ್ಮಾನಕ್ಕೆ ಬನ್ನಿ ಅಂತ ಮನವಿ ಮಾಡಿದ್ದೆ. ಇದು ಧಾರ್ಮಿಕ ವಿಚಾರ. ಅಧಿವೇಶನ ಮುಗಿದ ಬಳಿಕ ಒಂದು ತೀರ್ಮಾನಕ್ಕೆ ಬರುತ್ತೇನೆ. ಕಾನೂನಿನ ವಿಚಾರದಲ್ಲಿ ಅರಿವು ಮೂಡಿಸಬೇಕು ಎಂದರು.
ಇದನ್ನೂ ಓದಿ: ಡಿಸೆಂಬರ್ ಅಂತ್ಯದ ವೇಳೆಗೆ 3 ಲಕ್ಷ ಎಲ್ಇಡಿ ಬೀದಿ ದೀಪ ಅಳವಡಿಕೆ : ಸಿಎಂ ಬಸವರಾಜ ಬೊಮ್ಮಾಯಿ