ಬೆಂಗಳೂರು: ನಗರದ ವ್ಯಕ್ತಿಯೊಬ್ಬರಿಗೆ ಕ್ರಿಪ್ಟೊ ಕರೆನ್ಸಿ ಬಿಟ್ ಕಾಯಿನ್ ಖರೀದಿ ಹೆಸರಲ್ಲಿ 75 ಲಕ್ಷ ರೂಪಾಯಿ ವಂಚಿಸಿರುವ ಬಿಹಾರ ಮೂಲದ ಆರೋಪಿ ಶಾಂತನು ಸಿನ್ಹಾ ಎಂಬುವರಿಗೆ ವಿಚಾರಣಾ ನ್ಯಾಯಾಲಯ ನೀಡಿರುವ ಜಾಮೀನು ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ಪ್ರಕರಣದ ದೂರುದಾರರೂ ಆದ ನಾಗಸಂದ್ರ ನಿವಾಸಿ ಟಿ. ವೆಂಕಟೇಶಮೂರ್ತಿ ಆರೋಪಿಗೆ ನೀಡಿರುವ ಜಾಮೀನು ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಚ್.ಪಿ ಸಂದೇಶ್ ಅವರಿದ್ದ ಏಕ ಸದಸ್ಯ ಪೀಠ ಈ ಆದೇಶ ಹೊರಡಿಸಿದೆ.
ಪೀಠ ತನ್ನ ತೀರ್ಪಿನಲ್ಲಿ, ಪ್ರಕರಣದ ತನಿಖೆ ಬಹುತೇಕ ಪೂರ್ಣಗೊಂಡಿದೆ. ಇದೇ ಪ್ರಕರಣದ ಇತರೆ ನಾಲ್ವರು ಆರೋಪಿಗಳಿಗೆ ಜಾಮೀನು ನೀಡಲಾಗಿದೆ. ಆರೋಪಿ ವಿರುದ್ಧ ಮರಣ ದಂಡನೆ ಮತ್ತು ಜೀವಾವಧಿ ಶಿಕ್ಷೆ ವಿಧಿಸಬಹುದಾದ ಆರೋಪಗಳಿಲ್ಲ. ಹೀಗಾಗಿ ಆರೋಪಿಯನ್ನು ನ್ಯಾಯಾಂಗ ಬಂಧನದಲ್ಲಿ ಇಡುವ ಅಗತ್ಯವೂ ಕಂಡು ಬರುತ್ತಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೇ, ಪೂರ್ವಾನುತಿ ಪಡೆಯದೆ ರಾಜ್ಯಬಿಟ್ಟು ತೆರಳುವಂತಿಲ್ಲ. 2 ತಿಂಗಳ ಕಾಲ ಅಥವಾ ದೋಷಾರೋಪ ಪಟ್ಟಿ ಸಲ್ಲಿಕೆ ಆಗುವವರೆಗೂ 15 ದಿನಕ್ಕೊಮ್ಮೆ ತನಿಖಾಧಿಕಾರಿ ಎದುರು ಹಾಜರಾಗಬೇಕು. ಇಂತಹುದೇ ಕೃತ್ಯಗಳಲ್ಲಿ ಭಾಗಿಯಾಗಬಾರದು ಎಂದು ವಿಚಾರಣಾ ನ್ಯಾಯಾಲಯ ಜಾಮೀನು ನೀಡುವ ವೇಳೆ ಷರತ್ತು ವಿಧಿಸಿದೆ. ಇಂತಹ ಸಂದರ್ಭದಲ್ಲಿ ಜಾಮೀನು ಮಂಜೂರು ಮಾಡಿರುವ ಆದೇಶ ರದ್ದುಪಡಿಸುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ : ಕೈಗಾರಿಕಾ ಪ್ರದೇಶಕ್ಕೆ ಭೂ ಸ್ವಾಧೀನ : ಸಚಿವ ಅಶ್ವತ್ಥ್ ನಾರಾಯಣ್ ಕಾರ್ಯಕ್ರಮದಲ್ಲಿ ರೈತರ ಪ್ರತಿಭಟನೆ
ಆರೋಪವೇನು? ಶಾಂತನು ಸಿನ್ಹಾ ಬಿಟ್ ಕಾಯಿನ್ ಖರೀದಿಸಿ ಲಾಭ ಮಾಡಿಕೊಡುವುದಾಗಿ 75 ಲಕ್ಷ ಹಣ ಪಡೆದು ಹಿಂದಿರುಗಿಸದೆ ವಂಚನೆ ಎಸಗಿದ್ದಾರೆ. ಸುಮಾರು 2500ಕ್ಕೂ ಹೆಚ್ಚು ಜನ ಬಿಟ್‌ಕಾಯಿನ್ ವ್ಯಾಪಾರದಲ್ಲಿ ಹಣ ಹೂಡಿಕೆ ಮಾಡಿದ್ದು, ಸುಮಾರು 1500 ಕೋಟಿ ವಂಚನೆ ಎಸಗಲಾಗಿದೆ ಎಂದು ವೆಂಕಟೇಶ್ ಮೂರ್ತಿ ದೂರು ಸಲ್ಲಿಸಿದ್ದರು.
ಈ ಸಂಬಂಧ ಸಿಐಡಿಯ ಸೈಬರ್ ಕ್ರೈಮ್ ಪೊಲೀಸರು ಬಿಹಾರದ ಪಾಟ್ನಾ ಮೂಲದ ಆರೋಪಿ ಶಾಂತನು ಸಿನ್ಹಾ ಅವರನ್ನು ಬಂಧಿಸಿದ್ದರು. ನೆಲಮಂಗಲದ 1ನೇ ಹೆಚ್ಚವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು ಆರೋಪಿಗೆ ಜಾಮೀನು ನೀಡಿ 2021ರ ಮೇ 5ರಂದು ಆದೇಶಿಸಿತ್ತು. ಈ ಆದೇಶ ರದ್ದುಪಡಿಸಬೇಕು ಎಂದು ಕೋರಿ ದೂರುದಾರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.