ಬೆಂಗಳೂರು : ಮಾಜಿ ಸಚಿವ ಎಂಟಿಬಿ ನಾಗರಾಜ ವಿಧಾನ ಪರಿಷತ್ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅಭಿನಂದಿಸಿದರು.
ನಗರದ ಗರುಡಾಚಾರ್ ಪಾಳ್ಯದ ಎಂಟಿಬಿ ನಾಗರಾಜ ಅವರ ನಿವಾಸದಲ್ಲಿ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ನೂತನ ವಿಧಾನಪರಿಷತ್ ಸದಸ್ಯ ಎಂಟಿಬಿ ನಾಗರಾಜ ಅವರಿಗೆ ಹೂಗುಚ್ಛಗಳನ್ನು ನೀಡಿ ಸಿಹಿ ತಿನ್ನಿಸುವ ಮೂಲಕ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಎಂಟಿಬಿ ನಾಗರಾಜ ಅವರು, ಕಳೆದ 6 ತಿಂಗಳ ಹಿಂದೆ ಉಪ ಚುನಾವಣೆಯಲ್ಲಿ ನಾವು ಸೋಲನ್ನು ಅನುಭವಿಸಿದ್ದೆವು.
ಆದ್ದರಿಂದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ನಮಗೆ ಆಶ್ವಾಸನೆ ನೀಡಿದ್ದರು. ಅದರಂತೆ ನಮ್ಮನ್ನು ವಿಧಾನಪರಿಷತ್ ಸದಸ್ಯರಾಗಿ ಆಯ್ಕೆ ಮಾಡಿದ್ದಾರೆ. ಆದ್ದರಿಂದ ನಮ್ಮ ಕಾರ್ಯಕರ್ತರು ಅಭಿಮಾನಿಗಳು ತುಂಬಾ ಖುಷಿಯಾಗಿದ್ದಾರೆ ಎಂದರು. ಮಂದಿನ ದಿನಗಳಲ್ಲಿ ಸಚಿವ ಸ್ಥಾನ ನೀಡಲಿದ್ದಾರೆ. ಅಲ್ಲಿಯವರೆಗೂ ಕಾಯುತ್ತೇವೆ. ಇದೇ ಖಾತೆ ನೀಡಬೇಕು ಎಂದು ನಾನು ಕೇಳಲ್ಲ.
ಅವರು ಯಾವುದೇ ಖಾತೆ ನೀಡಿದರೂ ನಿಭಾಯಿಸುತ್ತೇನೆ. ಕಳೆದ ಬಾರಿ 8 ತಿಂಗಳ ಕಾಲ ಸಚಿವನಾಗಿ ಕೆಲಸ ಮಾಡಿದ್ದೇನೆ. 3 ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಯಾವುದೇ ಖಾತೆ ನೀಡಿದರೂ ಜನರಿಗೆ ಒಳ್ಳೆಯ ಕೆಲಸ ಮಾಡುತ್ತೇನೆ. ಪಕ್ಷ ಸಂಘಟನೆ ಮಾಡಲು ತಾಲೂಕಿನಲ್ಲಿ ಮುಂದಿನ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳಿಸಲು ದುಡಿಯುತ್ತೇನೆ ಎಂದರು.